ಮಂಗಳೂರು: ಕೇವಲ ಹತ್ತು ದಿನಗಳಲ್ಲಿ ಮೂರು ಕೊಲೆಗಳಿಗೆ ಸಾಕ್ಷಿಯಾದ ದಕ್ಷಿಣ ಕನ್ನಡ ಜಿಲ್ಲೆ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆಯೇ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಕೊಲೆಗೆ ಯತ್ನ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನಾಗಿ ಗುರುತಿಸಿಕೊಂಡಿರುವ ಕಾರ್ತಿಕ್ (೨೮) ಅವರ ಕಾರನ್ನು ಮೂರು ಬಾರಿ ಹಿಂಬಾಲಿಸಲಾಗಿದೆ ಎಂದು ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇದೊಂದು ಕೊಲೆ ಯತ್ನ ಎಂದು ಹೇಳಲಾಗಿದೆ.
ಮಂಗಳೂರಿನ ಬಜ್ಜೋಡಿ ತಾರೆತೋಟ ನಿವಾಸಿಯಾಗಿರುವ ಮುರ್ತಪ್ಪ ಎಂಬವರ ಪುತ್ರ ಕಾರ್ತಿಕ್ ಎಂಬವರನ್ನು ಕೆಲವು ದಿನಗಳ ಅಂತರದಲ್ಲಿ ಮೂರು ಬಾರಿ ಯಾರೋ ಅನುಮಾನಾಸ್ಪದವಾಗಿ ಹಿಂಬಾಲಿಸಿರುವುದು ಬೆಳಕಿಗೆ ಬಂದಿದೆ.
ಆಗಸ್ಟ್ 2, ಆಗಸ್ಟ್ ೫ ಮತ್ತು ಆಗಸ್ಟ್ 7ರ ರಾತ್ರಿ ಕೆಲವರು ದ್ವಿಚಕ್ರ ವಾಹನದಲ್ಲಿ ಅನುಮಾನಸ್ಪದವಾಗಿ ಕಾರನ್ನು ಹಿಂಬಾಲಿಸಿದ್ದಾರೆ. ಮಂಗಳೂರಿನ ಬಜ್ಜೋಡಿ-ಬಿಕರ್ನಕಟ್ಟೆ ರಸ್ತೆಯಲ್ಲಿ ಕಾರು ಸಾಗುತ್ತಿದ್ದಾಗ ಬೆನ್ನಟ್ಟಲಾಗಿದೆ. ಇದೊಂದು ಇಕ್ಕಟ್ಟಿನ ರಸ್ತೆಯೂ ಹೌದು.
ಆಗಸ್ಟ್ 7ರಂದು ರಾತ್ರಿ ೧೦.೩೦ಕ್ಕೆ ಕಾರ್ತಿಕ್ ಅವರು ಮನೆಗೆ ಕಾರಿನಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಬೈಕ್‌ನಲ್ಲಿ ಕೆಲವರು ಹಿಂಬಾಲಿಸಿದ್ದಾರೆ. ಬಳಿಕ ಕಾರಿಗೆ ಬೈಕ್ ತಾಗಿಸಿ ಪರಾರಿಯಾಗಿದ್ದಾರೆ. ಅದೇ ದಿನ ರಾತ್ರಿ 11.43ಕ್ಕೆ ಕಾರ್ತಿಕ್ ಅವರಿಗೆ ಕರೆ ಮಾಡಿ ಬೆದರಿಕೆಯನ್ನೂ ಹಾಕಲಾಗಿದೆ. +1 (661)748-0242 ಸಂಖ್ಯೆಯಿಂದ ಕರೆ ಮಾಡಿ ತುಳು ಮಿಶ್ರಿತ ಮುಸ್ಲಿಂ ಭಾಷೆಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ್ದಾರೆ.
ಈ ಘಟನೆ ನಡೆದ ಬಳಿಕ ಕಾರ್ತಿಕ್ ಅವರು ಹಿಂದಿನ ಕೆಲವು ಘಟನೆಗಳನ್ನು ಮೆಲುಕು ಹಾಕಿಕೊಂಡಿದ್ದಾರೆ. ಆಗಸ್ಟ್ ೨ ಮತ್ತು ಐದರಂದು ಕೂಡಾ ಇದೇ ರೀತಿ ಹಿಂಬಾಲಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅವರು ಪೊಲೀಸರಿಗೆ ದೂರು ನೀಡಿದರು.
ಬೆದರಿಕೆ ಕರೆಯಲ್ಲಿ ಏನಿತ್ತು?
ಕೊಲ್ಲಿ ರಾಷ್ಟ್ರಗಳಿಂದ ಬಂದಿರಬಹುದಾದ ದೂರವಾಣಿ ಕರೆಯಲ್ಲಿ ʻʻಇನಿ ತಪ್ಪಾಯ ಪಂಡ್‌ದ್ ಖುಷಿ ಮಲ್ಪೋಡ್ಚಿ, ಗೊತ್ತುಂಡು, ನನ್ನ ಮೂಜಿ ಜನ ಪಂಪ್‌ವೆಲ್‌ಡ್ ಉಲ್ಲೆರತ್ತಾ, ಬುಡ್ಪುಜಿ ಯಾನ್, ಕರ್ತಿನ ಬೇನೆ ಉಂಡುʼʼ (ಈ ದಿನ ತಪ್ಪಿದ್ದಿ ಎಂದು ಖುಷಿ ಪಡಬೇಡ, ಗೊತ್ತಿದೆ, ಇನ್ನೂ ಮೂರು ಜನ ಪಂಪ್‌ವೆಲ್‌ನಲ್ಲಿ ಇದ್ದಾರೆ, ನಾನು ಬಿಡುವುದಿಲ್ಲ, ಕೊಂದ ನೋವು ಇದೆ) ಎಂದು ಹೇಳಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾರ್ತಿಕ್ ಅವರು ನೀಡಿದ ದೂರಿನಂತೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 506, 507ನಡಿ ಎಫ್ ಐಆರ್ ದಾಖಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ತಿಂಗಳು ಕಳಂಜದ ಮಸೂದ್, ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹಾಗೂ ಸುರತ್ಕಲ್‌ನಲ್ಲಿ ಮೊಹಮ್ಮದ್ ಫಾಝಿಲ್ ಎಂಬ ಮೂವರ ಕೊಲೆಯಾಗಿತ್ತು. ಈ ಮೂರೂ ಸಾವಿನ ನಡುವೆ ಕೋಮು ಸೂಕ್ಷ್ಮ ಅಂಶಗಳಿವೆ ಎನ್ನುವುದು ತನಿಖೆ ವೇಳೆ ಸ್ಪಷ್ಟಗೊಂಡಿದೆ. ಹೀಗಾಗಿ ಹಿಂದೂ ಮತ್ತು ಮುಸ್ಲಿಂ ಧರ್ಮಾಂಧರು ಮತ್ತಷ್ಟು ಕೊಲೆಗಳಿಗೆ ಸಂಚು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ |Praveen Nettaru | ಆರೋಪಿಗಳನ್ನು ಸುಳ್ಯದ ಪಿಎಫ್‌ಐ ಕಚೇರಿಗೆ ಕರೆತಂದು ಮಹಜರು