Site icon Vistara News

Varamahalakshmi festival : ಮುಸ್ಲಿಮರ ಮನೆಯಲ್ಲೂ ವರಮಹಾಲಕ್ಷ್ಮೀ ಪೂಜೆ! ಎಲ್ಲಿದು ಸಾಮರಸ್ಯ?

Varamahalaxmi

ಕೊಪ್ಪಳ: ದಿನಾ ಬೆಳಗ್ಗೆದ್ದರೆ ಧಾರ್ಮಿಕ ಸಂಘರ್ಷದ ಸುದ್ದಿಗಳನ್ನು ಕೇಳುತ್ತಿರುವ ನಮಗೆ ಭಾವಕ್ಯತೆಯನ್ನು ಸಾರುವ ಸುದ್ದಿಗಳು ಹೆಚ್ಚು ಆಪ್ಯಾಯಮಾನ ಎನಿಸುತ್ತದೆ. ಅಂಥದ್ದೇ ಒಂದು ಕೊಪ್ಪಳದಲ್ಲಿ ವರದಿಯಾಗಿದೆ. ಪ್ರತಿ ವರ್ಷವೂ ಈ ಮನೆಯಿಂದ ಸಾಮರಸ್ಯದ ಸುದ್ದಿ ಬರುತ್ತದೆ. ಅಂತೆಯೇ ಈ ವರ್ಷವೂ ಬಂದಿದೆ. ಅದೇನೆಂದರೆ ಮುಸ್ಲಿಂ ಧರ್ಮಿಯರ ಮನೆಯಲ್ಲಿ ವರಾಮಹಾಲಕ್ಷ್ಮೀ (Varamahalakshmi festival) ಆಚರಣೆ.

ಅದುವೇ ಅಳವಂಡಿ ಗ್ರಾಮದ ನಜೀರುದ್ದೀನ್ ಅವರ ಕುಟುಂಬದಲ್ಲಿ ನಡೆದ ವರಮಹಾಲಕ್ಷ್ಮೀ ಆಚರಣೆ. ಪ್ರತಿ ವರ್ಷವೂ ಅವರ ಮನೆಯಲ್ಲಿ ಹಿಂದೂ- ಮುಸ್ಲಿಂ ಭಾವೈಕ್ಯತೆಯ ಪ್ರತಿರೂಪವಾಗಿರುವ ವರ ಮಹಾಲಕ್ಷ್ಮೀ ಪೂಜೆ ನಡೆಯುತ್ತಿದೆ. ಅಂತೆಯೇ ಆಗಸ್ಟ್​​ 25ರಂದು ಶುಕ್ರವಾರ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗಿದೆ. ಹಿಂದೂ ಸಂಪ್ರದಾಯದ ಹಾಗೆ ಮನೆಗೆ ತಳಿರು ತೋರಣಗಳನ್ನು ಕಟ್ಟಿ ವರಮಹಾಲಕ್ಷ್ಮೀಗೆ ಪೂಜೆ ಸಲ್ಲಿಸಿ ನೈವೇದ್ಯ ಸಮರ್ಪಿಸಲಾಗಿದೆ. ಹಿಂದೂ-ಮುಸ್ಲಿಂ ಬಾಂಧವ್ಯಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದು ಸಿಗಲಾರದು.

ಸಾಮರಸ್ಯದ ಗ್ರಾಮ

ಅಳವಂಡಿ ಗ್ರಾಮ ಮೊದಲಿನಿಂದಲೂ ಸಾಮರಸ್ಯದ ತವರೂರು. ಇಲ್ಲಿ ಎಲ್ಲ ಸಮುದಾಯಗಳ ಆಚರಣೆಗಳನ್ನು ಒಟ್ಟಾಗಿ ಆಚರಿಸಲಾಗುತ್ತದೆ. ಹಿಂದೂ – ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಎಲ್ಲ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದಾರೆ. ಹೀಗಾಗಿ ಅವರಿಗೆ ಪೂಜೆಗಳು ವಿಶೇಷವಲ್ಲ. ಆದರೆ, ಪ್ರತಿಯೊಬ್ಬರಿಗೂ ಗೌರವ ನೀಡಬೇಕು ಹಾಗೂ ವಿಶೇಷವಾಗಿ ಹಬ್ಬಗಳನ್ನು ಆಚರಿಸಬೇಕು ಎಂಬುದೇ ಅವರ ಗುರಿ.

