ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮಾಂಸಾಹಾರ ಬಿಟ್ಟು ಪೂರ್ಣ ಸಸ್ಯಾಹಾರಿಯಾದ ಬೆನ್ನಿಗೇ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರು ತಾನೂ ಈಗ ಸಸ್ಯಾಹಾರಿ (Vegetarian politics) ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.
ವಿಧಾನಸಭೆಯಲ್ಲಿ ಇತ್ತೀಚೆಗೆ ಕಂದಾಯ ಸಚಿವ ಅಶೋಕ್ ಅವರ ಗ್ರಾಮ ವಾಸ್ತವ್ಯದ ಕುರಿತ ಚರ್ಚೆಯ ವೇಳೆ ಸಿದ್ದರಾಮಯ್ಯ ತಾನು ಮಾಂಸಾಹಾರ ಬಿಟ್ಟು ಸಸ್ಯಾಹಾರಿಯಾದ ಕಥೆ ಹೇಳಿದ್ದರು.
ʻʻನಿಮಗೆ ಗೊತ್ತ? ಡಿಸೆಂಬರ್ 1 ರಿಂದ ನಾನು ವೆಜಿಟೇರಿಯನ್ ಆಗಿದ್ದೇನೆʼ ಎಂದರು. ಹೌದಾ ಯಾಕೆ? ನೀವು ಏನಾದರೂ ಮಾಡಿ ಚುನಾವಣೆ ಗೆಲ್ಲಬೇಕು ಅಂತ ರೇವಣ್ಣ ರೀತಿ ಹೋಮ ಹವನ ಮಾಡಿಸುತ್ತಿದ್ದೀರಾ ಹೇಗೆ? ನಿಮ್ಮ ಕೆಂಪು ಬೊಟ್ಟು ನೋಡಿದರೆ ಹಾಗನ್ನಿಸುತ್ತಿದೆʼ ಎಂದು ಅಶೋಕ್ ಕಾಲೆಳೆದಿದ್ದರು. ಆಗ ಸಿದ್ದರಾಮಯ್ಯ ʻʻಇಲ್ಲಪ್ಪ, ಸಣ್ಣ ಆಪರೇಷನ್, ಅದಕ್ಕೆ ಮಾಂಸಾಹಾರ ಬಿಟ್ಟಿದ್ದೇನೆʼʼ ಎಂದು ತಿಳಿಸಿದ್ದರು.
ಈಗ ಸಣ್ಣ ವಯಸ್ಸಿನಿಂದಲೂ ಮಾಂಸಾಹಾರಪ್ರಿಯರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಸಸ್ಯಾಹಾರಿಯಾಗಿರುವ ಕಥೆ ತೆರೆದುಕೊಂಡಿದೆ.
ಮಾಂಸಾಹಾರ ತ್ಯಜಿಸಲು ಕಾರಣವಾದ ಅಂಶಗಳನ್ನು ವಿಸ್ತಾರ ನ್ಯೂಸ್ ಜತೆ ಹಂಚಿಕೊಂಡ ಶಿವಕುಮಾರ್, ʻʻಜಾರಿ ನಿರ್ದೇಶನಾಲಯ ಹಾಕಿದ ಕೇಸಿನಲ್ಲಿ ಜೈಲಿಗೆ ಹೋದ ಬಳಿಕ ಮಾಂಸ ತಿನ್ನೋದನ್ನು ಬಿಟ್ಟಿದ್ದೇನೆʼʼ ಎಂದರು.
ತಾವು ನಂಬಿದ ಸ್ವಾಮೀಜಿಗಳಿಂದ ದೀಕ್ಷೆ ಪಡೆದಿರುವ ಶಿವಕುಮಾರ್ ಅವರು ತಮಗೆ ಎದುರಾಗಿರುವ ಸಂಕಷ್ಟ ಪರಿಹಾರವಾಗಬೇಕು ಎಂಬ ಕಾರಣಕ್ಕಾಗಿ ಜೈಲಿನಲ್ಲೇ ಸಸ್ಯಾಹಾರದ ದೃಢ ನಿರ್ಧಾರ ತೆಗೆದುಕೊಂಡಿದ್ದರು.
ಅದೇ ಹೊತ್ತಿಗೆ ಆರೋಗ್ಯದ ವಿಚಾರದಲ್ಲೂ ೬೦ ವರ್ಷದ ದಾಟಿದ ಮೇಲೆ ಮಾಂಸಾಹಾರಕ್ಕಿಂತ ಸಸ್ಯಾಹಾರ ಒಳ್ಳೆಯದು ಎಂಬ ವೈದ್ಯರ ಸಲಹೆಯನ್ನು ಅವರು ಫಾಲೋ ಮಾಡುತ್ತಿದ್ದಾರೆ ಎನ್ನಲಾಗಿದೆ. ʻ60 ವರ್ಷ ದಾಟಿದ ಮೇಲೆ ಎಲ್ಲವೂ ಕಂಟ್ರೋಲ್‌ನಲ್ಲಿ ಇರಬೇಕು. ಹೀಗಾಗಿ ಮಿತವಾಗಿ ಊಟ ಮಾಡುತ್ತಿದ್ದೇನೆʼʼ ಎಂದು ಡಿಕೆಶಿ ಹೇಳಿದ್ದಾರೆ.