Site icon Vistara News

Karnataka Election: ಸಿದ್ದರಾಮಯ್ಯ ಏನೇ ಮಾಡಿದ್ರೂ ಈ ಬಾರಿ ವಿಧಾನಸೌಧಕ್ಕೆ ಹೋಗೋದಿಲ್ಲ: ವರ್ತೂರ್ ಪ್ರಕಾಶ್

Varthur Prakash says Siddaramaiah will not win the assembly election

Varthur Prakash says Siddaramaiah will not win the assembly election

ದಾವಣಗೆರೆ: ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯಗೆ ವರುಣದಿಂದ ಟಿಕೆಟ್ ಘೋಷಣೆಯಾಗಿದೆ. ಕೋಲಾರದಲ್ಲೂ ಟಿಕೆಟ್ ಸಿಗಬಹುದು. ಆದರೆ, ಅವರು ಈ ಬಾರಿಯ ಚುನಾವಣೆಯಲ್ಲಿ (Karnataka Election) ಎರಡೂ ಕ್ಷೇತ್ರಗಳಲ್ಲೂ ಸೋಲು ಅನುಭವಿಸುತ್ತಾರೆ ಎಂದು ಮಾಜಿ ಶಾಸಕ ವರ್ತೂರ್ ಪ್ರಕಾಶ್ ಹೇಳಿದರು.

ನಗರದಲ್ಲಿ ಬುಧವಾರ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಆಗಿರುವ ಸೋಲು ಕೋಲಾರದಲ್ಲೂ ಆಗುತ್ತದೆ. ಮಾಡಿದ ಪಾಪದ ಕೆಲಸದಿಂದಲೇ ಅವರು ಸೋಲುತ್ತಾರೆ. ಪಾಪದ ಕೊಡ ತುಂಬಿರುವುದರಿಂದ ಸಿದ್ದರಾಮಯ್ಯ ನೆಲ ಕಚ್ಚುತ್ತಾರೆ. ವರುಣದಲ್ಲಿ ಕೂಡ ಪ್ರಬಲ ಅಭ್ಯರ್ಥಿಯನ್ನು ಹುಡುಕಿದ್ದೇವೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದರು.

ಸಿದ್ದರಾಮಯ್ಯ ರಾಜ್ಯ ಪ್ರವಾಸ ಬಿಟ್ಟು ಕೋಲಾರ, ವರುಣದಲ್ಲಿ ಇರುತ್ತಾರೆ. ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಈ ಬಾರಿ ಸಿದ್ದರಾಮಯ್ಯ ವಿಧಾನಸೌಧಕ್ಕೆ ಹೋಗುವುದಿಲ್ಲ. ಇಲ್ಲಿಯವರೆಗೂ ಸಿಎಂ ಆದವರಾರೂ ಕ್ಷೇತ್ರ ಬದಲಾವಣೆ ಮಾಡಲಿಲ್ಲ. ಆದರೆ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ನಡೆಸುತ್ತಿದ್ದಾರೆ. 120 ಸೀಟ್ ಬಂದು ಸಿದ್ದರಾಮಯ್ಯ ಸಿಎಂ ಆಗಿದ್ದರು. ನಂತರ 2018 ರಲ್ಲಿ 70-80 ಸೀಟ್‌ಗೆ ಕಾಂಗ್ರೆಸ್‌ ಇಳಿಯಿತು.

ಇದನ್ನೂ ಓದಿ | Kiccha Sudeepa: ಸಿಎಂ ಬೊಮ್ಮಾಯಿ ಮಾಮನನ್ನು ಬೆಂಬಲಿಸುವೆ; ಬಿಜೆಪಿ ಸೇರುವುದಿಲ್ಲ ಎಂದ ಕಿಚ್ಚ ಸುದೀಪ್‌

