Site icon Vistara News

Valmiki Corporation Scam: ತಲೆಮರೆಸಿಕೊಂಡಿದ್ದ ಶಾಸಕ ದದ್ದಲ್ ರಾಯಚೂರಿನಲ್ಲಿ ಪ್ರತ್ಯಕ್ಷ

Valmiki Corporation Scam

Valmiki Corporation Scam

ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Corporation Scam) ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ (SIT Enquiry) ಎದುರಿಸುತ್ತಿರುವ ಕಾಂಗ್ರೆಸ್‌ ಶಾಸಕ (Congress MLA) ಬಸವನಗೌಡ ದದ್ದಲ್‌ (Basavanagowda Daddal) ಸದ್ಯ ರಾಯಚೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಶುಕ್ರವಾರ ಇಡೀ ದಿನ ಜಾರಿ ನಿರ್ದೇಶನಾಲಯ (Enforcement Directorate) ಅಧಿಕಾರಿಗಳ ಕೈಯಿಂದ ಪಾರಾಗಲು ಎಸ್‌ಐಟಿ (SIT) ಮುಂದೆ ಕುಳಿತಿದ್ದ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್‌ ಶುಕ್ರವಾರ ರಾತ್ರಿ ವಿಚಾರಣೆ ಮುಗಿದ ಕೂಡಲೇ ನಾಪತ್ತೆಯಾಗಿದ್ದರು. ಇದೀಗ ರಾಯಚೂರಿನಲ್ಲಿ ಪತ್ತೆಯಾಗಿದ್ದಾರೆ.

ಸದ್ಯ ಅವರು ರಾಯಚೂರಿನ ತಮ್ಮ ಮನೆಯಿಂದ ಮಂತ್ರಾಲಯದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಎದುರಾಗಿರುವ ಸಂಕಷ್ಟಗಳಿಂದ ಪಾರು ಮಾಡುವಂತೆ ರಾಯರ ಮೊರೆ ಹೋಗಲು ಅವರು ಮಂತ್ರಾಲಯದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಮನೆಗಳ ಮೇಲೆ ಇಡಿ ದಾಳಿ

ಶುಕ್ರವಾರ ವಿಚಾರಣೆಗೆ ಬರುವಂತೆ ದದ್ದಲ್‌ ಅವರಿಗೆ ಎಸ್ಐಟಿ ನೋಟಿಸ್‌ ನೀಡಿತ್ತು. ಅತ್ತ ಇಡಿ ತಂಡ ಕೂಡ ದದ್ದಲ್‌ ಮನೆಗಳ ಮೇಲೆ ದಾಳಿ ನಡೆಸಿದ್ದು, ಅವರನ್ನು ಪ್ರಶ್ನಿಸಿತ್ತು. ಇಡಿ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದೆ ತತ್ತರಿಸಿದ್ದ ದದ್ದಲ್‌, ಎಸ್‌ಐಟಿ ನೆವ ಮಾಡಿ ಹೊರಬಿದ್ದವರು ಆ ಬಳಿಕ ಮನೆಗೂ ಮರಳಿರಲಿಲ್ಲ. ಇತ್ತ ರಾಯಚೂರಿನ ಅವರ ಮನೆಯಲ್ಲಿ ಅವರಿಗಾಗಿಯೇ ಕಾಯುತ್ತಿದ್ದ ಇಡಿ ಅಧಿಕಾರಿಗಳು ನಂತರ ಅಲ್ಲಿಂದ ಖಾಲಿ ಕೈಯಲ್ಲಿ ತೆರಳಿದ್ದರು.

