Site icon Vistara News

ಹಳೇ ಕ್ಷೇತ್ರ, ಹಳೇ ಸ್ನೇಹ; ರಾಜಕೀಯದ ವೈರತ್ವದ ಅಧ್ಯಾಯಕ್ಕೆ ನಾಗೇಂದ್ರ-ಶ್ರೀರಾಮಲು ಮುನ್ನುಡಿ!

ನಾಗೇಂದ್ರ-ಶ್ರೀರಾಮಲು

ಶಶಿಧರ ಮೇಟಿ, ಬಳ್ಳಾರಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಶ್ರೀರಾಮುಲು ಇದೀಗ ತವರು ಕ್ಷೇತ್ರ ಬಳ್ಳಾರಿ ಗ್ರಾಮೀಣದ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಶಾಸಕ ನಾಗೇಂದ್ರ ಈ ಹಿಂದೆ ಶ್ರೀರಾಮುಲು ಅವರ ಆಪ್ತರಾಗಿದ್ದರಿಂದ ಇಷ್ಟು ದಿನಗಳ ಕಾಲ ಪರಸ್ಪರ ವಾಗ್ವಾದಕ್ಕೆ ಇಳಿದಿರಲಿಲ್ಲ. ಈಗ ಚುನಾವಣೆ ಹತ್ತಿರವಾಗುತ್ತಿದ್ದಂತೆ ಇಬ್ಬರ ನಡುವೆ ಮಾತಿನ ಸಮರ ಶುರುವಾಗಿದೆ.

ಸದ್ಯಕ್ಕೆ ಇಡೀ ಜಿಲ್ಲೆಯಲ್ಲಿ ಶ್ರೀರಾಮುಲು ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿರುವುದು ಕಾಂಗ್ರೆಸ್‌ನಲ್ಲಿ ಒನ್ ಆ್ಯಂಡ್ ಓನ್ಲಿ ನಾಗೇಂದ್ರ ಮಾತ್ರ ಎಂಬುವುದು ಕಾಂಗ್ರೆಸ್‌ನ ಲೆಕ್ಕಾಚಾರ. ಈ ಹಿಂದೆ ರಾಮುಲು ವಿರುದ್ಧ ಚಕಾರವೆತ್ತದ ನಾಗೇಂದ್ರ ದಿನದಿಂದ ದಿನಕ್ಕೆ ಬಹಿರಂಗವಾಗಿಯೇ ಅವರಿಗೆ ಮಾತಿನ ಏಟು ನೀಡುತ್ತಿರುವುದು ಚುನಾವಣೆಯ ಹಿಂದಿನ ತಂತ್ರ ಎನ್ನುವಂತಾಗಿದೆ.

ಇದನ್ನೂ ಓದಿ | AIADMK Power Tussle | ಪಳನಿಸ್ವಾಮಿ ನೇಮಕವೇ ಅಮಾನ್ಯವೆಂದ ಹೈಕೋರ್ಟ್​; ಒಪಿಎಸ್​ ಪರ ತೀರ್ಪು

