ಬೆಳಗಾವಿ: ಸಾರ್ವಜನಿಕ ಗಣೇಶೋತ್ಸವ ಮಂಟಪಗಳಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಕೆ ವಿಚಾರದಲ್ಲಿ ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯಬೇಕೆಂಬ ಎಡಿಜಿಪಿ ಅಲೋಕ್‌ಕುಮಾರ್ ಅವರ ಹೇಳಿಕೆಗೆ ಆಕ್ರೋಶ ಎದುರಾಗಿದೆ.
ಮೊನ್ನೆಯಷ್ಟೇ ಬೆಳಗಾವಿಗೆ ಭೇಟಿ ನೀಡಿದ್ದ ಎಡಿಜಿಪಿ ಅಲೋಕ್‌ಕುಮಾರ್ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಸಾವರ್ಕರ್ ಸೇರಿ ಮಹಾಪುರುಷರ ಫೋಟೋ ಹಾಕಲು ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯಬೇಕು ಎಂದಿದ್ದರು. ಈ ಹೇಳಿಕೆಯನ್ನು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ.
ನಾವು ಯಾವ ದೇಶದಲ್ಲಿ ಇದ್ದೇವೆ? ನಮಗೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಆಗಿದೆ. ಸ್ವಾತಂತ್ರ್ಯ ನಮಗೆ ಸಿಗಬೇಕಾದರೆ ತಿಲಕ್, ಸಾವರ್ಕರ್ ಮುಂತಾದವರು ಕಾರಣ ಎಂಬುದು ನಿಮಗೆ ಗೊತ್ತಿಲ್ಲವೇ? ಎಲ್ಲದಕ್ಕೂ ಪರ್ಮಿಷನ್ ತಗೆದುಕೊಳ್ಳಬೇಕೇ? ಸಾವರ್ಕರ್ ತಮ್ಮ ಆಯುಷ್ಯದಲ್ಲಿ ಅರ್ಧ ಜೈಲಿನಲ್ಲಿ ಕಳೆದ ವ್ಯಕ್ತಿ. ಈ ರೀತಿಯ ಹೇಳಿಕೆ ಸರಿಯಲ್ಲ. ದೇಶಭಕ್ತರಿಗೆ ನೀವು ಅವಮಾನ ಮಾಡುತ್ತಿದ್ದೀರಿ. ಸಾವರ್ಕರ್ ಬಗ್ಗೆ ವಿರೋಧ ಮಾಡಿದರೆ ದೇಶಭಕ್ತಿ ಕಡಿಮೆ ಆಗುವುದಿಲ್ಲ. ಈ ರೀತಿ ಹೇಳಿಕೆಯಿಂದ ಸ್ವಾತಂತ್ರ್ಯ, ಸಂವಿಧಾನ ಆಡಳಿತದ ಮೇಲೆ ಪರಿಣಾಮ ಆಗುತ್ತದೆ. 75 ವರ್ಷ ಸ್ವಾತಂತ್ರ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಾಪುರುಷರ ಫೋಟೋ ಹಾಕಿ ದೇಶಭಕ್ತಿ ತೋರಿಸುವ ಕೆಲಸ ಮಾಡುತ್ತಿದ್ದೇವೆ. ಇದಕ್ಕೆ ಕಲ್ಲು ಹಾಕಬೇಡಿ. ನೀವು ನಿಮ್ಮ ಹೇಳಿಕೆ ಮರಳಿ ಪಡೆದು ಕ್ಷಮೆ ಕೇಳಿ ಎಂದು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಗಣೇಶೋತ್ಸವದಲ್ಲಿ ಹೆಚ್ಚಿನ ಶಬ್ದದ ಡಿಜೆಗೆ ನಿರ್ಬಂಧ ವಿಧಿಸಿರುವುದನ್ನೂ ಮುತಾಲಿಕ್ ಟೀಕಿಸಿದ್ದು, ಡಿಜೆಗೆ ಅವಕಾಶ ನೀಡಲು ಆಗ್ರಹಿಸಿದ್ದಾರೆ. ಕೋವಿಡ್ ಕಾರಣ ಎರಡು ವರ್ಷ ಸಾರ್ವಜನಿಕ ಗಣೇಶೋತ್ಸವ ಆಗಿರಲಿಲ್ಲ. ಈ ವರ್ಷ ಮುಕ್ತವಾದ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಗಣೇಶೋತ್ಸವದಿಂದ ಅವರ ಬದುಕಿಗೆ ಒಂದು ಆಧಾರವಾಗಿದೆ. ಹೀಗಾಗಿ ಸೌಂಡ್ ಸಿಸ್ಟಮ್, ಲೈಟಿಂಗ್‌ನವರಿಗೆ ಯಾವುದೇ ರೀತಿಯ ನಿರ್ಬಂಧ ಹಾಕಬಾರದು. ಡಿಜೆ ಸೀಜ್ ಮಾಡುತ್ತೇವೆ ಎಂದು ಹೆದರಿಸಬಾರದು. ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಡಿಜಿ ಹಚ್ಚಿ ಮೆರವಣಿಗೆ ಮಾಡಿ, ಪೊಲೀಸರು ತಡೆದರೆ ಠಾಣೆ ಎದುರು ಗಣೇಶನನ್ನು ಇಟ್ಟುಕೊಂಡು ಧರಣಿ ಮಾಡಿ ಎಂದು ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.
ಇದನ್ನೂ ಓದಿ | Pramod Muthalik : ಕೈ ಕತ್ತರಿಸುತ್ತೇವೆಂದು ಮುತಾಲಿಕ್ ಎಚ್ಚರಿಕೆ ಕೊಟ್ಟಿದ್ಯಾರಿಗೆ?