ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ (Valmiki Corporation Scam) ಭ್ರಷ್ಟಾಚಾರ ಆರೋಪಗಳು ಕೇಳಿಬಂದಿದ್ದರಿಂದ ಯುವಜನ ಸೇವಾ, ಕ್ರೀಡಾ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ (B Nagendra) ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಗುರುವಾರ ರಾತ್ರಿ ಭೇಟಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದರು. ಇದರಿಂದ ಸಿದ್ದರಾಮಯ್ಯ ಸರ್ಕಾರದಲ್ಲಿ ಮೊದಲ ವಿಕೆಟ್ ಪತನವಾದಂತಾಗಿದೆ.
ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಉಪಸ್ಥಿತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ನಾಗೇಂದ್ರ ರಾಜೀನಾಮೆ ಪತ್ರ ನೀಡಿದರು. ರಾಜೀನಾಮೆ ಪತ್ರದಲ್ಲಿ ಒಂದೇ ಸಾಲು ಬರೆದಿರುವುದು ಕಂಡುಬಂದಿದ್ದು, ನನ್ನ ಸ್ವ ಇಚ್ಛೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ನಾಗೇಂದ್ರ ಬರೆದಿದ್ದಾರೆ.
ಇದಕ್ಕೂ ಮೊದಲು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ನಾಗೇಂದ್ರ ಅವರು, ರಾಜೀನಾಮೆ ನೀಡುವುದು ನನ್ನ ಸ್ವ ನಿರ್ಧಾರವಾಗಿದೆ. ಇದಕ್ಕಾಗಿ ಯಾರೂ ಒತ್ತಡ ಹಾಕಿಲ್ಲ. ಆತ್ಮ ಸಾಕ್ಷಿಯಾಗಿ ರಾಜೀನಾಮೆ ನೀಡುತ್ತಿದ್ದೇನೆ. ನಾನು ಯಾವ ತಪ್ಪೂ ಮಾಡಿಲ್ಲ, ನಾನು ನಿರ್ದೋಷಿ. ಪ್ರಕರಣದಲ್ಲಿ ತನಿಖೆ ನಡೆದು ಸತ್ಯಾಂಶ ಜನರಿಗೆ ತಿಳಿಯಲಿದೆ ಎಂದು ತಿಳಿಸಿದ್ದರು.
ಕಳೆದ ಹತ್ತು ದಿನಗಳಿಂದ ವಾಲ್ಮೀಕಿ ನಿಗಮ ಅಕ್ರಮದ (Valmiki Corporation Scam) ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ವಿಪಕ್ಷದವರು ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧಿಕಾರಿ ಕೂಡ ನನ್ನ ಹೆಸರನ್ನು ಎಲ್ಲೂ ಪ್ರಸ್ತಾಪ ಮಾಡಿಲ್ಲ. ನನಗೆ ಯಾರ ಒತ್ತಡಕ್ಕೂ ಮಣಿದಿಲ್ಲ, ನಿಸ್ಪಕ್ಷಪಾತವಾಗಿ ತನಿಖೆ ನಡೆಯಲು ಸಚಿವ ಸ್ಥಾನಕ್ಕೆ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುತ್ತಿದ್ದೇನೆ. ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ತರುವುದು ಬೇಡ ಎಂದು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ನಾಯಕರು ರಾಜಭವನ ಚಲೋ ನಡೆಸಿ, ರಾಜ್ಯಪಾಲರಿಗೆ ಗುರುವಾರ ಬೆಳಗ್ಗೆ ಮನವಿ ಪತ್ರಸಲ್ಲಿಸಿದ್ದರು. ನಂತರ ಸಚಿವ ಸ್ವಯಂ ಪ್ರೇರಿತವಾಗಿಯೇ ರಾಜೀನಾಮೆ ನೀಡಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದರು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ | Lok Sabha Election 2024: ಈ 17 ಸಂಸದರು ಎನ್‌ಡಿಎಯಲ್ಲೂ ಇಲ್ಲ, ಇಂಡಿ ಕೂಟದಲ್ಲೂ ಇಲ್ಲ!
ಏನಿದು ಪ್ರಕರಣ?
ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರು ಮೇ 26ರಂದು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದ 187 ಕೋಟಿ ರೂ.ಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ, ಇದರಲ್ಲಿ 88 ಕೋಟಿ ಹಣ ದುರುಪಯೋಗವಾಗಿದೆ ಎಂದು ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದರು. ಹೀಗಾಗಿ ಎಂಡಿ ಮತ್ತು ಲೆಕ್ಕಾಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ನಂತರ ಅಧಿಕಾರಿಗಳ ಬಂಧನವಾಗಿತ್ತು.
ಚಂದ್ರಶೇಖರ್ ಬರೆದಿರುವ ಡೆತ್ ನೋಟ್‌ನಲ್ಲಿ ಎಂಡಿ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಹಾಗೂ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಸುಚಿಸ್ಮಿತಾ ಅವರೇ ನನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದರು. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಂಡಿ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್‌ರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ವಾಲ್ಮೀಕಿ ನಿಗಮಕ್ಕೆ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆ. ಆರ್. ರಾಜ್ ಕುಮಾರ್ ಅವರನ್ನು ನೇಮಿಸಿದೆ.
ಇದನ್ನೂ ಓದಿ | Prajwal Revanna Case : ಪೆನ್ಡ್ರೈವ್ ಸಾರ್ವಜನಿಕ ಸ್ಥಳಗಳಲ್ಲಿ ಸಿಗುವುದರಿಂದ ಹಿಡಿದು ಪ್ರಜ್ವಲ್ ಬಂಧನದವರೆಗೆ; ಪ್ರಕರಣದ ಟೈಮ್ಲೈನ್ ಇಲ್ಲಿದೆ
ಪ್ರಕರಣದಲ್ಲಿ ಸರ್ಕಾರದ ಪೂರ್ವ ಅನುಮತಿ ಪಡೆದು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂ.ಡಿ & ಸಿಇಒ ಹಾಗೂ ಎಲ್ಲಾ ನಿರ್ದೇಶಕರು ಸೇರಿ 6 ಬ್ಯಾಂಕ್ ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು 88 ಕೋಟಿ ದುರುಪಯೋಗ ಹಣವನ್ನು ಈಗಾಗಲೇ ಮುಖ್ಯ ಖಾತೆಗೆ ಅಧಿಕಾರಿಗಳು ವಾಪಸ್ ಪಡೆಯುತ್ತಿದ್ದಾರೆ. ಶಿವಮೊಗ್ಗ ಮತ್ತು ಬೆಂಗಳೂರಿನ ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.