Site icon Vistara News

ವಿಸ್ತಾರ ವಿಶೇಷ | ಸೇನೆ ಸೇರಬಯಸಿದ್ದ ಎಂಜಿನಿಯರ್‌ ಕೊನೆಗೆ ಸರಳ ವಾಸ್ತು ತಜ್ಞರಾಗಿದ್ದರು!

sarala vasthu

ಬೆಂಗಳೂರು: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ರಾಜ್ಯದ ಅತಿ ಗಣ್ಯರ ಮನೆಗಳ ವಾಸ್ತುದೋಷಗಳನ್ನೂ ನಿವಾರಿಸಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇವರ ಸಲಹೆಯಂತೆಯೇ ಕಾವೇರಿ ನಿವಾಸವನ್ನು ನವೀಕರಿಸಿದ್ದರು.

ಮಂಡ್ಯದ ಸಂಸದೆ ಸುಮಲತಾ ಅಂಬರೀಷ್‌, ರಾಜ್ಯಸಭಾ ಸದಸ್ಯ ಜಗ್ಗೇಶ್‌ ಸೇರಿದಂತೆ ರಾಜ್ಯದ ಅನೇಕರು ಚಂದ್ರಶೇಖರ್‌ ಗುರೂಜಿಯವರಿಂದ ವಾಸ್ತು ಸಲಹೆ ಪಡೆಯುತ್ತಿದ್ದರು. ಮುಂಬಯಿಯಲ್ಲಿ ಸರಳ ವಾಸ್ತುವಿನ ಕೇಂದ್ರ ಕಚೇರಿ ತೆರೆದಿದ್ದ ಅವರು, ಅಲ್ಲಿಂದಲೇ ವ್ಯವಹಾರ ನಡೆಸುತ್ತಿದ್ದರು.

ಬೆಂಗಳೂರು, ಹುಬ್ಬಳ್ಳಿಯಲ್ಲಿ ಸರಳವಾಸ್ತುವಿನ ಕಚೇರಿಗಳಿವೆ. ಹುಬ್ಬಳ್ಳಿಯಲ್ಲಿ ಅವರು ದೊಡ್ಡ ಕಚೇರಿ ಹೊಂದಿದ್ದು, ನೂರಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಸಾಕಷ್ಟು ಸಂಬಂಧಿಗಳು ಇದ್ದರೂ ಅವರು ಹೋಟೆಲ್‌ನಲ್ಲಿಯೇ ಉಳಿದುಕೊಳ್ಳುತ್ತಿದ್ದರು ಎಂದು ಅವರ ಆಪ್ತರು “ವಿಸ್ತಾರ ನ್ಯೂಸ್‌ʼಗೆ ತಿಳಿಸಿದ್ದಾರೆ.

ಸೇನೆ ಸೇರಲು ಬಯಸಿದ್ದರು!

ಬಾಗಲಕೋಟೆಯವರಾದ ಚಂದ್ರಶೇಖರ ಗುರೂಜಿ ಚಿಕ್ಕಂದಿನಿಂದಲೇ ಸೇವಾ ಮನೋಭಾವನೆ ಹೊಂದಿದ್ದರು. ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಬಾಗಲಕೋಟೆಯ ಬಸವೇಶ್ವರ ನಗರದಲ್ಲಿನ ದೇವಸ್ಥಾನವೊಂದರ ಜೀರ್ಣೋದ್ಧಾರಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ, ಈ ಕೆಲಸವನ್ನು ಮಾಡಿಸಿದ್ದರು. ಮುಂದೆ ಪ್ರೌಢಶಾಲೆಯಲ್ಲಿ ಓದುವಾಗ ಸೇನೆ ಸೇರಬೇಕೆಂದು ಹಂಬಲಿಸಿದರು. ಆದರೆ ವೈದ್ಯಕೀಯ ಕಾರಣಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ.

ಬಾಗಲಕೋಟೆಯಲ್ಲಿಯೇ ಸಿವಿಲ್‌ ಎಂಜಿನಿಯರಿಂಗ್‌ ಮುಗಿಸಿದ ಅವರು ಮುಂಬಯಿಗೆ ತೆರಳಿ, ಅಲ್ಲಿ ಗುತ್ತಿಗೆ ಕೆಲಸ ಆರಂಭಿಸಿದ್ದರು. ಮೊದಲಿಗೆ ಚೆನ್ನಾಗಿಯೇ ಕೆಲಸ ನಡೆಯುತ್ತಿತ್ತು. ವೃತ್ತಿ ಜೀವನದಲ್ಲಿ ಪ್ರಾಮಾಣಿಕರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಸಂದರ್ಭದಲ್ಲಿ ಸಹಾಯಕರು ಮಾಡಿದ ಮೋಸದಿಂದಾಗಿ ಅವರು ಹಣ ಕಳೆದುಕೊಳ್ಳುವಂತಾಯಿತು. ಇದು ಅವರ ಮನಸ್ಸಿಗೆ ನೋವುಂಟುಮಾಡಿತು. ಗುತ್ತಿಗೆ ಕೆಲಸವನ್ನು ಕೈ ಬಿಟ್ಟು, ಈ ರೀತಿ ಮೋಸ ಆಗಲು ಕಾರಣವೇನೆಂದು ಹುಡುಕಾಟ ಆರಂಭಿಸಿದರು.

