Site icon Vistara News

ಹಿರಿಯ ಸಾಹಿತಿ ವೈದೇಹಿ ಅವರಿಗೆ ಪ್ರತಿಷ್ಠಿತ ನೃಪತುಂಗ ಪ್ರಶಸ್ತಿ, ಐವರು ಸಾಧಕರಿಗೆ ಮಯೂರವರ್ಮ ಪ್ರಶಸ್ತಿ

Vaidehi

#image_title

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ೨೦೨೨ನೇ ಸಾಲಿನ ಪ್ರತಿಷ್ಠಿತ ʻಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿʼ ಹಾಗೂ ʻಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿʼಯನ್ನು ಪ್ರಕಟಿಸಲಾಗಿದೆ.

ಹಿರಿಯ ಸಾಹಿತಿ ಉಡುಪಿಯ ವೈದೇಹಿ ಅವರನ್ನು ನೃಪತುಂಗ ಪ್ರಶಸ್ತಿಗೆ ಏಕಧ್ವನಿಯಲ್ಲಿ ಹಾಗೂ ಸರ್ವಾನುಮತದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಳು ಲಕ್ಷ ರೂ. ನಗದು ಹೊಂದಿರುವ ಪ್ರಶಸ್ತಿ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಸಾಹಿತ್ಯ ಪ್ರಶಸ್ತಿಯು ೭ (ಏಳು) ಲಕ್ಷ ರೂ. ನಗದು ಹಾಗೂ ಪ್ರಮಾಣಪತ್ರದ ಜೊತೆ ಫಲ ತಾಂಬೂಲವನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿಯು ಜ್ಞಾನಪೀಠ ಪ್ರಶಸ್ತಿಗೆ ಸರಿಸಮಾನವಾದ ಕನ್ನಡ ನಾಡಿನ ಪ್ರಶಸ್ತಿಯೆಂದು ಪ್ರಖ್ಯಾತವಾಗಿದೆ.

ವೈದೇಹಿಯಾದ ಜಾನಕಿ ಅವರ ಜೀವಮಾನದ ಸಾಧನೆಗೆ ಗೌರವ

ಈ ಬಾರಿ ಹಿರಿಯ ಬರಹಗಾರ್ತಿ ಶ್ರೀಮತಿ ವೈದೇಹಿ ಅವರನ್ನು ಈ ಮೌಲಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವೈದೇಹಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಜಾನಕಿ ಶ್ರೀನಿವಾಸಮೂರ್ತಿ ಅವರು ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರಾಗಿದ್ದು, ಸಣ್ಣಕತೆ, ಕಾವ್ಯ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಹುಲುಸಾದ ಕೃಷಿ ಮಾಡಿದ್ದಾರೆ. ಇವರ ಜೀವಮಾನದ ಸಾಧನೆಯನ್ನು ಪರಿಗಣಿಸಿ ಈ ಮೌಲಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪಡೆದ ಎರಡನೇ ಮಹಿಳಾ ಸಾಹಿತಿ

ನೃಪತುಂಗ ಪ್ರಶಸ್ತಿಯ ಇತಿಹಾಸದಲ್ಲಿ ಈ ಬಾರಿ ಆಯ್ಕೆಗೊಂಡ ವೈದೇಹಿ ಅವರು ಎರಡನೆಯ ಮಹಿಳಾ ಸಾಹಿತಿಯಾಗಿದ್ದಾರೆ. ೨೦೧೨ ರಲ್ಲಿ ಹಿರಿಯ ಬರಹಗಾರ್ತಿ ಸಾರಾ ಅಬೂಬಕರ್‌ ಅವರನ್ನು ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಸಾಹಿತಿಯ ಸಮಗ್ರ ಸೇವೆಯನ್ನು ಪರಿಗಣಿಸಿ ನೃಪತುಂಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಪ್ರಶಸ್ತಿಯು ಕರ್ನಾಟಕದಲ್ಲಿಯೇ ಅತಿ ಹೆಚ್ಚು ನಗದು ಮೊತ್ತವನ್ನು ಒಳಗೊಂಡಿರುತ್ತದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ನೃಪತುಂಗ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಮೃದ್ಧವಾದ ಹಾಗೂ ಮೌಲಿಕವಾದ ಕೊಡುಗೆ ನೀಡಿದ ಬರಹಗಾರರೊಬ್ಬರನ್ನು ಈ ಪ್ರಶಸ್ತಿಗೆ ಪರಿಗಣಿಸಬೇಕು ಎನ್ನುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಭಾಗದ ಸಾಹಿತಿಗಳ ಸಾಧನೆಯನ್ನು ಪರಿಗಣನೆಗೆ ತೆಗೆದುಕೊಂಡು ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಈ ಪ್ರಶಸ್ತಿಯನ್ನು ಯಾವುದೇ ಒಂದು ಕೃತಿಗೆ ನೀಡದೆ ಬರಹಗಾರರು ಕನ್ನಡ ಸಾಹಿತ್ಯಕ್ಕೆ ಕೊಟ್ಟಿರುವ ಸಮಗ್ರ ಕೊಡುಗೆಯನ್ನು ಪರಿಗಣಿಸುವ ಮೂಲಕ ನೀಡಲಾಗುತ್ತದೆ ಎಂದು ನಾಡೋಜ. ಡಾ.ಮಹೇಶ ಜೋಶಿ ತಿಳಿಸಿದರು.

ಗುರುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ. ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯಲ್ಲಿ ನೃಪತುಂಗ ಹಾಗೂ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಗಾಗಿ ಆಯ್ಕೆಯನ್ನು ಮಾಡಲಾಗಿದೆ.

ವಿದ್ಯಾರಶ್ಮಿ ಪೆಲತಡ್ಕ ಸಹಿತ ಐವರಿಗೆ ಮಯೂರವರ್ಮ ಪ್ರಶಸ್ತಿ

೨೦೨೨ನೆಯ ಸಾಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಗೆ ಐವರನ್ನು ಆಯ್ಕೆ ಮಾಡಲಾಗಿದೆ. ಗದಗ ಜಿಲ್ಲೆಯ ಗಜೇಂದ್ರಗಡದ ಹನುಮಂತ ಸೋಮನಕಟ್ಟಿ, ವಿಜಯನಗರ ಜಿಲ್ಲೆಯ ಕೊಟ್ಟೂರಿನ ಶ್ರೀ ಗುಡ್ಡಪ್ಪ ಬೆಟಗೇರಿ, ತುಮಕೂರು ಜಿಲ್ಲೆಯ ಡಾ. ಸತ್ಯಮಂಗಲ ಮಹಾದೇವ, ಗಡಿಭಾಗ ಕಾಸರಗೋಡಿನ ವಿದ್ಯಾರಶ್ಮಿ ಪೆಲತಡ್ಕ ಹಾಗೂ ಹಾಸನದ ಬೇಲೂರು ರಘುನಂದನ ಅವರನ್ನು ಆಯ್ಕೆಮಾಡಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಯೂರ ವರ್ಮ ಸಾಹಿತ್ಯ ಪ್ರಶಸ್ತಿಯು ೨೫,೦೦೧/- ರೂ. ಹಾಗೂ ಪ್ರಮಾಣಪತ್ರದ ಜೊತೆ ಫಲತಾಂಬೂಲ ಒಳಗೊಂಡಿರುತ್ತದೆ.

ಈ ಮಯೂರ ವರ್ಮ ಪ್ರಶಸ್ತಿಯನ್ನು ೪೫ ವರ್ಷದೊಳಗಿನ ಐದು ಜನ ಪ್ರತಿಭಾವಂತ ಸಾಧಕರಿಗೆ ಪ್ರದಾನ ಮಾಡಲಾಗುತ್ತದೆ. ಪ್ರತಿವರ್ಷ ಪುರಸ್ಕೃತರ ಆಯ್ಕೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು, ಪರಿಷತ್ತಿನ ಅಧ್ಯಕ್ಷರ ನೇತ್ರತ್ವದಲ್ಲಿ ೭ (ಏಳು) ಮಂದಿಯ ಆಯ್ಕೆ ಸಮಿತಿಯನ್ನು ರಚಿಸಿ ಕೂಲಂಕಶವಾಗಿ ಚರ್ಚಿಸಿ ಆಯ್ಕೆ ಮಾಡಲಾಗಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ನಿಕಟಪೂರ್ವ ನೃಪತುಂಗ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್, ಹಿರಿಯ ಸಾಹಿತಿ ಡಾ. ಎಸ್.ಆರ್.ಲೀಲಾ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಶ್ರೀ ಸತೀಶ್, ಕ.ರಾ,ರ.ಸಾ.ಸಂಸ್ಥೆಯ ಕನ್ನಡ ಕ್ರಿಯಾ ಸಂಸ್ಥೆಯ ರಾಜ್ಯಾಧ್ಯಕ್ಷರಾದ ವ.ಚ.ಚನ್ನೇಗೌಡ ಆಯ್ಕೆ ಸಮಿತಿ ಸಭೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಹಿರಿಯ ಪತ್ರಕರ್ತ ಡಿ. ಉಮಾಪತಿಗೆ ಕೆಯುಡಬ್ಲ್ಯೂಜೆಯ ಪ್ರತಿಷ್ಠಿತ ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿ

Exit mobile version