ಬೆಂಗಳೂರು: ನಿಮ್ಮದು ಗಂಟೆಗಟ್ಟಲೆ ನಿಂತುಕೊಂಡೇ ಮಾಡುವ ಕೆಲಸವೇ? ಹಾಗಾದರೆ ನಿಮ್ಮ ಕಾಲುಗಳ ಬಗ್ಗೆ ಹುಷಾರಾಗಿ ಇರಿ. ನಿಮಗೆ ಗೊತ್ತಿಲ್ಲದೆ ನಿಮ್ಮನ್ನು ವೇನ್ಸ್ ಅಲ್ಸರ್ ಕಾಡಬಹುದು. ನಿಂತು ಕೆಲಸ ಮಾಡುವ ಪೊಲೀಸ್, ಬಸ್ ಕಂಡಕ್ಟರ್ಸ್, ಶೆಫ್, ಪ್ರಿಟಿಂಗ್ ಪ್ರೆಸ್ ಅಪರೇಟರ್ಸ್, ಶಿಕ್ಷಕರು ಸೇರಿದಂತೆ ತರಕಾರಿ ವ್ಯಾಪಾರಿಗಳಿಗೆ ವೇರಿಕೋಸ್ ವೇನ್ಸ್ ಅಲ್ಸರ್ (Varicose Ulcer) ಕಾಯಿಲೆ ಹೆಚ್ಚು ಕಾಡುತ್ತಿದೆ.
ವೇರಿಕೋಸ್ ವೇನ್ಸ್ ಅಲ್ಸರ್ ಅನುವಂಶಿಕವಾಗಿ ಬರುವ ಸಾಧ್ಯತೆ ಹೆಚ್ಚಿದೆ. ಇದರ ಹೊರತಾಗಿಯೂ ನಿಲ್ಲುವುದು ಮಾತ್ರ ಅಲ್ಲ ಕುಳಿತಲ್ಲೇ ಕೂತುಕೊಂಡರೂ ವೇರಿಕೋಸ್ ವೇನ್ಸ್ ಅಲ್ಸರ್ ಕಾಡುತ್ತದೆ. ಇದಕ್ಕೆ ಯಾವುದೇ ವಯೋಮಾನದ ಮಿತಿ ಇಲ್ಲ, 18 ವರ್ಷ ಮೇಲ್ಪಟ್ಟವರಿಗೆ ಯಾರಿಗೆ ಬೇಕಾದರೂ ಇದು ಕಾಣಿಸಿಕೊಳ್ಳಬಹುದು ಎನ್ನುವುದು ವೈದ್ಯರು ನೀಡುವ ಎಚ್ಚರಿಕೆಯಾಗಿದೆ.
ವೇರಿಕೋಸ್ ವೇನ್ಸ್ ಅಲ್ಸರ್ ಪ್ರಮುಖ ಲಕ್ಷಣಗಳೆಂದರೆ ಕಾಲಿನಲ್ಲಿ ಗಂಟು, ನವೆ ಬರುವುದು, ಸೆಳೆತ, ಕಾಲು ಊತ, ಕಪ್ಪಾಗುವುದು, ವಿಪರೀತ ನೋವು ಕಾಣಿಸಿಕೊಳ್ಳಲಿದೆ. ಕೋವಿಡ್ ಬಳಿಕ ಈ ಪ್ರಕರಣಗಳು ಹೆಚ್ಚಳ ಕಂಡಿದೆ. ವರ್ಕ್ ಫಾರ್ಮ್ ಹೋಮ್ ಹೆಚ್ಚಾದ ಕಾರಣ ಬಹಳಷ್ಟು ಐಟಿಬಿಟಿ ಉದ್ಯೋಗಿಗಳು 10 ಗಂಟೆಗೂ ಹೆಚ್ಚು ಸಮಯ ಕುಳಿತುಕೊಂಡೇ ಕೆಲಸ ಮಾಡುತ್ತಿದ್ದರು. ಹೀಗಾಗಿ ಇವರಲ್ಲೂ ವೇರಿಕೋಸ್ ವೇನ್ಸ್ ಅಲ್ಸರ್ ಹೆಚ್ಚಾಗಿ ಕಾಣಿಸಿಕೊಂಡಿದೆ ಎಂದು ತಜ್ಞ ವೈದ್ಯ ಡಾ.ವಿನಯ್ ನ್ಯಾಪಥಿ ತಿಳಿಸಿದ್ದಾರೆ.
ಗಂಟೆಗಟ್ಟಲೆ ನಿಲ್ಲುವವರು ಮಧ್ಯದಲ್ಲಿ ಬಿಡುವು ತೆಗೆದುಕೊಂಡು ಐದು ನಿಮಿಷ ಕೂತುಕೊಳ್ಳುವುದು. ಹಾಗೇ ಕುಳಿತುಕೊಂಡೆ ಕೆಲಸ ಮಾಡುವವರು ಆಗಾಗ ಎದ್ದು ಓಡಾಡಬೇಕು. ಇದರಿಂದಾಗಿ ಕಾಲಿನಲ್ಲಿ ರಕ್ತ ಸಂಚಾರ ಆಗುತ್ತದೆ. ಆದಷ್ಟು ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು, ವ್ಯಾಯಾಮ ಮಾಡುವುದು ಒಳಿತು ಎಂದು ಡಾ.ವಿನಯ್ ನ್ಯಾಪಥಿ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Smart Virtual Clinic: ಬೆಂಗಳೂರಲ್ಲಿ ಕ್ಲಿಕ್ ಆಯ್ತು ಸ್ಮಾರ್ಟ್ ವರ್ಚುವಲ್ ಕ್ಲಿನಿಕ್; ಏನೆಲ್ಲ ಚಿಕಿತ್ಸೆ ಲಭ್ಯವಿದೆ?
ವೇರಿಕೋಸ್ ವೇಯ್ನ್ ಅಲ್ಸರ್ ಕಾಣಿಸಿಕೊಂಡ ರೋಗಿಗಳು ಆರಂಭದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಭಾಗಶಃ ರೋಗಿಗಳು ಕಾಯಿಲೆ ಕೊನೆಯ ಹಂತಕ್ಕೆ ತಲುಪಿದಾಗ ಬರುತ್ತಾರೆ. ಮೊದಲ ಹಂತದಲ್ಲಿ ಕಾಲು ಸೆಳೆತ, ನೋವು ಕಾಣಿಸಿಕೊಳ್ಳುತ್ತದೆ. ಎರಡನೇ ಹಂತದಲ್ಲಿ ಕಾಲು ಊತ, ಭಾರದಂತಾಗುತ್ತದೆ. ಮೂರನೇ ಹಂತದಲ್ಲಿ ಚರ್ಮದ ಬಣ್ಣ ಕಪ್ಪಾಗುವುದು, ನಾಲ್ಕನೇ ಹಂತದಲ್ಲಿ ಹುಣ್ಣಾಗುತ್ತದೆ. ಹೀಗಾಗಿ ಆರಂಭದಲ್ಲಿ ರೋಗದ ಲಕ್ಷಣ ತಿಳಿದುಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಒಳಿತು ಎಂದು ಡಾ.ವಿನಯ್ ನ್ಯಾಪಥಿ ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