ಮಾತಿನ ಜಿದ್ದಾಜಿದ್ದಿ ಚುನಾವಣೆಗೆ ಶ್ರೀಕಾರ
ಶಾಸಕ ನಾಗೇಂದ್ರ ಅವರು ಇತ್ತೀಚೆಗೆ ಶ್ರೀರಾಮುಲು ವಿರುದ್ಧವೇ ಮಾಧ್ಯಮಗಳ ಮುಂದೆ ಹರಿಹಾಯ್ದಿದ್ದು ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹಕ್ಕೆ ಕಾರಣವಾಗಿದೆ. ಬಳ್ಳಾರಿ ಗ್ರಾಮೀಣಕ್ಕೆ ರಾಮುಲು ಬಂದರೆ ನಾಗೇಂದ್ರ ಕ್ಷೇತ್ರ ಬದಲಿಸುತ್ತಾರೆ ಎಂಬ ಮಾತು ರಾಜಕೀಯವಲಯದಲ್ಲಿತ್ತು. ಆದರೆ, ಆಗಸ್ಟ್ 15ರಂದು ಬಳ್ಳಾರಿ ಗ್ರಾಮೀಣದಲ್ಲಿ ಯಾರೇ ನಿಂತರೂ ನಾನು ಸ್ಪರ್ಧಿಸುವೇ ಎಂದು ನಾಗೇಂದ್ರ ಸ್ಪಷ್ಟಪಡಿಸಿರುವುದು ಈ ಬಾರಿಯ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರವು ಹೈವೋಲ್ಟೇಜ್ ಕ್ಷೇತ್ರವಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಆಗ ತ್ಯಾಗ, ಈಗ ಎದುರಾಳಿ
2008ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದ ಬಿ.ನಾಗೇಂದ್ರ ಕೊನೆಯ ಕ್ಷಣದಲ್ಲಿ ಜನಾರ್ದನ ರೆಡ್ಡಿ ಸೂಚನೆಯ ಮೇರೆಗೆ ಶ್ರೀರಾಮುಲುಗೆ ಕ್ಷೇತ್ರ ಬಿಟ್ಟುಕೊಟ್ಟು ಕೂಡ್ಲಿಗಿ ಕ್ಷೇತ್ರದಲ್ಲಿ 2008ರಲ್ಲಿ ಬಿಜೆಪಿಯಿಂದ, 2013ರಲ್ಲಿ ಪಕ್ಷೇತರವಾಗಿ ಗೆಲುವು ಸಾಧಿಸಿದ್ದರು. ಆದರೆ, ರಾಜಕೀಯ ಸ್ಥಿತ್ಯಂತರಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಕಳೆದ ಬಾರಿ ರಾಮುಲು ತವರು ಕ್ಷೇತ್ರ ಬಿಟ್ಟು ಮೊಳಕಾಲ್ಮೂರು ಕ್ಷೇತ್ರಕ್ಕೆ ಹೋಗಿದ್ದರು. ತವರು ಕ್ಷೇತ್ರದ ಮಹತ್ವ ಅರಿತ ಶ್ರೀರಾಮುಲು ಅವರು ಈ ಬಾರಿ ತವರು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನುವಂತಾಗಿರುವುದು ಇಬ್ಬರ ಮಧ್ಯೆ ಇರುವ ಸ್ನೇಹವು ರಾಜಕೀಯ ವೈರತ್ವಕ್ಕೆ ಕಾರಣವಾದಂತಾಗಿದೆ.

ಇಬ್ಬರ ಅಸಮಾಧಾನಕ್ಕೆ ಸಾಕ್ಷಿಯಾದ ಅಂಶ
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶ್ರೀರಾಮುಲು ಬಂದ ಮೇಲೆ ಹಲವು ವೇದಿಕೆಗಳನ್ನು ಇಬ್ಬರು ಹಂಚಿಕೊಳ್ಳುವ ಜತೆಗೆ ಅಕ್ಕಪಕ್ಕದಲ್ಲಿ ಕುಳಿತು ಮಾತನಾಡುತ್ತಿದ್ದರು. ಕಳೆದ ಏಳೆಂಟು ದಿನಗಳ ಅವಧಿಯಲ್ಲಿ ಇಬ್ಬರ ಮಧ್ಯೆ ಅಸಮಾಧಾನ ತುಸು ಹೆಚ್ಚಾಗಿದೆ. ನಾಗೇಂದ್ರ ತಾನು ಬೆಳೆಸಿದ ಹುಡುಗ ಎಂಬ ಶ್ರೀರಾಮುಲು ಹೇಳಿಕೆಗೆ ಆ.15ರಂದು ನಾಗೇಂದ್ರ ಪ್ರತಿಕ್ರಿಯಿಸಿ, ಇದು ಶ್ರೀರಾಮುಲು ಅವರ ಸಂಸ್ಕೃತಿ ತೋರಿಸುತ್ತದೆ, ಪರಸ್ಪರ ಸಹಕಾರದಿಂದ ಬೆಳೆದಿದ್ದೇವೆ, ಅವರಿಂದಲೇ ನಾನು ಬೆಳೆದಿದ್ದು ಎಂದು ಹೇಳುವುದು ತಪ್ಪು. ಅವರ ಸಹೋದರಿ ಗೆಲುವಿನಲ್ಲಿ ನನ್ನ ಪಾತ್ರ ಇರಲಿಲ್ಲವೇ? ದೊಡ್ಡವರಾಗಿ ಹೀಗೆ ಹೇಳಬಾರದು ಎಂದು ಹೇಳಿದ್ದು, ಇಬ್ಬರ ಮಧ್ಯೆ ಬಾಂಧವ್ಯದ ಕೊಂಡಿ ಸಡಿಲಗೊಂಡಿದೆ ಎನ್ನುವುದನ್ನು ಬಹಿರಂಗಗೊಳಿಸಿತ್ತು. ಈ ಬಗ್ಗೆ ಶ್ರೀರಾಮುಲು ಮಾತನಾಡಿ ನಾಗೇಂದ್ರ ಅವರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ ಎಂದು ಹೇಳಿ ಅಸಮಾಧಾನಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ವೇದಿಕೆಯಲ್ಲಿ ಸಚಿವರಿಗೆ ತಿರುಗೇಟು ನೀಡಿದ ಶಾಸಕ
ಆ.15ರಂದು ಕುರುಬ ಸಮಾಜದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ನನ್ನ ಮಧ್ಯೆ ವೈಯಕ್ತಿಕ ಅಸಮಾಧಾನವಿಲ್ಲ. ಇಬ್ಬರು ದೋಸ್ತಿಗಳು. ಬಾದಾಮಿಯಲ್ಲಿ ಹೇಗೆ ಗೆದ್ದರು ಎಂಬುದನ್ನು ನೀವು ಅವರನ್ನೇ ಕೇಳಿ, ಇಬ್ಬರು ಏನೋ ಮಾಡಿ ವಿಧಾನಸಭಾ ಪ್ರವೇಶ ಮಾಡುತ್ತೇವೆ ಎಂದು ಸಚಿವ ಶ್ರೀರಾಮುಲು ಹೇಳಿದ್ದರು. ವೇದಿಕೆಯಲ್ಲಿ ಮಾತನಾಡಲು ನಾಗೇಂದ್ರ ಸರದಿ ಬಂದಾಗ, ರಾಮುಲು ವೇದಿಕೆಯಿಂದ ಅನ್ಯಕಾರ್ಯ ನಿಮಿತ್ತ ತೆರಳಿದರು. ಆಗ ನಾಗೇಂದ್ರ ಮಾತನಾಡುತ್ತಾ, ಸಿದ್ದರಾಮಯ್ಯ ಅವರು ಯಾವತ್ತೂ ಹೊಂದಾಣಿಕೆ ರಾಜಕೀಯ ಮಾಡಿಲ್ಲ, ಶ್ರೀರಾಮುಲು ಅಣ್ಣ ಹಿರಿಯರಾದ ಸಿದ್ದರಾಮಯ್ಯ ಅವರನ್ನು ಎದ್ದರಾಮಯ್ಯ, ಬಿದ್ದರಾಮಯ್ಯ ಎಂದು ಬಹಿರಂಗ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಹೇಳುವ ಮೂಲಕ ಸಚಿವರನ್ನು ಕುಟುಕಿದ್ದರು.

