ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಪ್ರಕರಣ (Valmiki Corporation Scam) ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ನಿಗಮದಿಂದ ಅಕ್ರಮವಾಗಿ ವರ್ಗಾವಣೆ ಆಗಿದೆ ಎನ್ನಲಾದ 87 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಲು ಕಸರತ್ತು ನಡೆಸುತ್ತಿದೆ. ಮೊದಲ ಕಂತಿನಲ್ಲಿ 26 ಕೋಟಿ ವಾಪಸ್ ಆಗಿದೆ ಎಂದು ಸಚಿವ ಬಿ ನಾಗೇಂದ್ರ ಹೇಳಿದ್ದರು. ಎರಡನೇ ಕಂತಿನಲ್ಲಿ 42 ಕೋಟಿ ವಾಪಸ್ ಆಗಿದೆ ಎಂದು ಸಚಿವರ ಆಪ್ತ ವಲಯದ ಅಧಿಕಾರಿಗಳು ತಿಳಿಸಿದ್ದರು. ಆದರೆ, ಇದೀಗ ಇಷ್ಟು ಮೊತ್ತ ನಿಗಮಕ್ಕೆ ವಾಪಸ್ ಆಗಿಯೇ ಇಲ್ಲ ಎನ್ನಲಾಗುತ್ತಿದೆ.
87 ಕೋಟಿ ಅಕ್ರಮದಲ್ಲಿ ಸರ್ಕಾರಕ್ಕೆ ವಾಪಸ್ ಆಗಿದ್ದು ಕೇವಲ 5 ಕೋಟಿ. ಈವರೆಗೂ ಕೇವಲ 5 ಕೋಟಿ ಮಾತ್ರ ವಾಪಸ್ ಆಗಿದೆ ಎಂಬ ಮಾಹಿತಿ ಸರ್ಕಾರ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ನಿರೀಕ್ಷಿತ ಹಣ ವಾಪಸ್ ಆಗದೆ, ಸಚಿವರು 26 ಕೋಟಿ ಬಂದಿದೆ ಎಂದಿದ್ದು ಯಾಕೆ ಎಂಬ ಅನುಮಾನಗಳು ಮೂಡಿವೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿಯಿಂದ ಸರ್ಕಾರಕ್ಕೆ ಗಡುವು ನೀಡಿದ್ದು, ಹೀಗಾಗಿ ಸಚಿವ ತಲೆದಂಡ ಬಹುತೇಕ ಫಿಕ್ಸ್ ಎನ್ನಲಾಗಿದೆ.
ಸಚಿವ ಬಿ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿ ಪಟ್ಟು
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಪ್ರಕರಣ ಹಿನ್ನೆಲೆಯಲ್ಲಿ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟುಹಿಡಿದಿದೆ. ಸಚಿವರ ರಾಜೀನಾಮೆ ಪಡೆಯಲು ಜೂನ್ 6ರವರೆಗೂ ಗಡುವು ನೀಡಿರುವ ಬಿಜೆಪಿ, ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯವ್ಯಾಪಿ ಬೃಹತ್ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ | MLC Election: ವಿಧಾನ ಪರಿಷತ್ ಚುನಾವಣೆ; ಸಿ.ಟಿ.ರವಿ, ಎನ್.ರವಿಕುಮಾರ್ ಸೇರಿ ಮೂವರಿಗೆ ಬಿಜೆಪಿ ಟಿಕೆಟ್
ಮತ್ತೊಂದೆಡೆ ಬಿಜೆಪಿ ಕಾಲದ ಹಗರಣಗಳನ್ನು ಪ್ರಸ್ತಾಪ ಮಾಡಲು ನಾಗೇಂದ್ರ ಮುಂದಾಗಿದ್ದಾರೆ. ಪ್ರಕರಣದಲ್ಲಿ ತನಿಖೆಗೆ ಸಿಬಿಐ ಎಂಟ್ರಿ ತಪ್ಪಿಸಲು ಹೊಸ ದಾಳ ಪ್ರಯೋಗಕ್ಕೆ ನಾಗೇಂದ್ರ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿ ಕಾಲದಲ್ಲಿ ಮಂಡ್ಯ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಹಗರಣ ಕುರಿತು ಪ್ರಸ್ತಾಪ ಮಾಡಲು ಸಚಿವ ಪ್ಲ್ಯಾನ್ ಮಾಡಿದ್ದಾರೆ.