ಶುಕ್ರವಾರ ಬೆಳಗ್ಗೆ ದದ್ದಲ್ ವಶಕ್ಕೆ ಪಡೆಯಲು ಹುಡುಕಾಟ ನಡೆಸಿದ್ದ ಇಡಿ ಅಧಿಕಾರಿಗಳು, ನಂತರ ಎಸ್ಐಟಿ ಕಚೇರಿಗೆ ಆಗಮಿಸಿದ್ದರು. ಆದರೆ ಎಸ್ಐಟಿ ಅಧಿಕಾರಿಗಳು ದದ್ದಲ್‌ ಅವರನ್ನು ಹೊರಗಡೆ ಬಿಟ್ಟಿರಲೇ ಇಲ್ಲ. ಸುಮಾರು 8 ಗಂಟೆಗಳ ಕಾಲ ವಿಚಾರಣೆ ಎದುರಿಸಿ ಸಂಜೆ ಅಲ್ಲಿಂದ ದದ್ದಲ್‌ ಹೊರಟಿದ್ದರು. ಮತ್ತೆ ಕರೆದಾಗ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಸೂಚಿಸಿತ್ತು. ಸಿಐಡಿ ಕಚೇರಿಯಿಂದ ತೆರಳಿದ ಶಾಸಕ ಆ ಬಳಿಕ ಕಣ್ಮರೆಯಾಗಿದ್ದರು.

ಇದೀಗ ಮಾಜಿ ಸಚಿವ ನಾಗೇಂದ್ರ ವಾಲ್ಮೀಕಿ ನಿಗಮ ಹಗರಣದಲ್ಲಿ ಇಡಿ ಇಕ್ಕಳಕ್ಕೆ ಸಿಲುಕಿದ್ದಾರೆ. ಇಡಿ ಅಧಿಕಾರಿಗಳಿಂದ ಮಾಜಿ‌ ಸಚಿವ ನಾಗೇಂದ್ರ ಬಂಧನ ಆಗಿರುವ ಹಿನ್ನೆಲೆಯಲ್ಲಿ, ಬಸವನ ಗೌಡ ದದ್ದಲ್‌ ಅವರಿಗೂ ಭಯ ಶುರುವಾಗಿದೆ. ರಾಯಚೂರು ಹಾಗೂ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಇಡಿ ತಂಡಗಳು, ದದ್ದಲ್ ಫೋನ್ ಅನ್ನು ಟ್ರ್ಯಾಪ್ ಮಾಡುತ್ತಿದೆ. ದದ್ದಲ್ ಪ್ರತಿ ಚಲನವಲದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.

ಇದನ್ನೂ ಓದಿ: Valmiki Corporation Scam: ವಾಲ್ಮೀಕಿ ನಿಗಮ ಹಗರಣ; ದದ್ದಲ್‌ ಮಗನಿಗೂ ಇಡಿ ಉರುಳು?

ಎಸ್ಐಟಿ ವಿಚಾರಣೆ ಮುಗಿಸಿದ ಬಳಿಕ ಕುಟುಂಬಸ್ಥರ ಸಮೇತ ಅವರು ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಯಲಹಂಕದ ಕೋಗಿಲು ಬಳಿ ಇರುವ ದದ್ದಲ್ ವಿಲ್ಲಾದಲ್ಲಿ ಮನೆಯ ಇಬ್ಬರು ಕೆಲಸದವರು ಮಾತ್ರ ಇದ್ದು, ಕುಟುಂಬದ ಯಾವ ಸದಸ್ಯರೂ ಇರಲಿಲ್ಲ. ಕುಟುಂಬ ಸಮೇತ ತೆರಳಿರುವುದಾಗಿ ಮನೆ ಕೆಲಸದವರು ಮಾಹಿತಿ ನೀಡಿದ್ದರು. ಇದೀಗ ಅವರು ಮಂತ್ರಾಲಯದ ಕಡೆಗೆ ಹೊರಟಿದ್ದು, ಅಧಿಕಾರಿಗಳ ಮುಂದಿನ ನಡೆಯ ಬಗ್ಗೆ ಕುತೂಹಲ ಮೂಡಿದೆ.

Exit mobile version