Site icon Vistara News

Varuna Election Results : ವರುಣ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಭರ್ಜರಿ ಗೆಲುವು

Varuna Election Results 2023 siddaramaiah

#image_title

ಮೈಸೂರು: ಜಿದ್ದಾಜಿದ್ದಿನಿಂದ ಕೂಡಿದ್ದ ವರುಣಾ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು 46006 ಮತಗಳ ಅಂತರದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರು ಪ್ರತಿಸ್ಪರ್ಧಿಯಾಗಿದ್ದ ಲಿಂಗಾಯತ ನಾಯಕ ಎನಿಸಿಕೊಂಡಿದ್ದ ಮಾಜಿ ಸಚಿವ ಸೋಮಣ್ಣ ಅವರನ್ನು ಸೋಲಿಸಿದ್ದಾರೆ. ಸೋಮಣ್ಣ 73424 ಮತಗಳನ್ನು ಪಡೆದರೆ, ಸಿದ್ದರಾಮಯ್ಯ ಅವರು 119430 ಮತಗಳನ್ನು ತಮ್ಮದಾಗಿಸಿಕೊಂಡರು. ಇದು ಹಾಲಿ ಚುನಾವಣೆಯಲ್ಲಿ ಅತ್ಯಂತ ಕೌತುಕದ ಕ್ಷೇತ್ರವಾಗಿತ್ತು. ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ಜಿದ್ದಿಗೆ ಬಿದ್ದು ಪ್ರಯತ್ನ ಮಾಡಿತ್ತು.

2018ರಲ್ಲಿ ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ (96,435) ಅವರು ಬಿಜೆಪಿಯ ಟಿ. ಬಸವರಾಜು (37,819) ಅವರ ವಿರುದ್ಧ ಭರ್ಜರಿ ಜಯ ಗಳಿಸಿದ್ದರು. ಆದರೆ, ಹಾಲಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಸೂಕ್ತ ಕ್ಷೇತ್ರ ಲಭಿಸದ ಕಾರಣ ತಂದೆಗಾಗಿ ಅವರು ಕ್ಷೇತ್ರವನ್ನು ಬಿಟ್ಟುಕೊಟ್ಟರು.

ಈ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಬಿ.ಎಸ್‌ಯಡಿಯೂರಪ್ಪ ಪುತ್ರ ವಿಜಯೇಂದ್ರರನ್ನು ಬಿಜೆಪಿ ಅಖಾಡಕ್ಕಿಳಿಸುತ್ತದೆಂದು ಭಾರೀ ಚರ್ಚೆಯಾಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ವಿಜಯೇಂದ್ರ ವರುಣಾಗೆ ಬೆನ್ನು ತೋರಿದರು. ಬಳಿಕ ಸೋಮಣ್ಣ ಅವರು ಕಣಕ್ಕೆ ಇಳಿದಿದ್ದರು.

ಇದನ್ನೂ ಓದಿ : Krishnaraja Election Results : ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿಯ ಟಿ.ಎಸ್. ಶ್ರೀ ವತ್ಸಗೆ ಜಯ

2013ರ ಚುನಾವಣೆ ವೇಳೆಗೆ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದ ಯಡಿಯೂರಪ್ಪ ಮತ್ತವರ ಸಂಗಡಿಗರು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಕಟ್ಟಿದ್ದರು. ಆ ಬಾರಿ ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಕೆಜೆಪಿ ಅಭ್ಯರ್ಥಿ ಕಾಪು ಸಿದ್ದಲಿಂಗಸ್ವಾಮಿ ಕಣದಲ್ಲಿದ್ದರು. ಆ ಚುನಾವಣೆಯಲ್ಲಿ ಸಿದ್ದರಾಮಯ್ಯ 84,385 ಮತ ಪಡೆದು ಭರ್ಜರಿ ಗೆಲುವು ಸಾಧಿಸಿದರು. ಕಾಪು ಸಿದ್ದಲಿಂಗಸ್ವಾಮಿ 54,744  ಮತ ಪಡೆದರು.

ವರುಣಾ ಕ್ಷೇತ್ರ ಕಾಂಗ್ರೆಸ್‌ನ, ಅದರಲ್ಲೂ ಸಿದ್ದರಾಮಯ್ಯ ಕುಟುಂಬದ ಭದ್ರಕೋಟೆಯಾಗಿದೆ. ವರುಣಾ ಕ್ಷೇತ್ರವಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ವಲಸೆ ಬಂದು, ವರುಣಾದಲ್ಲಿ ಸ್ಪರ್ಧಿಸಿದ್ದರು.. ಆ ಚುನಾವಣೆಯಲ್ಲಿ ಸಿದ್ದರಾಮಯ್ಯ71,908 ಮತ ಪಡೆದು ಗೆಲುವು ಸಾಧಿಸಿದ್ದರು. ಅವರ ಎದುರಾಳಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ನಿವೃತ್ತ ಪೊಲೀಸ್‌ ಅಧಿಕಾರಿ ಎಲ್‌ ರೇವಣ್ಣಸಿದ್ದಯ್ಯ 53,071 ಮತ ಪಡೆದು ಸೋಲುಂಡಿದ್ದರು

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ 2,13,812 ಮತದಾರರಿದ್ದು, ಆ ಪೈಕಿ 1,08,249 ಪುರುಷರು ಮತ್ತು 1,05,547 ಮಹಿಳೆಯರು ಇದ್ದಾರೆ.

Exit mobile version