Site icon Vistara News

Veerashaiva lingayat: ಕೇಂದ್ರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ: ಜುಲೈ 11ರಂದು ಬೆಂಗಳೂರಿನಲ್ಲಿ ಮಹತ್ವದ ಸಭೆ

veerashaiva lingayath meeting

ಕಲಬುರಗಿ: ವೀರಶೈವ ಲಿಂಗಾಯತ (Veerashaiva lingayat) ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡುವುದರ ಕುರಿತು ಸಮುದಾಯದ ಎಲ್ಲ ಸಚಿವರು, ಶಾಸಕರ ಸಭೆಯನ್ನು ಬೆಂಗಳೂರಿನಲ್ಲಿ ಜುಲೈ 11ಕ್ಕೆ ಏರ್ಪಡಿಸಲಾಗಿದೆ. ಈ ಕುರಿತು ಕಲಬುರಗಿಯ ಅಪ್ಪಾ ಸ್ಮರಣಾರ್ಥ ಸಭಾಂಗಣದಲ್ಲಿ ವೀರಶೈವ ಲಿಂಗಾಯತ ಮಠಾಧೀಶರ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಸಭೆಯಲ್ಲಿ ಸಚಿವ ಈಶ್ವರ್ ಖಂಡ್ರೆ, ಡಾ.ಶರಣಪ್ರಕಾಶ್ ಪಾಟೀಲ್, ಕೇಂದ್ರ ರಾಸಾಯನಿಕ ರಸಗೊಬ್ಬರ ಸಚಿವ ಭಗವಂತ್ ಖೂಬಾ, ಶ್ರೀಶೈಲ ಜಗದ್ಗುರುಗಳು ಸೇರಿ ವಿವಿಧ ಮಠಾದೀಶರು ಭಾಗಿಯಾಗಿದ್ದರು.

ಸಭೆಯ ನಂತರ ಮಾತನಾಡಿದ ಕೇಂದ್ರ ರಾಸಾಯನಿಕ ರಸಗೊಬ್ಬರ ಸಚಿವ ಭಗವಂತ್ ಖೂಬಾ, ಇಂದು ವೀರಶೈವ ಲಿಂಗಾಯತ ಸಮುದಾಯದ ಮಠಾಧೀಶರು ಸಭೆ ಕರೆದಿದ್ದರು. ಸಭೆಯಲ್ಲಿ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ಕುರಿತು ಚರ್ಚೆಯಾಗಿದೆ. ಪಕ್ಷ ಭೇದ ಮರೆತು ಸಭೆಯಲ್ಲಿ ಭಾಗಿಯಾಗಿದ್ದೇವೆ. ಎಲ್ಲರೂ ಕ್ರಮಬದ್ಧವಾಗಿ ವಿಚಾರ ಮಾಡುತ್ತೇವೆ. ಕೇವಲ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕೋದು ಮಾತ್ರವಲ್ಲ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ನ್ಯಾಯಯುತವಾಗಿ ಪ್ರಸ್ತಾವನೆ ಸಲ್ಲಿಸಬೇಕು. ಸಮಾಜಕ್ಕೆ ಅನ್ಯಾಯವಾಗುತ್ತಿದೆ, ಸಮಾಜಕ್ಕೆ ನ್ಯಾಯ ಒದಗಿಸಬೇಕು, ಎಂದು ಕ್ರಮಬದ್ಧವಾಗಿ ನಿಯಮ ಬದ್ದವಾಗಿ ಪ್ರಸ್ತಾವನೆ ಸಲ್ಲಿಸಬೇಕು ಎಂದರು.

ಶ್ರೀಶೈಲ ಜಗದ್ಗುರು ಡಾ. ಚನ್ನಬಸವ ಶಿವಾಚಾರ್ಯ ಸ್ಮಾಮೀಜಿ ಮಾತನಾಡಿ, ಸರ್ಕಾರದ ಸೌಲಭ್ಯಗಳ ಮೂಲಕ ಹಿಂದುಳಿದ ಸಮುದಾಯಗಳು ಮೇಲೆ ಬರೋದಕ್ಕೆ ಸಹಕಾರ ಸಿಗಬೇಕು ಎನ್ನುವ ಉದ್ದೇಶದಿಂದ
ರಾಜ್ಯ ಮತ್ತು ಹಲವಾರು ಮೀಸಲಾತಿಗಳನ್ನು ಘೋಷಣೆ ಮಾಡಿವೆ. ಅದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಲ್ಪಸಂಖ್ಯಾತ ಇರಬಹುದು. ಇವೆಲ್ಲದರ ಉದ್ದೇಶ ಸಾಮಾಜಿಕ ಆರ್ಥಿಕವಾಗಿ ಶೈಕ್ಷಣಿಕವಾಗಿ ಮುಂದೆ ಬರಬೇಕು ಎನ್ನುವುದು.

