Site icon Vistara News

ವಾಲ್ಮೀಕಿ ನಿಗಮದ ಚಂದ್ರಶೇಖರ್‌ ಆತ್ಮಹತ್ಯೆ, 87 ಕೋಟಿ ರೂ. ಹಗರಣ; ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

Chandrashekar

Valmiki Development Corporation Superintendent Suicide: Karnataka Government Forms SIT To Investigation

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki Development Corporation) ಅಧೀಕ್ಷಕ ಚಂದ್ರಶೇಖರ್‌ ಆತ್ಮಹತ್ಯೆ (Self Harming) ಪ್ರಕರಣವು ಗಂಭೀರ ಸ್ವರೂಪ ಪಡೆದಿದೆ. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಒತ್ತಾಯ ಕೇಳಿಬರುತ್ತಿದೆ. ಇದರ ಬೆನ್ನಲ್ಲೇ, ಆತ್ಮಹತ್ಯೆ ಪ್ರಕರಣದ ಕುರಿತು ತನಿಖೆ ನಡೆಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ (SIT) ರಚಿಸಿದೆ. ನಾಲ್ವರು ಹಿರಿಯ ಪೊಲೀಸ್‌ ಅಧಿಕಾರಿಗಳಿರುವ ಎಸ್‌ಐಟಿ ರಚಿಸಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ, ನಿಗಮದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಸಭೆ ನಡೆಸಿದ್ದು, ಪ್ರಕರಣವನ್ನು ಎಸ್‌ಐಟಿಗೆ ವಹಿಸಲು ತೀರ್ಮಾನಿಸಿದ್ದಾರೆ. ಅದರಂತೆ, ಎಡಿಜಿಪಿ ಮನೀಶ್‌ ಕಬೀರ್ಕರ್‌ ನೇತೃತ್ವದಲ್ಲಿ ಶಿವಪ್ರಕಾಶ್‌, ಹರಿರಾಮ್‌ ಶಂಕರ್‌ ಹಾಗೂ ರಾಘವೇಂದ್ರ ಹೆಗಡೆ ಅವರ ತಂಡವು ಪ್ರಕರಣದ ಕುರಿತು ತನಿಖೆ ನಡೆಸಲಿದ್ದಾರೆ.

ವರದಿ ಆಧರಿಸಿಯೇ ನಾಗೇಂದ್ರ ವಿರುದ್ಧ ಕ್ರಮ?

ವಾಲ್ಮೀಕಿ ಅಭಿವೃದ್ಧಿ ನಿಗಮದ ಸುಮಾರು 87 ಕೋಟಿ ರೂಪಾಯಿಯನ್ನು ಆಂಧ್ರಪ್ರದೇಶ, ತೆಲಂಗಾಣ ಸೇರಿ ಹಲವೆಡೆಯಲ್ಲಿರುವ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣವು ರಾಜ್ಯಾದ್ಯಂತ ಸುದ್ದಿಯಾಗಿದೆ. ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಬೇಕು ಎಂದು ಪ್ರತಿಪ್ಷಕಗಳು ಆಗ್ರಹಿಸುತ್ತಿವೆ. ಇದರ ಬೆನ್ನಲ್ಲೇ, ರಾಜ್ಯ ಸರ್ಕಾರವು ಎಸ್‌ಐಟಿ ರಚಿಸಿದ್ದು, ಇದರ ವರದಿ ಆಧಾರದ ಮೇಲೆಯೇ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕೋ, ಬೇಡವೋ ಎಂಬುದನ್ನು ಸಿದ್ದರಾಮಯ್ಯ ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಎಸ್‌ಐಟಿ ವರದಿ ಈಗ ಕುತೂಹಲ ಕೆರಳಿಸಿದೆ.

ಬೇರೆ ರಾಜ್ಯಗಳಿಗೆ ಹಣ ವರ್ಗಾವಣೆಯಾಗಿದ್ದರೆ ಎಸ್‌ಐಟಿ ತನಿಖೆ ಮಾಡಲು ಆಗುವುದಿಲ್ಲ. ಪ್ರಕರಣ ಇನ್ನಷ್ಟು ಗಂಭೀರವಾದರೆ ಸಿಬಿಐ ಪ್ರವೇಶ ಅನಿವಾರ್ಯವಾಗುತ್ತದೆ. ಇದೇ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ತಕ್ಷಣವೇ ಎಸ್‌ಐಟಿ ರಚಿಸಿದೆ ಎಂದು ತಿಳಿದುಬಂದಿದೆ. ಶಿವಮೊಗ್ಗ ನಗರದ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ್‌ ಅವರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಇದಕ್ಕೆ ಸಂಬಂಧಿಸಿ ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್, ಲೆಕ್ಕಾಧಿಕಾರಿ ಪರಶುರಾಮ್, ಬ್ಯಾಂಕ್ ಅಧಿಕಾರಿ ಸುಚಿಸ್ಥನಾ ಎಂಬವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ನಿಗಮದಲ್ಲಿ ನಿಯಮಬಾಹಿರವಾಗಿ 85 ಕೋಟಿ ಹಣವನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವನ್ನು ಡೆತ್ ನೋಟ್‌ನಲ್ಲಿ ನೌಕರ ಮಾಡಿದ್ದಾರೆ. ಹಾಗಾಗಿ, ಪ್ರಕರಣವು ಗಂಭೀರ ಸ್ವರೂಪ ಪಡೆದಿದೆ.

ಇದನ್ನೂ ಓದಿ: Valmiki Corporation Scam: ಸಚಿವ ನಾಗೇಂದ್ರ ತಲೆದಂಡ ಫಿಕ್ಸ್‌; ರಾಜೀನಾಮೆ ಕೊಡಲು ಸಿಎಂ ಸೂಚನೆ?

Exit mobile version