Site icon Vistara News

Veer Savarkar flyover: ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಮಸಿ; ಎನ್‌ಎಸ್‌ಯುಐ ಕಾರ್ಯಕರ್ತರು ವಶಕ್ಕೆ

Veer Savarkar flyover

ಬೆಂಗಳೂರು: ನಗರದ ಹೊರವಲಯದ ಯಲಹಂಕದ ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಎನ್‌ಎಸ್‌ಯುಐ ಕಾರ್ಯಕರ್ತರು ಮಸಿ ಬಳಿದಿರುವ ಘಟನೆ ಮಂಗಳವಾರ ನಡೆದಿದೆ. ಸಂಚಾರ ತಡೆ ನಡೆಸಿ ನಾಮಫಲಕಕ್ಕೆ ಮಸಿ ಬಳಿದಿದ್ದು, ಕೃತ್ಯ ಎಸಗಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಮಸಿ ಬಳಿದಿರುವ ಎನ್‌ಎಸ್‌ಯುಐ ಕಾರ್ಯಕರ್ತರು, ಬಳಿಕ ಸೇತುವೆಗೆ ʼಭಗತ್ ಸಿಂಗ್ ಮೇಲ್ಸೇತುವೆʼ ಹೆಸರಿನ ಬ್ಯಾನರ್ ಹಾಕಿದ್ದಾರೆ. ನಾಮಫಲಕಕ್ಕೆ ಮಸಿ ಬಳಿದಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಕಾರ್ಯಕರ್ತರು ಹಾಗೂ ಸಾರ್ವಜನಿಕರ ನಡುವೆ ಕಿತ್ತಾಟ ನಡೆದಿದೆ.

ಘಟನೆ ಬಳಿಕ ಯಲಹಂಕ ನ್ಯೂ ಟೌನ್ ಪೊಲೀಸರಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರವೀಣ್, ರಕ್ಷ ರಾಜ್, ನಿಶ್ಚಿತ್ ಗೌಡ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಖಂಡಿಸಿ ಬಿಜೆಪಿ ಪ್ರತಿಭಟನೆ

ವೀರ ಸಾವರ್ಕರ್ ಮೇಲ್ಸೇತುವೆಗೆ ಮಸಿ ಬಳಿದಿರುವುದನ್ನು ಖಂಡಿಸಿ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕ ವಿಶ್ವನಾಥ್, ಕಾಂಗ್ರೆಸ್ ನಾಯಕರ ಫೋಟೋಗಳು ಯಲಹಂಕದಲ್ಲಿವೆ. ಆದರೆ, ನಾವು ಯಾವುದೇ ಪೋಟೋಗಳಿಗೂ ಮಸಿ ಬಳಿದಿಲ್ಲ. ವೀರ ಸಾವರ್ಕರ್ ಇತಿಹಾಸವನ್ನು ಕಾಂಗ್ರೆಸ್‌ನವರು ತಿಳಿದುಕೊಳ್ಳಲಿ ಎಂದು ಕಿಡಿಕಾರಿದರು.

ಈಗ ಮೂವರನ್ನು ಬಂಧನ ಮಾಡಿದ್ದಾರೆ. ಉಳಿದವರನ್ನು ಶೀಘ್ರವಾಗಿ ಬಂಧನ ಮಾಡಬೇಕು. ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ. ಸ್ವಯಂ ಪ್ರೇರಿತವಾಗಿ ಯಲಹಂಕ ಬಂದ್ ಕೂಡ ಮಾಡಲಾಗುತ್ತದೆ. ಶೀಘ್ರ ನಾಮಫಲಕ ಸರಿಪಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ಯಲಹಂಕ ನ್ಯೂ ಟೌನ್ ಪೋಲೀಸ್ ಠಾಣೆಯ ಮುಂಭಾಗ ನೂರಾರು ಬಿಜೆಪಿ ಕಾರ್ಯಕರ್ತರು ಜಮಾಯಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ವಿದ್ಯಾರ್ಥಿನಿಯ ಡೀಪ್‌ ಫೇಕ್‌ ಫೋಟೋ ಸೃಷ್ಟಿ ಮಾಡಿದ ಅದೇ ಶಾಲೆಯ 2 ಹುಡುಗರು ಡಿಬಾರ್