ಶ್ರೀರಾಮುಲು ಬಳ್ಳಾರಿ ಉಸ್ತುವಾರಿಯಾದ ಬಳಿಕ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಓಡಾಟ ಹೆಚ್ಚಾಗಿದೆ. ಮಸೀದಿ ಮಂದಿರ ಸೇರಿ ಹಲವು ಕಡೆ ದೇಣಿಗೆ ಮತ್ತು ಅಭಿವೃದ್ಧಿ ಕೆಲಸಕ್ಕೆ ಒತ್ತು ನೀಡಿ, ತವರು ಕ್ಷೇತ್ರದಲ್ಲಿ ಸ್ಪರ್ಧಿಸುವ ಸಂದೇಶ ರವಾನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ತಾವು ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲವೆಂದು ನಾಗೇಂದ್ರ ಹೇಳಿರುವುದು ಇಡೀ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 2,14,955 ಮತದಾರರಿದ್ದಾರೆ, ಎಸ್ಟಿ ಮೀಸಲು ಕ್ಷೇತ್ರದಲ್ಲಿ ಎಸ್‌ಟಿ ಮತಗಳು ಹೆಚ್ಚಾಗಿದ್ದು, ಎಸ್‌ಸಿ ಪ್ರಬಲ ಸಮುದಾಯ, ನಂತರದಲ್ಲಿ ಲಿಂಗಾಯತ, ಮುಸ್ಲಿಂ ಮತ್ತು ಕುರುಬ ಸಮಾಜದ ಮತದಾರರು ನಿರ್ಣಾಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾರಿ ಶ್ರೀರಾಮುಲು ಹಾಗೂ ನಾಗೇಂದ್ರ ಅವರ ಕ್ಷೇತ್ರ ಆಯ್ಕೆ ಕುತೂಹಲವನ್ನು ಮೂಡಿಸಿದೆ. ಒಂದು ವೇಳೆ ಇಬ್ಬರೂ ಒಂದೇ ಅಖಾಡದಲ್ಲಿ ದುಮುಕಿದ್ದೇ ಆದರೆ, ಇದು ಹೈಓಲ್ಟೇಜ್‌ ಕ್ಷೇತ್ರ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ.

ಇದನ್ನೂ ಓದಿ | ಬಿಜೆಪಿ ಕೇಂದ್ರ ಚುನಾವಣಾ ಸಮಿತಿ, ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪಗೆ ಮಹತ್ವದ ಸ್ಥಾನ

Exit mobile version