ನಜೀರ್​ ಅವರ ಕುಟುಂಬ ಕಳೆದ ಮೂರು ವರ್ಷಗಳಿಂದ ಸಂಪ್ರದಾಯ ಬದ್ಧವಾಗಿ ವರ ಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ಅಳವಂಡಿ ಗ್ರಾಮದ ನಜುರುದ್ದೀನ್ ಬಿಸರಳ್ಳಿ‌ ಅವರು ಮುಸ್ಲಿಂ ಕುಟುಂಬದ ಮನೆಯಲ್ಲಿ ವರ ಮಹಾಲಕ್ಷ್ಮಿ ಹಬ್ಬವನ್ನು ಮನೆತನದ ಹಬ್ಬದ ರೀತಿ ಆಚರಿಸುತ್ತಿದ್ದಾರೆ. ಅಕ್ಕಪಕ್ಕದ ಮನೆಯವರಿಗೆ ಅರಶಿಣ ಕುಂಕುಮ ಕೊಟ್ಟು ಶುಭ ಕೋರಿದ್ದಾರೆ.

ಹಬ್ಬದ ಪ್ರಯುಕ್ತ ಮನೆಯಲ್ಲಿ ದೀಪಾಲಂಕಾರ, ವಿಶೇಷ ಪೂಜೆ ಮಾಡಿದ್ದಾರೆ. ಹೋಳಿಗೆ ನೈವೇದ್ಯ, ವಿವಿಧ ತರಹದ ಹಣ್ಣುಗಳು ಸಮರ್ಪಿಸಿ, ಹಣತೆ ಹಚ್ಚಿ ಸಂಭ್ರಮಿಸಿದ್ದಾರೆ. ಮನೆಯನ್ನು ವಿದ್ಯುತ್ ದೀಪ ಹಾಗೂ ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ನಜೀರುದ್ದೀನ್ ಬಿಸರಳ್ಳಿ‌ ಅವರು ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸರ್ವ ಧರ್ಮದ ಸ್ನೇಹಿತರನ್ನು ಆಹ್ವಾನಿಸಿ ಆತಿಥ್ಯ ಸತ್ಕರಿಸಿದ್ದಾರೆ.

ಇದನ್ನೂ ಓದಿ: Shiva Rajkumar: ವರಮಹಾಲಕ್ಷ್ಮಿ ಹಬ್ಬಕ್ಕೆ ಶಿವಣ್ಣನ ಸ್ಪೆಷಲ್ ಗಿಫ್ಟ್‌; ಫ್ಯಾನ್ಸ್‌ ಫುಲ್‌ ಖುಷ್‌!

ನಜೀರುದ್ದೀನ್ ಹಬ್ಬದ ಕುರಿತು ವಿಶೇಷ ಭಾವನೆ ಹೊಂದಿದ್ದಾರೆ. ನಾಲ್ಕು ವರ್ಷದ ಹಿಂದೆ ವರ ಮಹಾಲಕ್ಷ್ಮಿ ಹಬ್ಬದ ದಿನದಂದು ನನ್ನ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ನಡೆಯಿತು. ಅಂದಿನಿಂದ ಪ್ರತಿ ವರ್ಷ ಹಿಂದೂ ಸಂಪ್ರದಾಯದಂತೆ ಹಬ್ಬ ಮಾಡುತ್ತಾ ಬಂದಿದ್ದೇನೆ. ಇದರಿಂದ ಒಳ್ಳೆಯದು ಆಗಿದೆ. ನಾನು ಕೂಡ ಗ್ರಾಮದ ಪ್ರತಿಯೊಂದು ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೋಳ್ಳುತ್ತೇನೆ ಎಂದು ಹೇಳಿದ್ದಾರೆ.

Exit mobile version