ಚಿತ್ರದುರ್ಗ: ಇಲ್ಲಿನ ಮುರುಘಾ ಮಠದ ಮುರುಘಾ ಶರಣರ (Murugha Seer) ಮೇಲಿನ ಎರಡನೇ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಜನವರಿ ೧೦ರಂದು ಸಲ್ಲಿಸಿರುವ ಚಾರ್ಜ್‌ಶೀಟ್ ಪ್ರತಿ ಲಭ್ಯವಾಗಿದ್ದು, ಆರೋಪಿ, ಸಂತ್ರಸ್ತೆಯರ ಹೇಳಿಕೆಯ ಜತೆಗೆ ವೈದ್ಯಕೀಯ ವರದಿಯನ್ನೂ ಉಲ್ಲೇಖಿಸಲಾಗಿದೆ. ಇದರಲ್ಲಿ ತಾವು ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ಎಸಗಿಲ್ಲ ಎಂದು ಪ್ರಕರಣದ ಎ೧ ಆರೋಪಿ ಮುರುಘಾ ಶ್ರೀಗಳು ಹೇಳಿಕೆ ನೀಡಿದ್ದರೆ, ಸಂತ್ರಸ್ತೆಯರು ಸುಳ್ಳು ಆರೋಪ ಮಾಡಿದ್ದು, ನಾನು ಶ್ರೀಗಳ ಕೊಠಡಿಯನ್ನೇ ನೋಡಿಲ್ಲ ಎಂದು ೨ನೇ ಆರೋಪಿ ವಾರ್ಡನ್ ರಶ್ಮಿ ಹೇಳಿಕೆ ನೀಡಿದ್ದಾರೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಎರಡನೇ ಪ್ರಕರಣದ ಮೊದಲ ಸಂತ್ರಸ್ತೆಯು, ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾಗಿ ಹೇಳಿಕೆ ನೀಡಿದ್ದಾಳೆ. ಇನ್ನು ವೈದ್ಯಕೀಯ ವರದಿಯಲ್ಲಿ ಬಾಲಕಿಯರಿಬ್ಬರ ಮೇಲೆ ಲೈಂಗಿಕ ಕ್ರಿಯೆ ನಡೆದಿಲ್ಲವಾದರೂ ಲೈಂಗಿಕ ದೌರ್ಜನ್ಯ ನಡೆದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಉಲ್ಲೇಖಿಸಲಾಗಿದೆ.
ಮುರುಘಾ ಮಠದ ಮುರುಘಾ ಶರಣರು ಮೊದಲ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದರು. ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ಸಹ ವಜಾಗೊಂಡಿದೆ. ಈಗ ಮತ್ತೊಂದು ಕೇಸ್‌ನಲ್ಲಿ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ. ಈ ಚಾರ್ಜ್‌ಶೀಟ್ ಒಟ್ಟು 761 ಪುಟಗಳನ್ನು ಹೊಂದಿದ್ದು, ಎರಡು ಭಾಗವಾಗಿ (ಎ ಮತ್ತು ಬಿ) ಸಲ್ಲಿಕೆ ಮಾಡಲಾಗಿದೆ.
ಲೈಂಗಿಕ ದೌರ್ಜನ್ಯ ಅಲ್ಲಗಳೆಯುವಂತಿಲ್ಲ
ಸಂತ್ರಸ್ತ ಬಾಲಕಿಯರಿಬ್ಬರ ವೈದ್ಯಕೀಯ ಪರೀಕ್ಷೆ ವರದಿಯನ್ನು ಸಹ ಉಲ್ಲೇಖಿಸಲಾಗಿದೆ. ಸಂತ್ರಸ್ತ ಬಾಲಕಿಯರ ಜತೆ ಲೈಂಗಿಕ ಕ್ರಿಯೆ ನಡೆದಿಲ್ಲ. ಆದರೆ, ಲೈಂಗಿಕ ದೌರ್ಜನ್ಯವನ್ನು ಅಲ್ಲಗಳೆಯುವಂತಿಲ್ಲ ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಯ ವೈದ್ಯರಿಂದ ಸಲ್ಲಿಕೆಯಾಗಿರುವ ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಡಾ.ಉಮಾ ಹಾಗೂ ಡಾ. ರೂಪಾ ಅವರಿಂದ ವೈದ್ಯಕೀಯ ವರದಿ ಸಲ್ಲಿಕೆಯಾಗಿತ್ತು.
