Site icon Vistara News

Karnataka Congress: ಸಿಎಂ ಬಲಗೈ ಬಂಟ ಕಾಂಗ್ರೆಸ್ ಸೇರ್ಪಡೆ; ಬಿಜೆಪಿ ಶೋಚನೀಯ ಸ್ಥಿತಿಗೆ ಸಾಕ್ಷಿ: ಡಿ.ಕೆ. ಶಿವಕುಮಾರ್

various party leaders join karnataka congress

#image_title

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಲಗೈ ಭಂಟನಂತೆ ಇದ್ದ ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ನಾಯಕ, ಮಾಜಿ ಸಂಸದ ಹಾಗೂ ಮಾಜಿ ಶಾಸಕ ಮಂಜುನಾಥ್ ಕುನ್ನೂರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು, ಬಿಜೆಪಿಯ ಶೋಚನೀಯ ಸ್ಥಿತಿಗೆ ಇದು ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಚಿಂತಾಮಣಿ, ಕೆ ಆರ್ ಪೇಟೆ, ಶಿಗ್ಗಾಂವಿ ಹಾಗೂ ಶಿವಮೊಗ್ಗ ಕ್ಷೇತ್ರದ ಅನ್ಯ ಪಕ್ಷಗಳ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದ ಮುಖ್ಯಮಂತ್ರಿಗಳು ತನ್ನ ಆಪ್ತರನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವಾಗ ರಾಜ್ಯದ ಜನರ ವಿಶ್ವಾಸ ಗಳಿಸಲು ಸಾಧ್ಯವೇ? ಮಂಜುನಾಥ್ ಕುನ್ನೂರ ಅವರು ಲೋಕಸಭೆ ಮಾಜಿ ಸದಸ್ಯರು, ಮೂರು ಬಾರಿ ಶಾಸಕರಾಗಿದ್ದರು. ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕತ್ವ ಹಾಗೂ ಸಿದ್ಧಾಂತ ಒಪ್ಪಿ ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿ ನಾಯಕರೇ ಮುಖ್ಯಮಂತ್ರಿ ಕ್ಷೇತ್ರದಲ್ಲಿ ಬದಲಾವಣೆ ಬಯಸಿದ್ದಾರೆ ಎಂಬುದಕ್ಕೆ ಇದು ಸಾಕ್ಷಿ. ಈ ಸೇರ್ಪಡೆ ಶಿಗ್ಗಾಂವ್ ಕ್ಷೇತ್ರದಲ್ಲಿ ಮುಂಬರುವ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಮಂಜುನಾಥ್ ಹಾಗೂ ಅವರ ಜತೆ ಬಂದಿರುವ ಎಲ್ಲ ನಾಯಕರಿಗೆ ನಾನು ಹೃದಯಪೂರ್ವಕವಾಗಿ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದರು.

ಚಿಂತಾಮಣಿಯ ಜೆಡಿಎಸ್ ನಾಯಕರನ್ನು ಸೇರ್ಪಡೆ ಮಾಡಿಕೊಂಡು, ‘ಜಾತ್ಯಾತೀತ ಜನತಾದಳ ತ್ಯಜಿಸಿ ಚಿಂತಾಮಣಿ ಕ್ಷೇತ್ರದ ಮೂವರು ಪ್ರಮುಖ ನಾಯಕರು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಪಕ್ಷದ ಸಿದ್ಧಾಂತ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟು ಪಕ್ಷ ಸೇರುತ್ತಿದ್ದಾರೆ.

ರಾಹುಲ್ ಗಾಂಧಿ ಅವರು ದೇಶದ ಪರವಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಅವರ ಸದಸ್ಯತ್ವ ಅನರ್ಹ ಮಾಡಿದ್ದಾರೆ. ಅವರಿಗೆ ಶಕ್ತಿ ತುಂಬಲು ನೀವು ಬಂದಿದ್ದು, ನಿಮ್ಮನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ಹಳಬರು ಹೊಸಬರು ಎಂಬ ಯಾವುದೇ ವ್ಯತ್ಯಾಸವಿಲ್ಲದೇ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಸುಧಾಕರ್ ಅವರನ್ನು ನಾವು ಪಕ್ಷದ ಅಭ್ಯರ್ಥಿ ಎಂದು ತೀರ್ಮಾನಿಸಿದ್ದು, ನೀವೆಲ್ಲರೂ ಸೇರಿ ಅವರನ್ನು ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕು. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು, ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆಗೆ ತಲುಪಿಸಬೇಕು’ ಎಂದು ಕರೆ ನೀಡಿದರು.

ಕೆ.ಆರ್ ಪೇಟೆಯ ಜೆಡಿಎಸ್ ನಾಯಕ ದೇವರಾಜ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿ, ‘ಮಂಡ್ಯ ಜಿಲ್ಲೆಯ ರಾಜಕೀಯ ಇಂದು ಹೊಸ ತಿರುವು ಪಡೆಯುತ್ತಿದೆ. ಬಹಳಷ್ಟು ನಾಯಕರು ಜೆಡಿಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಕಳೆದ ಕೆ.ಆರ್. ಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಎರಡನೇ ಸ್ಥಾನ ಪಡೆದಿದ್ದ ದೇವರಾಜ್ ಅವರು ಇಂದು ಕಾಂಗ್ರೆಸ್ ಸೇರುತ್ತಿದ್ದಾರೆ.

Exit mobile version