Site icon Vistara News

Vice president polls: ಈ ಗೌರವವನ್ನು ಅತ್ಯಂತ ವಿನಮ್ರವಾಗಿ ಸ್ವೀಕರಿಸುವೆ ಎಂದ ಮಾರ್ಗರೆಟ್‌ ಆಳ್ವ

Margaret Alva

ಹೊಸದಿಲ್ಲಿ: ನೀವು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕೃತಜ್ಞತೆಗಳು ಎಂದು ಹೇಳುವ ಮೂಲಕ ಹಿರಿಯ ಕಾಂಗ್ರೆಸ್‌ ನಾಯಕಿ ಮಾರ್ಗರೆಟ್‌ ಆಳ್ವ ಅವರು ಉಪರಾಷ್ಟ್ರಪತಿ ಚುನಾವಣೆಯಲ್ಲಿ (Vice president polls) ಪ್ರತಿಪಕ್ಷಗಳ ಜಂಟಿ ಆಭ್ಯರ್ಥಿಯಾಗಿ ಆಯ್ಕೆ ಮಾಡಿದ್ದನ್ನು ಅತ್ಯಂತ ಸಂಭ್ರಮದಿಂದ ಸ್ವೀಕರಿಸಿದ್ದಾರೆ.

ʻʻ ಭಾರತದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ನಾಮ ನಿರ್ದೇಶನಗೊಳ್ಳುವುದು ಒಂದು ಅಫೂರ್ವ ಅವಕಾಶ ಮತ್ತು ಗೌರವ. ಇದನ್ನು ನಾನು ಅತ್ಯಂತ ವಿನಮ್ರವಾಗಿ ಸ್ವೀಕರಿಸುತ್ತೇನೆ. ಮತ್ತು ನನ್ನ ಮೇಲೆ ವಿಶ್ವಾಸವಿಟ್ಟ ಪ್ರತಿಪಕ್ಷಗಳ ನಾಯಕರಿಗೆ ಕೃತಜ್ಞತೆ ಹೇಳುತ್ತಿದ್ದೇನೆ.. ಜೈ ಹಿಂದ್‌ʼ ಎಂದು ಆಳ್ವ ಟ್ವೀಟ್‌ ಮಾಡಿದ್ದಾರೆ.

ಮಂಗಳೂರಲ್ಲಿ ಹುಟ್ಟಿ ಉತ್ತರ ಕನ್ನಡದ ಸಂಸದೆಯಾಗಿ, ಇಡೀ ದೇಶಾದ್ಯಂತ ತಮ್ಮ ಛಾಪನ್ನು ಒತ್ತಿದ ಈ ೮೦ ವರ್ಷದ ಹೋರಾಟಗಾರ್ತಿ ಜುಲೈ ೧೯ರಂದು ಉಪರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅಂದೇ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಗಸ್ಟ್‌ ೬ರಂದು ಮತದಾನ ನಡೆಯಲಿದೆ. ಎನ್‌ಡಿಎ ಈಗಾಗಲೇ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ ಜಗದೀಪ್‌ ಧನಕರ್‌ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ.

೧೯ ಪಕ್ಷಗಳ ಒಮ್ಮತದ ನಿರ್ಣಯ
ಮಾರ್ಗರೆಟ್‌ ಆಳ್ವ ಅವರನ್ನು ಉಪರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರ ಮನೆಯಲ್ಲಿ ನಡೆದ ೧೭ ಪ್ರತಿಪಕ್ಷಗಳ ನಾಯಕರ ಸಭೆಯಲ್ಲಿ. ತೃಣಮೂಲ ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಾರ್ಟಿ ಕೂಡಾ ಇವರಿಗೆ ಬೆಂಬಲ ನೀಡುವ ಸಾಧ್ಯತೆ ಇದ್ದು, ಒಟ್ಟು ೧೯ ಪಕ್ಷಗಳು ಅವರ ಬೆಂಬಲಕ್ಕೆ ನಿಂತಂತಾಗಿದೆ.
ನಾವು ಮಮತಾ ಬ್ಯಾನರ್ಜಿ ಮತ್ತು ಅರವಿಂದ ಕೇಜ್ರಿವಾಲ್‌ ಅವರನ್ನು ಸಂಪರ್ಕಿಸಿದ್ದೇವೆ. ಕಳೆದ ಬಾರಿಯೂ ಅವರು ಜಂಟಿ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಇದರ ಜತೆಗೆ ಜೆಎಂಎಂ ಕೂಡಾ ನಮ್ಮನ್ನು ಬೆಂಬಲಿಸುವ ಸಾಧ್ಯತೆ ಇದೆ ಎಂದು ಸಭೆಯ ಬಳಿಕ ಶರದ್‌ ಪವಾರ್‌ ಹೇಳಿದರು.

ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಜೈರಾಮ್‌ ರಮೇಶ್‌, ಸಿಪಿಎಂ ನಾಯಕರಾದ ಸೀತಾರಾಮ್‌ ಯೆಚೂರಿ, ಸಿಪಿಐನ ಡಿ. ರಾಜಾ, ಬಿನೋಯ್‌ ವಿಶ್ವಂ, ಶಿವಸೇನೆಯ ಸಂಜಯ್‌ ರಾವತ್‌, ಡಿಎಂಕೆಯ ಟಿ.ಆರ್‌. ಬಾಲು, ತಿರುಚಿ ಶಿವ, ಸಮಾಜವಾದಿ ಪಾರ್ಟಿಯ ರಾಮ್‌ ಗೋಪಾಲ್‌ ಯಾದವ್‌, ಎಂಡಿಎಂಕೆಯ ವೈಕೋ, ಟಿಆರ್‌ಎಸ್‌ನಿಂದ ಕೆ. ಕೇಶವ ರಾವ್‌ ಪ್ರತಿನಿಧಿಗಳಾಗಿ ಬಂದಿದ್ದರು. ಆರ್‌ಜೆಡಿಯ ಎ.ಡಿ. ಸಿಂಗ್‌, ಮುಸ್ಲಿಂ ಲೀಗ್‌ನ ಇ.ಟಿ. ಮೊಹಮ್ಮದ್‌ ಬಶೀರ್‌, ಕೇರಳ ಕಾಂಗ್ರೆಸ್‌ನ ಜೋಸ್‌ ಕೆ. ಮಣಿ ಇದ್ದರು. ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿರುವ ಶಿವಸೇನೆ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಪಾಳಯಕ್ಕೆ ಜಿಗಿದಿದೆ.

ಗೆಲ್ಲುವುದು ಎನ್‌ಡಿಎ ಅಭ್ಯರ್ಥಿಯೆ
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರು ಮತದಾರರಾಗಿರುತ್ತಾರೆ. ಎರಡೂ ಕಡೆಯಲ್ಲೂ ಎನ್‌ಡಿಎ ಪಾರಮ್ಯ ಹೊಂದಿರುವುದರಿಂದ ಎನ್‌ಡಿಎ ಅಭ್ಯರ್ಥಿ ಜಗದೀಪ್‌ ಧನಕರ್‌ ಗೆಲ್ಲುವುದು ಬಹುತೇಕ ಖಚಿತವಾಗಿದೆ.
Vice President Election | ಕನ್ನಡತಿ, ಮಾಜಿ ಕೇಂದ್ರ ಸಚಿವೆ ಮಾರ್ಗರೆಟ್‌ ಆಳ್ವಾ UPA ಉಪರಾಷ್ಟ್ರಪತಿ ಅಭ್ಯರ್ಥಿ

Exit mobile version