ಮಂಗಳೂರು: ದೈವಾರಾಧನೆ ಹಿಂದೂ ಸಂಸ್ಕೃತಿ ಅಲ್ಲ ಎಂಬ ನಟ ಚೇತನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಭೂತಾರಾಧನೆಯನ್ನು ಬಿಟ್ಟು ನಾವಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ʼಕಾಂತಾರʼ ಚಿತ್ರ ವೀಕ್ಷಿಸಿದ ಬಳಿಕ ವೀರೇಂದ್ರ ಹೆಗ್ಗಡೆಯವರು ಈ ಕುರಿತು ಹೇಳಿಕೆ ನೀಡಿದರು. ಭೂತಾರಾಧನೆ ಧರ್ಮದ ಭಾಗ ಹೌದೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ಎರಡೂ ಜಿಲ್ಲೆಯಲ್ಲಿ ವ್ಯಾಪಕವಾಗಿ ದೈವಾರಾಧನೆ ಇದೆ. ಅವಿಭಜಿತ ಜಿಲ್ಲೆಯ ಮೂಲ ಸ್ವರೂಪ ಅರಿಯದೇ ಮಾತನಾಡಿದರೆ ಅದು ಬೇರೆಯಾಗುತ್ತದೆ. ಧರ್ಮ ಅನ್ನುವ ಮೂಲ ಹುಡುಕಿಕೊಂಡು ಹೋದರೆ ಎಲ್ಲೂ ಸಿಗುವುದಿಲ್ಲ. ನಮ್ಮ ನಂಬಿಕೆ, ನಡವಳಿಕೆ, ಆಚರಣೆಗಳು ನಮ್ಮಲ್ಲಿ ಬೆಳೆದು ಬಂದವು. ಹಾಗಾಗಿ ನಾವು ಇದನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ಎಂದು ಹೆಗ್ಗಡೆಯವರು ಪ್ರತಿಕ್ರಿಯಿಸಿದ್ದಾರೆ.
ಚೇತನ್ ಅವರು ಹಿಂದೂ ಧರ್ಮದ ಯಾವ ಸೂಕ್ಷ್ಮತೆ ನೋಡಿದ್ದಾರೋ ಗೊತ್ತಿಲ್ಲ. ನಾವು ದೈವಾರಾಧನೆ ಮಾಡಿ ದೈವಗಳಿಗೆ ಗೌರವ ಕೊಡುತ್ತೇವೆ ಅನ್ನುವುದು ಮಾತ್ರ ಸತ್ಯ. ದೈವ ಮೈ ಮೇಲೆ ಬಂದಾಗ ಆ ಮಾತಿಗೆ ನಾವು ಗೌರವ ಕೊಡುತ್ತೇವೆ. ನಮ್ಮ ಎರಡೂ ಜಿಲ್ಲೆಯಲ್ಲಿ ವ್ಯಾಪಕವಾಗಿ ಇರುವ ನಂಬಿಕೆ ಇದು. ಇದನ್ನು ಧರ್ಮ ಸೂಕ್ಷ್ಮದಲ್ಲಿ ವಿಮರ್ಶೆ ಮಾಡುವ ಅಗತ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ.
ʼಕಾಂತಾರʼ ಸಿನಿಮಾ ಮಾಡುವ ಮುನ್ನ ನಟ ರಿಷಬ್ ಶೆಟ್ಟಿ ಅವರು ಹೆಗ್ಗಡೆಯವರನ್ನು ಭೇಟಿಯಾಗಿ ದೈವಾರಾಧನೆಯ ಬಗ್ಗೆ ಸಿನಿಮಾ ಮಾಡುವ ಬಗ್ಗೆ ಮಾಹಿತಿ ನೀಡಿ ಸಮ್ಮತಿ ಪಡೆದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ | Kantara Movie | ಮಂಗಳೂರಿನಲ್ಲಿ ಕುಟುಂಬ ಸಮೇತ ಕಾಂತಾರ ಸಿನಿಮಾ ವೀಕ್ಷಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