ಮಂಗಳೂರು: ಇಲ್ಲಿನ ವಿಶ್ವ ಹಿಂದು ಪರಿಷತ್ ಕಾರ್ಯಕರ್ತ ಕಾರ್ತಿಕ್ (೨೮) ಅವರ ಹತ್ಯೆಗೆ ಸಂಚು ನಡೆಸಲಾಗಿದೆ. ಮೂರು ಬಾರಿ ಅವರ ಕಾರನ್ನು ಹಿಂಬಾಲಿಸಲಾಗಿದೆ. ಬೆದರಿಕೆ ಕರೆಯೂ ಬಂದಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಅವರ ಪ್ರಕಾರ, ಕಾರ್ತಿಕ್ ಅವರಿಗೆ ಇಂಟರ್‌ನೆಟ್‌ನಲ್ಲಿ ಬೆದರಿಕೆ ಕರೆ ಬಂದಿರುವುದು ನಿಜ. ಆದರೆ, ಹಿಂಬಾಲಿಸಿದ್ದು ಕೊಲೆಯ ಉದ್ದೇಶದಿಂದ ಅಲ್ಲ.
ಕಾರ್ತಿಕ್ ಅವರು ಮಂಗಳವಾರ ಬೆಳಗ್ಗೆ ಕಂಕನಾಡಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ʻʻಕಳೆದ ಆಗಸ್ಟ್ ೨, ೫ ಮತ್ತು ೭ರಂದು ನಾನು ರಾತ್ರಿ ಮನೆಗೆ ಹೋಗುವ ವೇಳೆ ಯಾರೋ ಹಿಂಬಾಲಿಸುತ್ತಿರುವುದು ಕಂಡುಬಂದಿದೆ. ಆಗಸ್ಟ್ ಏಳರಂದು ಫಾಲೋ ಮಾಡಿದ ವ್ಯಕ್ತಿ ತನ್ನ ಬೈಕನ್ನು ಕಾರಿಗೆ ಡಿಕ್ಕಿ ಹೊಡೆಸಿ ಬಳಿಕ ಪರಾರಿಯಾಗಿದ್ದಾನೆ. ಅದಾದ ಬಳಿಕ ರಾತ್ರಿ ೧೧.೪೩ಕ್ಕೆ ಇಂಟರ್‌ನೆಟ್ ಕರೆ ಮಾಡಿ ಬೆದರಿಕೆಯನ್ನು ಹಾಕಲಾಗಿದೆ. ಇವತ್ತು ತಪ್ಪಿಸಿಕೊಂಡಿದ್ದಿ ಎಂದು ಖುಷಿಪಡಬೇಡ ಎಂದು ಹೆದರಿಸಲಾಗಿದೆʼʼ ಎಂದು ತಿಳಿಸಿದ್ದರು.
ಫಾಲೋ ಮಾಡಿದ್ದು ಅವರಲ್ಲ!
ಹೀಗೆ ಬೆದರಿಕೆ ಹಾಕಿದ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆಯೇ ಮಂಗಳೂರು ಪೊಲೀಸ್ ಕಮೀಷನರ್ ಹೇಳಿಕೆಯೊಂದನ್ನು ನೀಡಿದ್ದು, ʻʻ28 ವರ್ಷದ ವ್ಯಕ್ತಿಯೊಬ್ಬರು ಇಂಟರ್ ನೆಟ್ ಕರೆ ಮತ್ತು ಬೈಕ್ ನಲ್ಲಿ ಫಾಲೋ ಮಾಡಿದ ಬಗ್ಗೆ ದೂರು ಕೊಟ್ಟಿದ್ದಾರೆ. ಇಂಟರ್ನೆಟ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೆದರಿಕೆ ಒಡ್ಡಲಾಗಿದೆ ಎಂದಿದ್ದಾರೆ. ಇಂಟರ್ನೆಟ್ ಕಾಲ್ ಬಂದಿರೋದು ನಿಜ. ಅದರಲ್ಲಿ ಬೆದರಿಕೆ ಹಾಕಲಾಗಿದೆ. ಆದರೆ, ಆದರೆ ಫಾಲೋ ಮಾಡಿದವರು ಜೊಮ್ಯಾಟೊ ಡೆಲಿವರಿ ಬಾಯ್. ಈ ಬಗ್ಗೆ ಸಿಸಿ ಕ್ಯಾಮರಾ ಕೂಡ ಪರಿಶೀಲಿಸಿ ದೂರು ಕೊಟ್ಟವರಿಗೆ ಮಾಹಿತಿ ಕೊಡಲಾಗಿದೆʼʼ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ʻʻಸದ್ಯದ ಆತಂಕಕಾರಿ ಪರಿಸ್ಥಿತಿ ನೋಡಿ ಅವರು ದಿಗಿಲಾಗಿದ್ದಾರೆ. ಅವರಿಗೆ ಇಂಟರ್ನೆಟ್ ನಲ್ಲಿ ಮೂರು ನಾಲ್ಕು ಕರೆ ಬಂದಿರೋದು ಹೌದು. ಹಾಗಾಗಿ ಈ ಬಗ್ಗೆ ನಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಪಂಪ್ ವೆಲ್‌ನಿಂದ ಮನೆಗೆ ಹೋಗುವ ವೇಳೆ ಫಾಲೋ ಮಾಡಿದಂತೆ ಅನಿಸಿತು ಅಂದಿದ್ದಾರೆ. ಅವರಿಗೆ ಇಂಟರ್ನೆಟ್ ಕರೆ ಕೂಡ ಬಂದಿದ್ದ ಕಾರಣ ಸಹಜವಾಗಿ ಅವರಿಗೆ ಆತಂಕ ಇತ್ತು. ಆದರೆ ಅವರನ್ನು ಯಾರೂ ಫಾಲೋ ಮಾಡಿರುವ ಬಗ್ಗೆ ಮಾಹಿತಿ ಇಲ್ಲ. ಅವರಿಗೆ ಈ ಬಗ್ಗೆ ತಿಳಿಸಲಾಗಿದೆʼʼ ಎಂದು ಕಮೀಷನರ್ ಶಶಿಕುಮಾರ್ ಹೇಳಿದ್ದಾರೆ.
ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಬೆದರಿಕೆ ಹಾಕಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಇಂಟರ್ ನೆಟ್ ಕಾಲ್ ಆದ ಕಾರಣ ನಾವು ಪ್ರಕರಣ ದಾಖಲಿಸಿ ತನಿಖೆ ಮಾಡ್ತಾ ಇದೀವಿ ಎಂದ ಅವರು, ʻʻನಮಗೆ ನೊಂದವರು ಮತ್ತು ಆರೋಪಿಗಳ ಸಂಬಂಧ ಅಷ್ಟೇ ಮುಖ್ಯ. ಇದರಲ್ಲಿ ಸಂಘಟನೆ ವಿಚಾರಗಳೆಲ್ಲ ನಮಗೆ ಸಂಬಂಧವಿಲ್ಲʼʼ ಎಂದು ಹೇಳಿದರು.
ಹಿಂದಿನ ಸುದ್ದಿ | ಮಂಗಳೂರಿನಲ್ಲಿ ವಿಹಿಂಪ ಕಾರ್ಯಕರ್ತನ ಹತ್ಯೆಗೆ ಯತ್ನ, 3 ಬಾರಿ ಹಿಂಬಾಲಿಸಿದವರು ಯಾರು?