ಬೆಂಗಳೂರು: ಖಾಸಗಿ ಶಾಲೆಯ (private school) ವಿದ್ಯಾರ್ಥಿನಿಯೊಬ್ಬರ ಫೋಟೋವನ್ನು ಡೀಪ್‌ ಫೇಕ್‌ ಮೂಲಕ ನಗ್ನವಾಗಿ ಕ್ರಿಯೇಟ್‌ ಮಾಡಿ (student Deepfake Photo case) ಇನ್‌ಸ್ಟಾಗ್ರಾಂನಲ್ಲಿ (Instagram) ಹಂಚಿಕೊಂಡ ಪ್ರಕರಣದಲ್ಲಿ, ಅದೇ ಶಾಲೆಯ 2 ವಿದ್ಯಾರ್ಥಿಗಳನ್ನು ಅಮಾನತು (debar) ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಶಾಲಾ ಪ್ರಿನ್ಸಿಪಾಲರು ಅಮಾನತು ಮಾಡಿದ್ದಾರೆ. ಡೀಪ್ ಫೇಕ್ ತಂತ್ರಜ್ಞಾನ ಬಳಸಿ ತಮ್ಮ ಶಾಲೆಯ ವಿದ್ಯಾರ್ಥಿನಿಯೊಬ್ಬರ ಅರೆನಗ್ನ ಫೋಟೋ ಸೃಷ್ಟಿಸಿ ಅದನ್ನು ವಿದ್ಯಾರ್ಥಿಗಳೇ ಇರುವ ಇನ್‌ಸ್ಟಗ್ರಾಂ ಗ್ರೂಪ್‌ ಒಂದರಲ್ಲಿ ಹಂಚಿಕೊಂಡು ವೈರಲ್‌ ಮಾಡಿದ ಆರೋಪ ಇವರ ಮೇಲಿದೆ.

ಮೇ 24ರಂದು 9ನೇ ತರಗತಿಯ ವಿದ್ಯಾರ್ಥಿನಿಯರ ಫೋಟೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿತ್ತು. ಇದರಿಂದ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಬೆಚ್ಚಿ ಬಿದ್ದಿದ್ದರು. ವಿದ್ಯಾರ್ಥಿನಿಯರು ಶಾಕ್‌ಗೆ ಒಳಗಾಗಿ, ಖಿನ್ನತೆಗೆ ಜಾರುವ ಪರಿಸ್ಥಿತಿ ತಲುಪಿದ್ದರು. ಆತಂಕಿತಗೊಂಡ ವಿದ್ಯಾರ್ಥಿನಿಯ ಪೋಷಕರು ಸೈಬರ್ ಸೆಲ್‌ಗೆ ದೂರು ನೀಡಿದ್ದರು.

ಪ್ರಕರಣವನ್ನು ಶಾಲೆ ಆಡಳಿತ ಮಂಡಳಿ ಹಾಗೂ ಸೈಬರ್‌ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಕರಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಈ ಕೃತ್ಯವನ್ನು ತಾವೇ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಅರೆನಗ್ನ ಫೋಟೋಗೆ ಹಲವು ಮಂದಿ ವಿಕೃತವಾದ, ಆತಂಕಪಡಿಸುವಂಥ ಕಾಮೆಂಟ್‌ಗಳನ್ನೂ ಹಾಕಿದ್ದಾರೆ. ಇವರನ್ನೂ ಹುಡುಕಿ ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಸೈಬರ್‌ ಪೊಲೀಸರು ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಡೀಪ್‌ ಫೇಕ್‌ ತಂತ್ರಜ್ಞಾನ ನೀಡಿದವರು ಯಾರು, ಈ ಬಗೆಯ ಫೋಟೋ ಸೃಷ್ಟಿಸಲು ತರಬೇತಿ ನೀಡಿದವರು ಯಾರು, ಇವರಿಗೆ ಇರಬಹುದಾದ ಹೊರಗಿನ ಬೆಂಬಲ ಇತ್ಯಾದಿಗಳ ಬಗ್ಗೆಯೂ ಗಮನ ಹರಿಸಲಾಗುತ್ತಿದೆ.‌

Exit mobile version