ಬೆಂಗಳೂರು: ಭಾರತೀಯ ಆಡಳಿತ ಸೇವೆಯ ಹಿರಿಯ ಅಧಿಕಾರಿ ವಂದಿತಾ ಶರ್ಮಾ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು.
ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪಿ ರವಿಕುಮಾರ್ ಅವರ ನಿವೃತ್ತಿಯಿಂದ ತೆರವಾದ ಹುದ್ದೆಗೆ ಕರ್ನಾಟಕ ವೃಂದದ ಭಾರತೀಯ ಆಡಳಿತ ಸೇವೆಯ 1986ನೇ ಸಾಲಿನ ತಂಡದ ವಂದಿತಾ ಶರ್ಮಾ ಉತ್ತರಾಧಿಕಾರಿಯಾಗಿದ್ದಾರೆ.
ವಂದಿತಾ ಶರ್ಮಾ ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುತ್ತಿರುವ ನಾಲ್ಕನೇ ಮಹಿಳೆಯಾಗಿದ್ದಾರೆ. ಅಂತೆಯೇ, ರಾಜ್ಯ ಸರ್ಕಾರದ 39ನೇ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ.
ಮಹಿಳೆಯರ ಆಡಳಿತ
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಯನ್ನು ಈ ಹಿಂದೆ 2000ರಲ್ಲಿ ತೆರೇಸಾ ಭಟ್ಟಾಚಾರ್ಯ, 2006ರಲ್ಲಿ ಮಾಲತಿ ದಾಸ್ ಹಾಗೂ 2017ರಲ್ಲಿ ಕೆ. ರತ್ನ ಪ್ರಭ ಅಲಂಕರಿಸಿದ್ದರು.
ಕೆ ರತ್ನ ಪ್ರಭ ಅವರ ಅಧಿಕಾರಾವಧಿಯಲ್ಲಿ ರಾಜ್ಯ ಪೋಲಿಸ್ ಮಹಾನಿರ್ದೇಶಕ ಹಾಗೂ ಮಹಾ ನಿರೀಕ್ಷಕ ಹುದ್ದೆಯನ್ನು ನೀಲಮಣಿ ಎನ್ ರಾಜು ಅಲಂಕರಿಸಿದಾಗ ಎರಡು ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರೇ ಅಲಂಕರಿಸಿದ ಹೆಗ್ಗಳಿಕೆ ಸೃಷ್ಟಿಯಾಗಿತ್ತು.
ಇದನ್ನೂ ಓದಿ| ವಂದಿತಾ ಶರ್ಮಾ ರಾಜ್ಯ ಸರಕಾರದ ನೂತನ ಮುಖ್ಯ ಕಾರ್ಯದರ್ಶಿ
ಇದೀಗ ವಂದಿತಾ ಶರ್ಮಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸುವುದರೊಂದಿಗೆ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಇರುವ ಮೂರೂ ಪ್ರಮುಖ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸಿದಂತಾಗುತ್ತದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ, ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಹಾಗೂ ರಾಜ್ಯ ವಿಧಾನ ಪರಿಷತ್ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ ಶಕ್ತಿ ಕೇಂದ್ರದ ಶಕ್ತಿಯಾಗಿ ಈಗ ಹೊಸ ದಾಖಲೆ ಸ್ಥಾಪಿಸಿದ್ದಾರೆ.
ಸೇವಾ ಹಿರಿತನದಲ್ಲಿ ಆಯ್ಕೆ
ವಂದಿತಾ ಶರ್ಮಾ ಅವರ ನೇಮಕಾತಿಯಲ್ಲಿ ರಾಜ್ಯ ಸರ್ಕಾರವು ಎಂದಿನಂತೆ ಸೇವಾ ಹಿರಿತನವನ್ನು ಪುರಸ್ಕರಿಸಿದೆ. ಅವರ ಅಧಿಕಾರಾವಧಿ ನವೆಂಬರ್ 30, 2023ರವರೆಗೆ ಇದೆ.
ವಂದಿತಾ ಶರ್ಮಾ ಅವರ ಪತಿಯೂ ಭಾರತೀಯ ಆಡಳಿತ ಸೇವೆಯ ಅಧಿಕಾರಿಯಾಗಿ, ಪ್ರಸ್ತುತ ಹಣಕಾಸು ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೆ, ಇದೇ ದಿನದಿಂದು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಹುದ್ದೆಯ ಅಧಿಕ ಪ್ರಭಾರವನ್ನೂ ವಹಿಸಿಕೊಂಡಿದ್ದಾರೆ.
ಇದನ್ನೂ ಓದಿ|ನಿಯೋಜಿತ CS ವಂದಿತಾ ಶರ್ಮಾ ಫುಲ್ ಆ್ಯಕ್ಟಿವ್: ತಂಡ ರಚನೆ ಆರಂಭ