ಈ ದೃಷ್ಟಿಕೋನದಲ್ಲಿ ಆಲೋಚನೆ ಮಾಡಿ ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಒಳಪಂಗಡಗಳು ಹಲವಾರು ತೊಂದರೆ ಅನುಭವಿಸುತ್ತಿವೆ. ವೀರಶೈವ ಲಿಂಗಾಯತ ಸಮಾಜದ ಪರಿಸ್ಥಿತಿ ಏನಿದೆ ಎನ್ನುವುದನ್ನು ಜಸ್ಟಿಸ್ ಚಿನ್ನಪ್ಪ ರೆಡ್ಡಿ ಆಯೋಗ ಸ್ಪಷ್ಟವಾಗಿ ತಿಳಿಸಿದೆ. ಆ ಆಯೋಗದ ವರದಿ ಆಧಾರದ ಮೇಲೆ ಸಮುದಾಯಕ್ಕೆ ಒಬಿಸಿ ಸ್ಥಾನಮಾನ ಸಿಗಬೇಕು. ರಾಜ್ಯ ಸರ್ಕಾರದ ಒಬಿಸಿ ಪಟ್ಟಿಯಲ್ಲಿದ್ದು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಇರದೆ ಇರೋದಕ್ಕೆ ಈ ಸಮುದಾಯಕ್ಕೆ ಅನ್ಯಾಯ ಆಗಿದೆ.

ಇದನ್ನೂ ಓದಿ: Veershaiva Lingayath: ಪಂಚಾಚಾರ್ಯರ ಸಭೆಗೆ ವಿರಕ್ತರು ಹೋಗಬಾರದು: ವೀರಶೈವ ಆಚರಣೆಗಳನ್ನು ತೆಗೆಯುತ್ತೇವೆ ಎಂದ ಜಾಮದಾರ್‌

ಆದರೆ ಈ ಸಮುದಾಯ ಸುಮಾರು 16 ಒಳಪಂಗಡಗಳು ಸೇರಿಸಿ ಇನ್ನುಳಿದವರನ್ನು ಕೈ ಬಿಟ್ಟಿದ್ದಾರೆ. ಅಂತಹ ಕೈ ಬಿಟ್ಟ ಒಳಪಂಗಡಗಳನ್ನ ಸೇರಿಸಿಕೊಳ್ಳಬೇಕು ಅನ್ನೋದು ನಮ್ಮ ಹಕ್ಕೊತ್ತಾಯ. ಈ ಕುರಿತಾಗಿ ಜೂನ್ 2 ರಂದು ಬೆಂಗಳೂರಿನಿಂದ ಹೋರಾಟ ಪ್ರಾರಂಭವಾಗಿದೆ. ಜೂನ್ 15 ರಂದು ಹುಬ್ಬಳ್ಳಿಯಲ್ಲಿ ಸ್ವರೂಪ ತಂದು ಕೊಡಲಾಗಿದೆ. ಇವತ್ತು ಕಲಬುರಗಿಯಲ್ಲಿ ಸಭೆ ಮಾಡುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಾಗಿದೆ.

ಇದರ ಮೊದಲ ಭಾಗವಾಗಿ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಸರ್ಕಾರದ ಗಮನ ಸೆಳೆಯಬೇಕಾಗಿದೆ. ಹಾಗಾಗಿ ಸಚಿವರು ಶಾಸಕರು ತಮ್ಮ ಭಾವನಗೆಳನ್ನ ವ್ಯಕ್ತಪಡಿಸಿದ್ದಾರೆ. ಜುಲೈ 11 ರಂದು ಬೆಂಗಳೂರಿನಲ್ಲಿ ಸಮಾಜದ ಎಲ್ಲ ಸಚಿವರು , ಶಾಸಕರು , ಪರಿಷತ್ ಸದಸ್ಯರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಅವರ ಮುಂದಾಳತ್ವದಲ್ಲಿ ನಿಯೋಗ ಮಾಡಲಾಗಿದೆ. ಮುಖ್ಯಮಂತ್ರಿಗೆ ಮನವಿ ಮಾಡಿ ರಾಜ್ಯ ಸರ್ಕಾರ ಶಿಫಾರಸ್ಸು ಮಾಡುವ ಕೆಲಸ‌ ಮಾಡಲಾಗುವುದು. ಅದಾದ ಬಳಿಕ ಕೇಂದ್ರದ ಲೋಕಸಭೆಯ ಸದಸ್ಯರ ಸಭೆಯನ್ನ ಕರೆದು ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸುವ ಜವಾಬ್ದಾರಿಯನ್ನ ನೀಡಲಾಗುತ್ತದೆ. ಪ್ರಸಂಗ ಬಂದರೆ ಗೃಹ ಸಚಿವ ಅಮಿತ್ ಷಾ , ಪ್ರಧಾನಿ ಮೋದಿಯನ್ನು ಕೂಡ ಭೇಟಿ ಮಾಡಲಾಗುವುದು ಎಂದರು.

ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂಬ ಕುರಿತು ಪಂಚಾಚಾರ್ಯರ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ನಿರ್ಧಾರವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರವನ್ನು ಒಪ್ಪಾಯಿಸುತ್ತೇವೆ ಎಂದಿದ್ದಾರೆ.

Exit mobile version