ಮೈಸೂರು: ಬಸವಣ್ಣ ಯಾವುದೇ ಸಮುದಾಯಕ್ಕೆ ಸೇರಿದವರಲ್ಲ. ಅವರು ಎಲ್ಲರಿಗೂ ಸೇರಿದವರು. ಅವರ ವಿಚಾರಧಾರೆ, ತತ್ವ ಸಿದ್ಧಾಂತವನ್ನು ನಾವು ಅನುಸರಿಸುವ ಮೂಲಕ ಅವರು ಬಯಸಿದ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.
ಅವರು ಶನಿವಾರ (ಡಿ. ೧೦) ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ), ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ, ಮೈಸೂರು ಇವರ ವತಿಯಿಂದ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿದ್ದ “ರಜತ ಮಹೋತ್ಸವ – ಬೆಳ್ಳಿಬೆಳಗು” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮೈಸೂರಿನ ವಿವಿಧ ವೀರಶೈವ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಬಸವ ಜಯಂತಿ ಆಚರಣೆ ಮಾಡಿದ ನಿರ್ಣಯ ಎಲ್ಲರಿಗೂ ಮಾದರಿಯಾಗಿದೆ. ಬಸವಣ್ಣನ ವಿಚಾರ ನಂಬಿದ ಭಕ್ತಾದಿಗಳು ಈಗಲೂ ವಿಚಾರ ಮಾಡಬೇಕು ಎಂದರು.
ಸಮ ಸಮಾಜದ ನಿರ್ಮಾಣ
ಬಸವಣ್ಣ 900 ವರ್ಷಗಳ ಹಿಂದೆ ಮಾಡಿದ ಹೋರಾಟ ಈಗಲೂ ಪ್ರಸ್ತುತ ಇವೆ. ಲಿಂಗ ಭೇದ, ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ಹೋರಾಟ ಮಾಡಿದ್ದಾರೆ. ಅದರ ಬಗ್ಗೆ ನಾವು ಎಷ್ಟು ಪ್ರತಿಪಾದನೆ ಮಾಡಿದ್ದೇವೆ ಎಂಬುದನ್ನು ಆಲೋಚಿಸಬೇಕಿದೆ. ಯಾವುದೇ ಮೂಢನಂಬಿಕೆ, ಲಿಂಗ ಭೇದ ಇಲ್ಲದಿದ್ದರೆ ಸಮಾಜ ಬೇರೆಯೇ ಇರುತ್ತಿತ್ತು. ಬಸವಣ್ಣ ನಿರ್ಮಾಣ ಮಾಡಿದ ಸಮಾಜ ನಿರ್ಮಾಣ ಮಾಡಲು ಪ್ರಯತ್ನ ಮಾಡಬೇಕು. ಆ ನಿಟ್ಟಿನಲ್ಲಿ ನಡೆದರೆ ಸಮಾನತೆಯ ಸಮಾಜ ನಿರ್ಮಾಣ ಆಗುತ್ತದೆ. ಆರ್ಥಿಕ, ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಶ್ರಮಿಸಬೇಕಿದೆ ಎಂದು ಬೊಮ್ಮಾಯಿ ಹೇಳಿದರು.
ಆರ್ಥಿಕ ಅಭಿವೃದ್ಧಿಯಲ್ಲಿ ಎಲ್ಲರಿಗೂ ಪಾಲು ಸಿಗಬೇಕು
ಆರ್ಥಿಕ ಅಭಿವೃದ್ಧಿಯಲ್ಲಿ ಎಲ್ಲರಿಗೂ ಪಾಲು ಸಿಗಬೇಕು. ಬಸವಣ್ಣನ ಕಾಯಕ ಸಮಾಜ ನಿರ್ಮಾಣ ಮಾಡಬೇಕು. ಬಸವಣ್ಣ ಕಾಯಕವೇ ಕೈಲಾಸ ಅಂತ ಹೇಳಿದರು. ಅದರ ಜತೆಗೆ ದಾಸೋಹ ಪದ್ಧತಿಯನ್ನು ತಂದರು. ಕನ್ನಡ ಭಾಷೆಗೆ ಬಸವಾದಿ ಶರಣರು ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಕರ್ನಾಟಕದ ಮೂಲ ಸಾಹಿತ್ಯದ ನಂತರ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ದೊಡ್ಡ ಕೊಡುಗೆ ಕೊಟ್ಡಿದೆ. ಮಹಿಳೆಯರು ಸಮಾನತೆ ಕೊಟ್ಟರೆ ಏನಾಗುತ್ತದೆ ಎನ್ನುವುದಕ್ಕೆ ಅಕ್ಕ ಮಹಾದೇವಿ ಶ್ರೇಷ್ಠ ಉದಾಹರಣೆ, ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಇವರೆಲ್ಲ ನಮಗೆ ಪ್ರೇರಣೆ ಎಂದರು.
ಮೈಸೂರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ | Rudset academy | ಕನ್ನಡದ ಮಕ್ಕಳು ಉದ್ಯಮಿಗಳಾಗಬೇಕು: ರುಡ್‌ಸೆಟ್ ಕಟ್ಟಡ ಉದ್ಘಾಟಿಸಿದ ಸಿಎಂ ಬೊಮ್ಮಾಯಿ