Site icon Vistara News

Veerashaiva Lingayat Mahasabha | ವೀರಶೈವ ಲಿಂಗಾಯತ ಮಹಾ ಅಧಿವೇಶನ ಮುಂದಕ್ಕೆ; ಫೆಬ್ರವರಿಯಲ್ಲಿ ನಡೆಸಲು ತೀರ್ಮಾನ

Veerashaiva Lingayath

ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ (Veerashaiva Lingayat Mahasabha) ದಾವಣಗೆರೆಯಲ್ಲಿ ಡಿ. ೨೪ರಿಂದ ೩ ದಿನಗಳ ಕಾಲ ಆಯೋಜನೆ ಮಾಡಿದ್ದ ೨೩ನೇ ಮಹಾ ಅಧಿವೇಶನವು ಮುಂದೂಡಿಕೆಯಾಗಿದೆ. ಇದನ್ನು ೨೦೨೩ರ ಫೆಬ್ರವರಿ ೧೧, ೧೨ ಮತ್ತು ೧೩ರಂದು ನಡೆಸಲು ತೀರ್ಮಾನಿಸಲಾಗಿದೆ.

ಈ ಬಗ್ಗೆ ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹಿರಿಯ ಶಾಸಕ, ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಬೆಳಗಾವಿಯಲ್ಲಿ ಸೋಮವಾರದಿಂದ (ಡಿ.೧೯) ನಡೆಯಲಿರುವ ಅಧಿವೇಶನ ಇರುವುದರಿಂದ ವೀರಶೈವ ಲಿಂಗಾಯತ ಮಹಾ ಅಧಿವೇಶನವನ್ನು ಮುಂದೂಡಿಕೆ ಮಾಡಲಾಗಿದೆ. ಜನಪ್ರತಿನಿಧಿಗಳು ಹಾಗೂ ಮುಖಂಡರ ಜತೆ ಮಾತನಾಡಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ವೀರಶೈವ ಮಹಾಸಭಾವನ್ನು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಚಾರವಾಗಿ ‌ಬೆಂಗಳೂರಿನ ನಿವಾಸಿ ಎಸ್.ಎನ್. ಕೆಂಪಣ್ಣ ಮತ್ತಿತರರು ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಗೆ ಸಂಬಂಧಪಟ್ಟಂತೆ ನೋಟಿಸ್‌ ಜಾರಿಯಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಮನೂರು ಶಿವಶಂಕರಪ್ಪ, ನಮಗೆ ಯಾವುದೇ ನೋಟಿಸ್ ಬಂದಿಲ್ಲ. ಅವನಿಗೂ ಮಹಾಸಭೆಗೂ ನಮಗೆ ಏನ್ ಸಂಬಂಧ ಇದೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ವೀರಶೈವ ಮಹಾಸಭೆ ಹೆಸರಿನಲ್ಲಿ ಲಿಂಗಾಯತ ಎನ್ನುವ ಪದ ಸೇರಿಸಿರುವ ವಿಚಾರಕ್ಕೆ ಮಹಾಸಭಾದ ವಿರುದ್ಧ ‌ಧನಿ ಎತ್ತಿರುವ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಾಮದಾರ್, ಪ್ರತ್ಯೇಕ ಲಿಂಗಾಯತ ಅಧಿವೇಶನ ಮಾಡುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಮನೂರು, ಜಾಮದಾರ್ ಮತ್ತೊಂದು ಅಧಿವೇಶನ ಮಾಡಲಿ ನಾವೇನು ಬೇಡಾ ಅಂತೀವಾ? ಆತನದ್ದು ಸಮಾಜಕ್ಕೆ ಏನಾದರೂ ಕೊಡುಗೆ ಇದೆಯಾ? ಅವರ ಸಂಬಂಧಿಕರಿಗೆ ಏನಾದರೂ ಒಳ್ಳೆಯದನ್ನು ಮಾಡಿದ್ದಾನಾ? ಎಂದು ಏಕವಚನದಲ್ಲಿಯೇ ದಾಳಿ ನಡೆಸಿದ ಅವರು, ಸಮಾಜ ಮುಂದುವರಿಯುವುದನ್ನು ನೋಡಬೇಕು. ಒಗ್ಗಟ್ಟು ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಬೈಲಾದ ಪ್ರಕಾರ ಲಿಂಗಾಯತ ಎನ್ನುವ ಪದವನ್ನು ಸೇರಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.

ಇದನ್ನೂ ಓದಿ | Karnataka Election | ಬಾದಾಮಿ ಜನರಿಂದ ಸಿದ್ದರಾಮಯ್ಯಗೆ ಹೆಲಿಕಾಪ್ಟರ್ ಗಿಫ್ಟ್; ಚಂದಾ ವಸೂಲಿಯಾಗುತ್ತಿದೆ ಎಂದ ಜಮೀರ್‌!

Exit mobile version