ಈ ಸಂದರ್ಭದಲ್ಲಿ (೧೯೯೮) ಗುರೂಜಿ ಮನೆ ಕಟ್ಟಿಸುತ್ತಿದ್ದುದ್ದರಿಂದ ಸಹಜವಾಗಿ ಅವರಿಗೆ ವಾಸ್ತು ಕಡೆಗೆ ಗಮನ ಹೋಯಿತು. ವಾಸ್ತು ಶಾಸ್ತ್ರವನ್ನು ಅಭ್ಯಾಸ ಮಾಡಿದ ಅವರು, ವಾಸ್ತು ದೋಷಗಳಿಗೆ ಸರಳವಾದ ಪರಿಹಾರವನ್ನು ತಾವೇ ಕಂಡುಕೊಂಡರು. ಅದನ್ನು ಅವರು “ಸರಳ ವಾಸ್ತುʼ ಎಂದು ಕರೆದರು. ಈ ಬಗ್ಗೆ ತಮ್ಮ ಗೆಳೆಯರೊಂದಿಗೆ ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದರು. ಮುಂದೆ ವಾಸ್ತು ಸಲಹೆ ನೀಡುವ ಕಂಪನಿಯನ್ನು ಆರಂಭಿಸಿದ್ದರು. 1995ರಲ್ಲಿ “ಶರಣ ಸಂಕುಲ ಟ್ರಸ್ಟ್ʼ ಆರಂಭಿಸಿದ್ದರು. ಅವರು ಟ್ರಸ್ಟ್‌ನ ಸಂಸ್ಥಾಪಕ ಹಾಗೂ ಟ್ರಸ್ಟಿಯೂ ಆಗಿದ್ದರು.

ಮುಂಬಯಿಯಲ್ಲಿಯೇ ನೆಲೆಸಿದ್ದರು
೫೯ ವರ್ಷದ ಚಂದ್ರಶೇಖರ ಗುರೂಜಿ ಮುಂಬಯಿಯಲ್ಲಿಯೇ ನೆಲೆಸಿದ್ದರು. ಅವರಿಗೆ ಪತ್ನಿ ಮತ್ತು ಪುತ್ರಿ ಇದ್ದಾರೆ. ಮುಂಬಯಿ ಕಚೇರಿಯಲ್ಲಿಯೇ ಸ್ಟುಡಿಯೋ ಇದ್ದುದ್ದರಿಂದ ಅಲ್ಲಿಂದಲೇ ಟಿವಿ ಕಾರ್ಯಕ್ರಗಳನ್ನು ನಡೆಸಿಕೊಡುತ್ತಿದ್ದರು. ಲೈವ್‌ ಕಾರ್ಯಕ್ರಮಗಳಲ್ಲಿ ಯಾರಾದರೂ ಕಷ್ಟ ಹೇಳಿಕೊಂಡರೆ ಅವರಿಗೆ ನೆರವಾಗುತ್ತಿದ್ದರು. ಹೀಗೆ ಬಹಳಷ್ಟು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಹಣಕಾಸಿನ ನೆರವು ನೀಡಿದ್ದಾರೆ ಎಂದು ʼಸರಳ ವಾಸ್ತುʼ ಸಂಸ್ಥೆಯ ಉದ್ಯೋಗಿಗಳು ʼವಿಸ್ತಾರ ನ್ಯೂಸ್‌ʼಗೆ ತಿಳಿಸಿದ್ದಾರೆ.

ಮೊಮ್ಮಗಳ ಸಾವಿನಿಂದಾಗಿ ಹುಬ್ಬಳ್ಳಿಗೆ ಹೋಗಿದ್ದರು
ಚಂದ್ರಶೇಖರ ಗುರೂಜಿ ವ್ಯವಹಾರದ ಉದ್ದೇಶಕ್ಕೆಂದೇನೂ ಹುಬ್ಬಳ್ಳಿಗೆ ಹೋಗಿರಲಿಲ್ಲ. ಇತ್ತೀಚೆಗೆ ಅವರ ತಮ್ಮನ ಮೊಮ್ಮಗಳು ಅನಾರೋಗ್ಯದಿಂದ ಮೃತಪಟ್ಟಿದ್ದಳು. ಹೀಗಾಗಿ ಅವರು ಕಳೆದ ಶುಕ್ರವಾರವೇ ಹುಬ್ಬಳ್ಳಿಗೆ ಬಂದಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ.

ತಮ್ಮನ ಮನೆಯಲ್ಲಿ ಅಂತಿಮ ಕಾರ್ಯಗಳು ಮುಗಿದ ನಂತರ ಅವರು ಎಂದಿನಂತೆಯೇ ವ್ಯವಹಾರಕ್ಕಾಗಿ ಹೋಟೆಲ್‌ಗೆ ಆಗಮಿಸಿರಬಹುದು ಎಂದು ಹೇಳಲಾಗುತ್ತಿದೆ. ಹತ್ಯೆಯ ಕಾರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ| ವಾಸ್ತು ಸಲಹೆ ನಮ್ಮದು, ಪರಿಹಾರ ಸಿಗದಿದ್ದರೆ ನಾವು ಹೊಣೆಯಲ್ಲ: ಇದು ಸರಳ ವಾಸ್ತು ಷರತ್ತು!

Exit mobile version