ʻʻಸಿದ್ದರಾಮಯ್ಯ ಅವರು ಅಕ್ಕಿ‌ ಕೊಟ್ಟಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಗೋಣಿ ಚೀಲಕ್ಕೆ ಮಾತ್ರ ಅವರು ದುಡ್ಡು ಕೊಟ್ಡಿದ್ದಾರೆ. ಕೇಂದ್ರ ಸರ್ಕಾರದಿಂದ ಅನ್ನಭಾಗ್ಯ ಅಕ್ಕಿಗೆ ಹಣ ಬಂದಿದೆ. ಅವರ ಸರ್ಕಾರದಲ್ಲಿ ಅತಿ ಹೆಚ್ಚು ಹಗರಣಗಳು ಆಗಿವೆ. ಆದರೆ, ಹಗರಣ ಹೊರಬರುತ್ತದೆ ಎಂದು ಲೋಕಾಯುಕ್ತ ಮುಚ್ಚಿ ಹಾಕಿ ಎಸಿಬಿಯನ್ನು ತೆರೆದರು. ರಾಜ್ಯದಲ್ಲಿ ಭ್ರಷ್ಟ ಸಿಎಂ ಎಂದು ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯ ಎಂದ ಅವರು, ವ್ಯಾಪಕವಾಗಿ ಭ್ರಷ್ಟಾಚಾರ ಮಾಡಿ 50% ಕಮಿಷನ್ ಪಡೆದು ಅಧಿಕಾರ ಮಾಡಿದರುʼʼ ಎಂದು ಆರೋಪಿಸಿದರು.

ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ಕಿತ್ತಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಕಿತ್ತಾಡುವ ಪ್ರಶ್ನೆ ಬರುತ್ತದೆ. ಅವರಲ್ಲಿ ಒಗ್ಗಟ್ಟು ಬರುವುದಿಲ್ಲ, ಹೀಗಾಗಿ ಅಧಿಕಾರಕ್ಕೂ ಬರುವುದಿಲ್ಲ. ಎರಡನೇ ಪಟ್ಟಿ ಬಿಡುಗಡೆ ಮಾಡಿದ ನಂತರ ಅವರ ಪರಿಸ್ಥಿತಿ ಹೇಗಿರಲಿದೆ, ಎಷ್ಟು ಜನ ಪಕ್ಷ ಬಿಟ್ಟು ಹೋಗುತ್ತಾರೇ ಎನ್ನುವುದು ಗೊತ್ತಾಗುತ್ತದೆ. ಅವರು ಗೆಲ್ಲುವುದು ಇಲ್ಲ, ಅವರ ಪಕ್ಷ ಅಧಿಕಾರಕ್ಕೂ ಬರುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ | Kiccha Sudeep: ಐಟಿ-ಇಡಿಗೆ ಬೆದರಿ ಬಿಜೆಪಿಗೆ ಸುದೀಪ್‌ ಬೆಂಬಲ ಎಂದ ಸುರ್ಜೆವಾಲ: ಬಿಜೆಪಿ ಪಾಳೆಯ ಕೆಂಡಾಮಂಡಲ

ʻʻಸಿದ್ದರಾಮಯ್ಯ ಸಿಎಂ ಆಗುತ್ತಾರೆ ಎಂದು ಕುರುಬರು ಕಾಂಗ್ರೆಸ್‌ ಅನ್ನು ಗೆಲ್ಲಿಸಿದ್ದರು. ಆದರೆ ಈಗ ಕುರುಬ ಸಮುದಾಯ ಬಿಜೆಪಿ ಪರವಾಗಿದೆ. ಅವರು ಅಧಿಕಾರದಲ್ಲಿದ್ದಾಗ ಕುರುಬರಿಗೆ ಯಾವುದೇ ಒಳಿತು ಮಾಡಿಲ್ಲ. ಕುರುಬ ಸಮಾಜವೇ ಕಾಂಗ್ರೆಸ್ ಪಕ್ಷವನ್ನು ಸೋಲಿಸುತ್ತದೆʼʼ ಎಂದ ವರ್ತೂರು, ಐಟಿ, ಇಡಿ ರೇಡ್‌ಗೂ ಸರ್ಕಾರಕ್ಕೆ ಯಾವುದೇ ಸಂಬಂಧ ಇಲ್ಲ. ಅಕ್ರಮ ಆಸ್ತಿ ಮಾಡಿದವರ ಮೇಲೆ ದಾಳಿಯಾಗುತ್ತದೆ. ಅದು ಯಾವ ಪಕ್ಷದವರಾಗಿದ್ದರೂ ಅವರ ಮೇಲೆ ದಾಳಿಯಾಗುತ್ತದೆ ಎಂದು ಹೇಳಿದರು.

Exit mobile version