ದಾವಣಗೆರೆ: ಜೂನ್ 27ರಂದು ಉದ್ಘಾಟನೆಗೊಂಡಿದ್ದ ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ (Dharwad Bengaluru Vande Bharat train) ಕೇವಲ ನಾಲ್ಕೇ ದಿನದ ಅಂತರದಲ್ಲಿ ಅಂದರೆ ಜುಲೈ 1ರಂದು ಕಲ್ಲು ಹೊಡೆಯಲಾಗಿತ್ತು. ಈ ಕಲ್ಲು ಹೊಡೆದದ್ದು ಯಾರು ಎನ್ನುವುದು ಈಗ ಬಯಲಾಗಿದೆ. ನಿಜವೆಂದರೆ, ಅವರ ವಯಸ್ಸು ಕೇಳಿದರೆ ನೀವು ಅಚ್ಚರಿಪಡುತ್ತೀರಿ. ಯಾಕೆಂದರೆ, ಅವರಿನ್ನೂ 12 ವರ್ಷದ ಮಕ್ಕಳು!
ವಂದೇ ಭಾರತ್ (Vande Bharat)ನಂಥ ವೇಗದ ಮತ್ತು ಸಕಲ ಸೌಲಭ್ಯಗಳಿರುವ ರೈಲನ್ನು ನೋಡಿದಾಗ ಜನರಿಗೆ ಏನಾಗುತ್ತದೋ ಏನೋ, ದೇಶದ ಹಲವಾರು ಭಾಗಗಳಲ್ಲಿ ಸಂಚಾರದ ಆರಂಭದ ದಿನಗಳಲ್ಲಿ ಅದಕ್ಕೆ ಕಲ್ಲು ಹೊಡೆಯುವುದು ನಿರಂತರವಾಗಿ ನಡೆಯುತ್ತಿತ್ತು. ಈ ಚಾಳಿ ಸುಸಂಸ್ಕೃತರ ನಾಡೆಂದು ಹೇಳುವ ಕರ್ನಾಟಕದಲ್ಲೂ ಮುಂದುವರಿದು ಮುಜುಗರ ಸೃಷ್ಟಿಯಾಗಿತ್ತು. ಕರ್ನಾಟಕದ ಮೊದಲ ವಂದೇ ಭಾರತ್ ರೈಲು ಬೆಂಗಳೂರು-ಮೈಸೂರು-ಚೆನ್ನೈ ಟ್ರೇನ್ಗೂ ಇದೇ ಫೆಬ್ರವರಿಯಲ್ಲಿ ಕಲ್ಲುತೂರಾಟವಾಗಿತ್ತು.
ದಾವಣಗೆರೆ ನಗರದ ಹೊರವಲಯದಲ್ಲಿರುವ ಜಿಎಂ ಟೆಕ್ನಾಲಜಿ ಇನ್ಸ್ಟಿಟ್ಯೂಟ್ ಬಳಿ ಕಿಡಿಗೇಡಿಗಳು ರೈಲಿಗೆ ಕಲ್ಲು ಎಸೆದ (Stone Pelt) ಪರಿಣಾಮ, ಕಿಟಕಿ ಗಾಜು ಒಡೆದಿತ್ತು. ರೈಲು ಧಾರವಾಡದಿಂದ ಬೆಂಗಳೂರಿಗೆ ವಾಪಸ್ ಬರುವಾಗ, ಶನಿವಾರ ಮಧ್ಯಾಹ್ನ 3.30ರ ಹೊತ್ತಿಗೆ ದುಷ್ಕರ್ಮಿಗಳು ಕಲ್ಲು ಹೊಡೆದು ಪರಾರಿಯಾಗಿದ್ದರು. ಕಿಡಿಗೇಡಿಗಳು ಎಸೆದ ಕಲ್ಲು ಕಿಟಕಿಗೆ ತಗುಲಿ, ಹಾನಿಯಾದರೂ ಅದೃಷ್ಟವಶಾತ್ ಒಳಗಿದ್ದ ಪ್ರಯಾಣಿಕರಿಗೆ ಬಡಿದಿರಲಿಲ್ಲ.
