ಬಾಗಲಕೋಟೆ/ತುಮಕೂರು: ಸಾವು ಯಾವಾಗ ಹೇಗೆ ಬಂದು ಎರಗುತ್ತದೆ ಎಂದು ಹೇಳುವುದೇ ಕಷ್ಟ. ಇಲ್ಲಿ ಇಬ್ಬರು ಮಹಿಳೆಯರು ತಮ್ಮ ಪಾಡಿಗೆ ತಾವು ರಸ್ತೆ ಬದಿಯಲ್ಲಿ ನಿಂತಿದ್ದರು. ಆದರೆ, ಬಸ್ ಮತ್ತು ಲಾರಿಗಳು ಅವರನ್ನು ಬೆನ್ನಟ್ಟಿ ಬಡಿದು ಕೆಡವಿವೆ. ಅವರಿಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಬ್ಲೇಡ್ ಕಟ್ ಆಗಿ ಮಹಿಳೆ ಮೇಲೆ ನುಗ್ಗಿದ ಬಸ್
ಬಾದಾಮಿಯಿಂದ ಕೆರೂರು ಕಡೆಗೆ ಹೋಗುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಬಾದಾಮಿ ಪಟ್ಟಣದ ಹೊರವಲಯದಲ್ಲಿ ಸಾಗುತ್ತಿದ್ದಾಗ ಬ್ಲೇಡ್ ಕಟ್ ಆಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಹರಿದಿದೆ. ವೆಂಕುಬಾಯಿ ರಾಮಣ್ಣ ಚವ್ಹಾಣ್ (೩೫) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಕಾಳಾಪುರ ತಾಂಡಾ ನಿವಾಸಿ ಆಗಿರುವ ವೆಂಕುಬಾಯಿ ಅವರು ತನ್ನ ಗಂಡ ಹಾಗೂ ಮಗುವಿನೊಂದಿಗೆ ಕರೆಮ್ಮ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಬಸ್ ಡಿಕ್ಕಿಯಾಗಿದೆ. ಗಂಡ ಮತ್ತು ಮಗುವಿಗೆ ಏನೂ ಆಗಿಲ್ಲ. ಆದರೆ, ವೆಂಕು ಬಾಯಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡರು. ವೆಂಕು ಬಾಯಿ ಅವರು ಬಾದಾಮಿ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಬಸ್ಸಿನಲ್ಲಿ ೨೦ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಬಸ್ ಪಲ್ಟಿಯಾಗದೆ ಇರುವುದರಿಂದ ಬಸ್ಸಿನಲ್ಲಿದ್ದ ಯಾರಿಗೂ ಅಪಾಯವಾಗಿಲ್ಲ.
ಕಳ್ಳಂಬೆಳ್ಳದಲ್ಲಿ ಲಾರಿ ಡಿಕ್ಕಿಯಾಗಿ ಮಹಿಳೆ ಸಾವು
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬಸ್ ತಂಗುದಾಣದ ಎದುರು ಬಸ್ ಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಲಾರಿಯೊಂದು ನುಗ್ಗಿ ಮಹಿಳೆ ಮೃತಪಟ್ಟಿದ್ದಾರೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಚಂದ್ರಮ್ಮ (45) ಅವರು ಮೃತಪಟ್ಟರೆ ರಂಗಸ್ವಾಮಯ್ಯ ಗಾಯಗೊಂಡಿದ್ದಾರೆ. ಚಂದ್ರಮ್ಮ ಅವರು ಶಿರಾ ತಾಲೂಕು ಕಳ್ಳಂಬೆಳ್ಳ ಮೂಲದವರು. ಲಾರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದೇ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.