ಬೆಂಗಳೂರು: ಕೋಲಾರದ ಮಾಜಿ ಶಾಸಕ, ಮಾಜಿ ಸಚಿವ, ಬಿಜೆಪಿ ನಾಯಕ ವರ್ತೂರ್ ಪ್ರಕಾಶ್ (Vartur Prakash) ಅವರ ಪುತ್ರ ತೇಜಸ್ ಪ್ರಕಾಶ್ ಅವರಿಗೆ ನಗರದ ಕೋರ್ಟ್ ಒಂದು ಜಾಮೀನುರಹಿತ ವಾರಂಟ್ ಜಾರಿ (Non bailable warrant) ಮಾಡಿದೆ.
ನಗರದ 19ನೇ ಸಿಟಿ ಸಿವಿಲ್ ಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದ ಬೆನ್ನಿಗೇ ಪೊಲೀಸರು ತೇಜಸ್ ಅವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಸದಾಶಿವ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ಕೋರ್ಟ್‌ನಲ್ಲಿ ಸಲ್ಲಿಸಿದ ದಾವೆಯ ಆಧಾರದಲ್ಲಿ ಈ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ. ಹೀಗಾಗಿ ಸದಾಶಿವ ನಗರ ಪೊಲೀಸರು ಮಾಜಿ ಶಾಸಕನ ಪುತ್ರನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ವರ್ತೂರು ಪ್ರಕಾಶ್ ಅವರಿಗೆ ಸೇರಿದ ಸಂಜಯ ನಗರದ ಮನೆ ಮತ್ತು ಕೋಲಾರದಲ್ಲಿರುವ ಮನೆ ವಿಳಾಸಗಳನ್ನು ವಾರಂಟ್‌ನಲ್ಲಿ ಉಲ್ಲೇಖಿಸಲಾಗಿದೆ.
ವರ್ತೂರ್ ಪ್ರಕಾಶ್ ಅವರ ಪುತ್ರ ಉದ್ಯಮ ನಡೆಸುತ್ತಿದ್ದು, ಯಾರಿಗೋ ಕೊಟ್ಟಿರುವ ಚೆಕ್ ಬೌನ್ಸ್ ಆಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ಬಳಿಕ ಇದು ಕೋರ್ಟ್ ಕಟ್ಟೆ ಹತ್ತಿದೆ. ಹೀಗಾಗಿ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.
ವರ್ತೂರು ಪ್ರಕಾಶ್ ಅವರು ಈ ಬಾರಿಯೂ ಕೋಲಾರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಅವರು ಸ್ಪರ್ಧಿಸುತ್ತಿದ್ದು, ಬಿಜೆಪಿ ವರ್ತೂರು ಅವರಿಗೆ ಟಿಕೆಟ್ ನೀಡುತ್ತದೆಯೇ ಇಲ್ಲವೇ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : Karnataka Election : ಅವನು ಚಿಲ್ಲರೆ ಎಂದ ಸಿದ್ದರಾಮಯ್ಯ, ಸಿಟ್ಟಿಗೆದ್ದ ವರ್ತೂರು ಪ್ರಕಾಶ್, ಕ್ಷಮೆ ಯಾಚನೆಗೆ ಪಟ್ಟು