ಇದನ್ನೂ ಓದಿ: Vande Bharat Express: ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲು; ಟೈಮಿಂಗ್ ಹೇಗೆ? ಪ್ರಯಾಣ ದರ ಎಷ್ಟು?
ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ದಾವಣಗೆರೆ ರೈಲ್ವೆ ಪೊಲೀಸರು ಈಗ ಕಲ್ಲು ತೂರಿದವರನ್ನು ಹಿಡಿದು ಹಾಕಿದ್ದಾರೆ. ಪೊಲೀಸರು ವಶಪಡಿಸಿಕೊಂಡಿರುವ ದುಷ್ಕರ್ಮಿಗಳೆಂದರೆ 12 ವರ್ಷ ಪ್ರಾಯದ ಇಬ್ಬರು ಮಕ್ಕಳು ಎಂದರೆ ನಿಮಗೆ ದಿಗಿಲಾಗಬಹುದು!
ಕಲ್ಲು ತೂರಾಟ ಮಾಡಿದ ಜಾಗ, ಹೊತ್ತು ಮತ್ತು ಆ ಪರಿಸರದ ಓಡಾಟಗಳ ಮೇಲೆ ಕಣ್ಣಿಟ್ಟು ತನಿಖೆ ನಡೆಸಿದ ಪೊಲೀಸರಿಗೆ ಇದು 12 ವರ್ಷದ ಇಬ್ಬರು ಬಾಲಕರ ಕೃತ್ಯ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಹೀಗಾಗಿ ಅವರನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ದಾವಣಗೆರೆಯ ಎಸ್ ಎಸ್ ನಗರ ಹಾಗೂ ಭಾಷಾ ನಗರದ ಮನೆಗೆ ಸೇರಿದ ಇಬ್ಬರು ಬಾಲಕರು ಕಿಲಾಡಿತನದಿಂದ ಮತ್ತು ಏನಾದರೂ ಸಾಹಸ ಮಾಡುವ ಉದ್ದೇಶದಿಂದ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಅವರಿಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ಚಿತ್ರದುರ್ಗದ ಬಾಲಮಂದಿರದಲ್ಲಿ ಇಟ್ಟಿದ್ದಾರೆ.
ದಾವಣಗೆರೆ ರೈಲ್ವೆ ಪೊಲೀಸರು ಹಾಗೂ ಆರ್ ಪಿ ಎಫ್ ಪೊಲೀಸರಿಬ್ಬರ ಜಂಟಿ ಕಾರ್ಯಾಚರಣೆಯಲ್ಲಿ ಈ ಪ್ರಕರಣವನ್ನು ಬೇದಿಸಿ ಇಬ್ಬರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ. ಮುಂದೆ ಅವರನ್ನು ಬಾಲ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಇದನ್ನು ಸಾಧಾರಣ ಪ್ರಕರಣವೆಂದು ಪರಿಗಣಿಸಿದರೆ ಅವರ ಕೈಯಲ್ಲಿ, ಮನೆಯವರ ಕೈಯಲ್ಲಿ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದರ ಹಿಂದೆ ಯಾವುದೋ ಕುಮ್ಮಕ್ಕಿದೆ, ಯಾರದೋ ಷಡ್ಯಂತ್ರದ ದಾಳವಾಗಿ ಅವರು ಕಲ್ಲು ತೂರಾಟ ಮಾಡಿದ್ದಾರೆ ಎಂದಾದರೆ ಅವರನ್ನು ಬಾಲ ಮಂದಿರದಲ್ಲೇ ಇಟ್ಟುಕೊಂಡು ತನಿಖೆ ಮುಂದುವರಿಸುವ ಸಾಧ್ಯತೆ ಇದೆ.
ಕಲ್ಲು ತೂರಾಟದ ಘಟನೆಯ ವರದಿ: Vande Bharat: ಧಾರವಾಡ-ಬೆಂಗಳೂರು ಹೊಸ ವಂದೇ ಭಾರತ್ ರೈಲಿಗೆ ಕಲ್ಲು ಹೊಡೆದ ಕಿಡಿಗೇಡಿಗಳು; ಕಿಟಕಿ ಗಾಜು ಪುಡಿ