ಬೆಂಗಳೂರು, ಕರ್ನಾಟಕ: ಕರ್ನಾಟಕದ ವಿಧಾನಸಭೆ ಚುನಾವಣೆಯು ಅಂತಿಮ ಘಟ್ಟಕ್ಕೆ ನಿಂತಿದೆ. ಈಗಾಗಲೇ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಮೇ 10 ಬುಧವಾರದಂದ ಮತದಾನ ನಡೆಯಲಿದೆ. ಕೇಂದ್ರ ಚುನಾವಣಾ ಆಯೋಗ (Election Commission) ಪ್ರತಿ ಚುನಾವಣೆ ವೇಳೆ, ಮತದಾನ ಹೆಚ್ಚಿಸಲು ನಾನಾ ಕ್ರಮಗಳನ್ನು ಕೈಗೊಳ್ಳುತ್ತದೆ. ಮತದಾನ ಮಹತ್ವದ ಕುರಿತು ಜನರಲ್ಲಿ ಜಾಗೃತಿ (Sveep Program) ಮೂಡಿಸುತ್ತದೆ. ಆದರೂ, ಈ ಗಣನೀಯ ಪ್ರಮಾಣದಲ್ಲಿ ಯಶಸ್ಸು ಸಿಕ್ಕಿಲ್ಲ. ಹೀಗಿದ್ದೂ, ನಿರಂತರ ಪ್ರಯತ್ನ ಮುಂದುವರಿದಿದೆ(Karnataka Election 2023).
ಮತದಾನ ಜಾಗೃತಿಗಾಗಿ ಚುನಾವಣಾ ಆಯೋಗ ಸಮೂಹ ಮಾಧ್ಯಮಗಳನ್ನು ಬಳಸಿಕೊಳ್ಳುತ್ತದೆ. ಹೊಸ ಕಾಲದಲ್ಲಿ ಆಯೋಗವು ಸೋಷಿಯಲ್ ಮೀಡಿಯಾಗಳ ಮೂಲಕವ ಭರ್ಜರಿ ಮತ ಜಾಗೃತಿಯನ್ನು ನಡೆಸುತ್ತಿದೆ. ಇದಕ್ಕಾಗಿ ಅದು ಗಣ್ಯರು, ಸೆಲೆಬ್ರಿಟಿಗಳು, ಜಾನಪದ ಕಲಾವಿದರು, ವಿಶಿಷ್ಟ ಕಲೆಗಳನ್ನು ಬಳಸಿಕೊಂಡು ಮತದಾನ ಮಹತ್ವವನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದೆ. ಇದಕ್ಕಾಗಿ ಆಯೋಗವು ಪ್ರತ್ಯೇಕವಾದ ವಿಭಾಗವನ್ನೇ ಹೊಂದಿದೆ. SVEEP ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರನ್ನು ಮುಟ್ಟಲು ಯಶಸ್ವಿಯಾಗಿವೆ. ಇದರೊಂದಿಗೆ ಮತದಾನ ಹೆಚ್ಚಿಸುವ ಪ್ರಯತ್ನ ಮುಂದುವರಿದಿದೆ.
ಆಯೋಗದ ಜತೆಗೆ ನಾನಾ ಸಂಘ ಸಂಸ್ಥೆಗಳು, ಚಿತ್ರ ಕಲಾವಿದರು, ಬೇರೆ ಬೇರೆ ಉದ್ಯೋಗದಲ್ಲಿರುವವರು, ಗಣ್ಯರು, ಸಿನಿಮಾ ನಟರು ಹಾಗೂ ಸಾಮನ್ಯರ ತಮ್ಮ ವ್ಯಾಪ್ತಿಯಲ್ಲಿ ತಮಗಾಗುವ ಮಟ್ಟಿಗೆ ಮತದಾನ ಮಹತ್ವವನ್ನು ಸಾರುವ ಕೆಲಸವನ್ನು ಮಾಡುತ್ತಿದ್ದಾರೆ. ಬರ್ತ್‌ಡೇ, ಮದುವೆಯಂಥ ಕಾರ್ಯಕ್ರಮಗಳಲ್ಲೂ ಇಂದು ಮತದಾನ ಜಾಗೃತಿ ಮೂಡಿಸುವ ಕೆಲಸಗಳಾಗುತ್ತಿವೆ.