ಬೆಂಗಳೂರು: ರೈಲು ಸಂಚಾರವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕರ್ನಾಟಕದಲ್ಲಿ ಸಂಚರಿಸುವ ದಿನ ಸಮೀಪಿಸುತ್ತಿದೆ.
ನವೆಂಬರ್ 10ರಂದು ಕರ್ನಾಟಕದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಮಾಡಲಿದೆ. ಚೆನ್ನೈಯಿಂದ ಹೊರಡುವ ರೈಲು ಬೆಂಗಳೂರು ಮಾರ್ಗವಾಗಿ ಮೈಸೂರು ತಲುಪಲಿದೆ.
ಈ ಮೂಲಕ, ಅತ್ಯಂತ ವೇಗದ ರೈಲು ಸೇವೆ ಕರ್ನಾಟಕಕ್ಕೆ ಪದಾರ್ಪಣೆ ಮಾಡಲಿದೆ. ಗರಿಷ್ಠ 160 ಕಿ.ಮೀ. ವೇಗದಲ್ಲಿ ಸಂಚರಿಸಬಹುದಾದ ವಂದೇ ಭಾರತ್, ರೈಲು ಹಳಿಯ ಸಾಮರ್ಥ್ಯಕ್ಕೆ ತಕ್ಕಂತೆ 130 ಕಿ.ಮೀ. ವೇಗದಲ್ಲಿ ಸಾಗುತ್ತದೆ.
ಸೆಪ್ಟೆಂಬರ್‌ನಲ್ಲಿ ಕರ್ನಾಟಕ ರಾಜ್ಯದ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿದ್ದ ರೈಲ್ವೆ ಇಲಾಖೆ ರಾಜ್ಯ ಸಚಿವೆ ದರ್ಶನಾ ಜರ್ದೋಶ್. 2023ರ ವೇಳೆಗೆ ಕರ್ನಾಕದಲ್ಲಿ ವಂದೇ ಭಾರತ್ ರೈಲು ಸಂಚರಿಸಲಿದೆ ಎಂದಿದ್ದರು.
ಬೆಂಗಳೂರು-ಹುಬ್ಬಳ್ಳಿ ನಡುವೆ ಮೊದಲ ಸಂಚಾರ ನಡೆಸಲಿದೆ ಎಂದು ತಿಳಿಸಿದ್ದರಾದರೂ ಇದೀಗ ಸಾಕಷ್ಟು ಮುನ್ನವೇ ಕರ್ನಾಟಕದಲ್ಲಿ ವಂದೇ ಭಾರತ್ ರೈಲು ಕಾರ್ಯಾಚರಣೆ ಆರಂಭಿಸಲಿದೆ.
ಈಗಾಗಲೆ ನಾಲ್ಕು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಲಾಗಿದೆ. 2019ರಿಂದ ಚಾಲನೆ ನೀಡಲಾದ ಸೇವೆಯನ್ನು ಮೊದಲಿಗೆ ದೆಹಲಿ ವಾರಾಣಸಿ ಮಾರ್ಗದಲ್ಲಿ ಆರಂಭಿಸಲಾಗಿತ್ತು. ನಂತರ 2019ರಲ್ಲೇ ನವದೆಹಲಿಯಿಂದ ವೈಷ್ಣೋ ದೇವಿ ದೇವಾಲಯಕ್ಕೆ, 2022ರಲ್ಲಿ ಮುಂಬೈಯಿಂದ ಗುಜರಾತ್‌ನ ಗಾಂಧಿನಗರಕ್ಕೆ, ನಾಲ್ಕನೆಯದನ್ನು ಅಕ್ಟೋಬರ್ 13ರಂದು ನವದೆಹಲಿಯಿಂದ ಹಿಮಾಚಲ ಪ್ರದೇಶಕ್ಕೆ ಸಂಚರಿಸುವಂತೆ ಚಾಲನೆ ನೀಡಲಾಗಿತ್ತು.
ಇದೀಗ ಚೆನ್ನೈಯಿಂದ ಮೈಸೂರಿಗೆ ತೆರಳುವ ರೈಲು ಐದನೆಯದಾಗುತ್ತದೆ. ಕರ್ನಾಟಕವಷ್ಟೆ ಅಲ್ಲದೆ, ದಕ್ಷಿಣ ಭಾರತಕ್ಕೆ ಇದು ಮೊದಲ ರೈಲು ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ.
ಇದನ್ನೂ ಓದಿ | Video | ದೇಶದ 3ನೇ ವಂದೇ ಭಾರತ್ ರೈಲು ಸಂಚಾರ ಪ್ರಾರಂಭ; ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