ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಪ್ರಕರಣ (Valmiki Corporation Scam) ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರಾಜ್ಯದ ಮತ್ತಷ್ಟು ನಿಗಮ ಮತ್ತು ಮಂಡಳಿಗಳ ಮೇಲೆ ಅನುಮಾನ ಮೂಡಿದೆ. ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿ ಸುಮಾರು 1 ಸಾವಿರ ಕೋಟಿ ರೂ. ಖಾಸಗಿ ಬ್ಯಾಂಕ್ಗಳಲ್ಲಿ ಜಮೆ ಮಾಡಲಾಗಿದ್ದು, ನಿಗಮ, ಮಂಡಳಿಗಳ ಈ ಬ್ಯಾಂಕ್ ಖಾತೆಗಳನ್ನ ತಕ್ಷಣದಿಂದಲೇ ಸ್ಥಗಿತಗೊಳಿಸಲು ಹಣಕಾಸು ಇಲಾಖೆ ಪತ್ರ ಬರೆದಿದೆ.
ಎಲ್ಲ ಬ್ಯಾಂಕ್ಗಳಿಗೆ ಪತ್ರ ಬರೆದು ಖಾತೆಗಳ ಬಗ್ಗೆ ಹೆಚ್ಚಿನ ವಿವರ ಕೇಳಿದೆ. ರಾಜ್ಯದ 25 ನಿಗಮ ಹಾಗೂ ಮಂಡಳಿಗಳಿಂದ 1 ಸಾವಿರ ಕೋಟಿಗೂ ಅಧಿಕ ಹಣ ಖಾಸಗಿ ಬ್ಯಾಂಕ್ನಲ್ಲಿ ಜಮೆ ಮಾಡಲಾಗಿದ್ದು, ಈ ಪೈಕಿ ಒಂದೇ ನಿಗಮ 10 ಖಾಸಗಿ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವುದು ಬೆಳಕಿಗೆ ಬಂದಿದೆ. ಈ ಎಲ್ಲ ಕಾರಣಗಳಿಂದ ಕ್ರಮಕ್ಕೆ ಮುಂದಾದ ಅಧಿಕಾರಿಗಳು ಈ ಖಾತೆಗಳನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಸೂಚಿಸಿದ್ದಾರೆ.
ನಿಯಮ ಏನು ಹೇಳುತ್ತದೆ?
ಎಲ್ಲ ನಿಗಮ ಹಾಗೂ ಮಂಡಳಿಗಳು ಸರ್ಕಾರದ ಖಜಾನೆಯಲ್ಲಿಯೇ ಖಾತೆಗಳನ್ನ ತೆರೆದು ಹಣವನ್ನು ಅಲ್ಲಿಯೇ ಜಮೆ ಮಾಡಬೇಕೆಂಬ ಆದೇಶವಿದೆ. ಆದರೂ ಸರ್ಕಾರದ ಆದೇಶ ಉಲ್ಲಂಘಿಸಿ ಖಾಸಗಿ ಬ್ಯಾಂಕ್ಗಳಲ್ಲಿ ಸಾವಿರಾರು ಕೋಟಿ ರೂ. ಜಮೆ ಮಾಡಲಾಗಿದೆ. ಸದ್ಯ ಯಾವ ಬ್ಯಾಂಕ್ನಲ್ಲಿ ಎಷ್ಟು ಹಣ ಜಮೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಹಣಕಾಸು ಇಲಾಖೆ ಕೇಳಿದೆ. ಈಗಾಗಲೇ ಎಲ್ಲ ಇಲಾಖೆಗೆ ಪತ್ರ ಬರೆದು ಮಾಹಿತಿ ಸಂಗ್ರಹ ನಡೆಸುತ್ತಿದೆ.
ಏನಿದು ಪ್ರಕರಣ?
ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರು ಮೇ 26ರಂದು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದ 187 ಕೋಟಿ ರೂ.ಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ, ಇದರಲ್ಲಿ 88 ಕೋಟಿ ಹಣ ದುರುಪಯೋಗವಾಗಿದೆ ಎಂದು ಅವರು ಡೆತ್ನೋಟ್ನಲ್ಲಿ ಬರೆದಿದ್ದರು. ಹೀಗಾಗಿ ಎಂಡಿ ಮತ್ತು ಲೆಕ್ಕಾಧಿಕಾರಿಯನ್ನು ಅಮಾನತು ಮಾಡಲಾಗಿತ್ತು.
ಚಂದ್ರಶೇಖರ್ ಬರೆದಿರುವ ಡೆತ್ ನೋಟ್ನಲ್ಲಿ ಎಂಡಿ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಹಾಗೂ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಸುಚಿಸ್ಮಿತಾ ಅವರೇ ನನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದರು. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದಲ್ಲಿ ಸರ್ಕಾರದ ಪೂರ್ವ ಅನುಮತಿ ಪಡೆದು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂ.ಡಿ & ಸಿಇಒ ಹಾಗೂ ಎಲ್ಲ ನಿರ್ದೇಶಕರು ಸೇರಿ 6 ಬ್ಯಾಂಕ್ ಅಧಿಕಾರಿಗಳ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು. 88 ಕೋಟಿ ರೂ. ದುರುಪಯೋಗ ಹಣವನ್ನು ಈಗಾಗಲೇ ಮುಖ್ಯ ಖಾತೆಗೆ ಅಧಿಕಾರಿಗಳು ವಾಪಸ್ ಪಡೆಯುತ್ತಿದ್ದಾರೆ. ಎಸ್ಐಟಿ ಅಧಿಕಾರಿಗಳು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ. ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: Valmiki Corporation Scam: ವಾಲ್ಮೀಕಿ ನಿಗಮ ಹಗರಣ; ವರ್ಗಾವಣೆಯಾದ ಹಣ ಹಿಂಪಡೆಯಲು ಸರ್ಕಾರ ಕಸರತ್ತು