ಬೆಂಗಳೂರು: ಚೀನಾದಲ್ಲಿ ಅಪಾಯ ತಂದೊಡ್ಡಿರುವ ಓಮಿಕ್ರಾನ್ ಉಪತಳಿ ಬಿಎಫ್.7 (Coronavirus) ಭಾರತಕ್ಕೂ ಆತಂಕ ತಂದೊಡ್ಡಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ಅವರು ಎಲ್ಲ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿದ್ದು, “ಲಸಿಕೆ ನೀಡಿಕೆ, ವೈದ್ಯಕೀಯ ಮೂಲ ಸೌಕರ್ಯ ಹೆಚ್ಚಳ, ಜೆನೋಮ್ ಸೀಕ್ವೆನ್ಸಿಂಗ್ ಸೇರಿ ಹಲವು ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ” ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
“ಭಾರತದಲ್ಲಿ ಸೋಂಕಿನ ಪ್ರಮಾಣ ಶೇ.0.03ರಷ್ಟು ಇದೆ. ಜನ ಲಸಿಕೆ ಪಡೆದಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಚೀನಾದಲ್ಲಿ ಲಸಿಕಾಕರಣ ಯಶಸ್ವಿಯಾಗಿಲ್ಲ. ವೃದ್ಧರ ಸಂಖ್ಯೆ ಜಾಸ್ತಿ ಇರುವುದರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಆದರೆ, ಭಾರತದಲ್ಲಿ ಹೆಚ್ಚಿನ ಆತಂಕ ಇಲ್ಲ. ಆದರೂ, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ” ಎಂದು ಹೇಳಿದರು.
“ನಮ್ಮಲ್ಲಿರುವ ಆಕ್ಸಿಜನ್ ಘಟಕಗಳ ನಿರ್ವಹಣೆ ಬಗ್ಗೆ ಆಡಿಟ್ ಆಗಬೇಕು. ಡಿಸೆಂಬರ್ 27 ರಂದು ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ಲಿಂಗ್‌ಗೆ ಸೂಚಿಸಿದ್ದಾರೆ. ಕೇಸ್ ಪಾಸಿಟಿವ್ ಬಂದ್ರೆ ಜೆನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಬೇಕು. ಅಂತಾರಾಷ್ಟ್ರೀಯ ಪ್ರಯಾಣಿಕರು ನೆಗೆಟಿವ್ ಸರ್ಟಿಫಿಕೆಟ್ ತರಲು ಸಲಹೆ ನೀಡಿದ್ದೇನೆ. ಹೊಸ ತಳಿ ಒಬ್ಬರಿಂದ 17 ಜನರಿಗೆ ಹರಡುತ್ತದೆ. ಹೊಸ ತಳಿಯನ್ನು ತಡೆಯಲು ಹೆಚ್ಚು ಪ್ರಾಶಸ್ತ್ಯ ಕೊಡಬೇಕು. ಹಾಗಾಗಿ, ತಪಾಸಣೆ ಹೆಚ್ಚಿಸುವ ಕುರಿತು ಸೂಚಿಸಿದ್ದಾರೆ. ಕರ್ನಾಟಕದಲ್ಲಿ ಲಸಿಕಾಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ” ಎಂದರು.
ಇದನ್ನೂ ಓದಿ | Coronavirus | ಸಂಸತ್ತಿನಲ್ಲಿ ಮೋದಿ ಸೇರಿ ಹಲವು ಸದಸ್ಯರಿಂದ ಮಾಸ್ಕ್ ಧಾರಣೆ, ಜನರಿಗೂ ಸಂದೇಶ ರವಾನೆ