ಮುಂಬೈ: ಕರ್ನಾಟಕದ ಬೆಳಗಾವಿಯಲ್ಲಿ ಜನಿಸಿ, ಬಾಲಿವುಡ್ ಹಾಗೂ ಮರಾಠಿಯ ನೂರಾರು ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತರಾಗಿದ್ದ ನಟಿ ಸುಲೋಚನಾ ಲಾಟ್ಕರ್ (94) (Sulochana Latkar) ಅವರು ಭಾನುವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದಷ್ಟೇ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಬಿಗಡಾಯಿಸಿದ ಕಾರಣ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಭಾನುವಾರ ನಿಧನರಾಗಿದ್ದಾರೆ.
ಮುಂಬೈನ ಆಸ್ಪತ್ರೆಯಲ್ಲಿ ಸುಲೋಚನಾ ಲಾಟ್ಕರ್ ನಿಧನರಾಗಿದ್ದಾರೆ. ಸುಲೋಚನಾ ಲಾಟ್ಕರ್ ನಿಧನಕ್ಕೆ ಬಾಲಿವುಡ್‌ನ ಹಲವು ನಟರು ಕಂಬನಿ ಮಿಡಿದಿದ್ದಾರೆ. ಸೋಮವಾರ ಶಿವಾಜಿ ಪಾರ್ಕ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ಸುಲೋಚನಾ ಲಾಟ್ಕರ್ ಅವರಿಗೆ ಬಾಲಿವುಡ್ ನಟ ರಿತೇಶ್ ದೇಶಮುಖ್ ಸಂತಾಪ ಸೂಚಿಸಿದ್ದಾರೆ. “ಸುಲೋಚನಾ ದೀದಿ ನಿಧನರಾಗಿರುವ ಸುದ್ದಿ ತಿಳಿದು ಮನಸ್ಸಿಗೆ ಖೇದವಾಯಿತು. ಅವರು ಹಿಂದಿ ಹಾಗೂ ಮರಾಠಿ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರವಾದುದು” ಎಂದು ಹೇಳಿದ್ದಾರೆ.
ಕರ್ನಾಟಕದ ಬೆಳಗಾವಿಯಲ್ಲಿ ಜನನ
ಸುಲೋಚನಾ ಲಾಟ್ಕರ್ ಅವರು ಮೂಲತಃ ಕರ್ನಾಟಕದ ಬೆಳಗಾವಿ ಜಿಲ್ಲೆಯವರು. ಚಿಕ್ಕೋಡಿ ತಾಲೂಕಿ ಕಡಕಾಳತ ಗ್ರಾಮದಲ್ಲಿ 1928ರಲ್ಲಿ (ಆಗಿನ ಮದ್ರಾಸ್ ಪ್ರೆಸಿಡೆನ್ಸಿ) ಅವರು ಜನಿಸಿದರು. ನಂತರ ಸುಲೋಚನಾ ಅವರ ಕುಟುಂಬವು ಮುಂಬೈನಲ್ಲಿ ನೆಲೆಸಿತು. ಬಾಲನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದ ಅವರು 1946ರಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದರು. ಇವರು 250ಕ್ಕೂ ಅಧಿಕ ಹಿಂದಿ ಹಾಗೂ 50ಕ್ಕೂ ಹೆಚ್ಚು ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನರೇಂದ್ರ ಮೋದಿ ಸಂತಾಪ
The passing of Sulochana Ji leaves a big void in the world of Indian cinema. Her unforgettable performances have enriched our culture and have endeared her to people across generations. Her cinematic legacy will live on through her works. Condolences to her family. Om Shanti.
— Narendra Modi (@narendramodi) June 4, 2023
ಇದನ್ನೂ ಓದಿ: Ayushmann Khurrana: ನಟ ಆಯುಷ್ಮಾನ್ ಖುರಾನಾ ತಂದೆ, ಪ್ರಸಿದ್ಧ ಜ್ಯೋತಿಷಿ ಪಿ. ಖುರಾನಾ ನಿಧನ
ದಿಗ್ಗಜರ ಜತೆ ನಟನೆ
ಸುಲೋಚನಾ ಲಾಟ್ಕರ್ ಅವರು ಅಮಿತಾಭ್ ಬಚ್ಚನ್, ದೇವ್ ಆನಂದ್, ಸುನೀಲ್ ದತ್, ರಾಜೇಶ್ ಖನ್ನಾ ಸೇರಿ ಹಲವು ದಿಗ್ಗಜ ನಟರೊಂದಿಗೆ ನಟಿಸಿದ್ದಾರೆ. ಹೀರಾ, ಝೂಲಾ, ಏಕ್ ಫೂಲ್ ಚಾರ್ ಕಾಂತೆ, ಸುಜಾತಾ, ಮೆಹರ್ಬಾನ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಕಿರುತೆರೆಯನ್ನೂ ಪ್ರವೇಶಿಸಿದ್ದ ಇವರು ಪೋಷಕ ನಟಿಯಾಗಿ, ‘ಕಿರುತೆರೆಯ ತಾಯಿ’ ಎಂದೇ ಖ್ಯಾತಿಯಾಗಿದ್ದರು. ಇವರಿಗೆ 1999ರಲ್ಲಿ ಪದ್ಮಶ್ರೀ, 2009ರಲ್ಲಿ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ದೊರೆತಿದೆ.