ಇದನ್ನೂ ಓದಿ: Karnataka Election: ಕೋಲಾರದಲ್ಲಿ ರಮೇಶ್ ಕುಮಾರ್, ಕೆ.ಎಚ್.ಮುನಿಯಪ್ಪ ನಡುವೆ ಮುಂದುವರಿದ ಮುನಿಸು
ಮಕ್ಕಳನ್ನು ಕಳಿಸಲು ಟೈಂಟೇಬಲ್ ಮಾಡಿಲ್ಲ- ವಾರ್ಡನ್ ರಶ್ಮಿ
6 ವರ್ಷಗಳಿಂದ ಮಠದ ಹಾಸ್ಟೆಲ್ ವಾರ್ಡನ್ ಆಗಿದ್ದೇನೆ. ಮುರುಘಾಶ್ರೀ ಕೊಠಡಿಗೆ ಮಕ್ಕಳನ್ನು ಕಳಿಸಲು ಟೈಂ ಟೇಬಲ್ ಮಾಡಿಲ್ಲ. ಮುರುಘಾಶ್ರೀ ಖಾಸಗಿ ಕೊಠಡಿಗೆ ಮಕ್ಕಳನ್ನು ಕಳಿಸಿಲ್ಲ. ಮಕ್ಕಳನ್ನು ನಾನು ಹೊಡೆದಿಲ್ಲ, ತಪ್ಪು ಮಾಡಿದಾಗ ಬುದ್ಧಿವಾದ ಹೇಳಿದ್ದೇನೆ, ಎರಡೇಟು ಹೊಡೆದಿದ್ದೇನೆ. ದೂರುದಾರ ಅಡುಗೆ ಸಹಾಯಕಿ ಹಾಗೂ ಅವರ ಇಬ್ಬರು ಮಕ್ಕಳು ನನಗೆ ಗೊತ್ತು. ಆದರೆ, ಸಂತ್ರಸ್ತ ಮಕ್ಕಳು ಸುಳ್ಳು ಆರೋಪ ಮಾಡಿದ್ದಾರೆ ಎಂದು ಪ್ರಕರಣದ ಎ2 ಆರೋಪಿ ವಾರ್ಡನ್ ರಶ್ಮಿ ನೀಡಿರುವ ಹೇಳಿಕೆಯನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಮಠದ ಹಾಲ್‌ನಲ್ಲಿ ಭಕ್ತಾದಿಗಳು ಮತ್ತು ಮಕ್ಕಳಿಗೆ ಹಣ್ಣು, ಡ್ರೈಫ್ರೂಟ್ಸ್ ಅನ್ನು ಶ್ರೀಗಳು ನೀಡುತ್ತಿದ್ದರು. ಸ್ವಾಮೀಜಿ ನೀಡುವ ಹಣ್ಣಿನಲ್ಲಿ ಮತ್ತು ಬರುವ ಔಷಧಿ ಇರುತ್ತಿತ್ತು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಸ್ವಾಮೀಜಿ ಖಾಸಗಿ ಕೊಠಡಿಯನ್ನೇ ನೋಡಿಲ್ಲ. ಮಕ್ಕಳಿಗೆ ಹೊಡೆಯುವ ಸ್ಕೇಲ್ ನನ್ನ ರೂಮಿನಲ್ಲಿದೆ ಎಂದು ರಶ್ಮಿ ನೀಡಿರುವ ಹೇಳಿಕೆ ದಾಖಲಾಗಿದೆ.
ನಾನು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿಲ್ಲ- ಮುರುಘಾಶ್ರೀ
ದೂರುದಾರ ಅಡುಗೆ ಸಹಾಯಕಿ ಮತ್ತು ಮಕ್ಕಳ ಬಗ್ಗೆ ನನಗೆ ಮಾಹಿತಿ ಇಲ್ಲ. ಖಾಸಗಿ ಕೊಠಡಿಗೆ ಮಕ್ಕಳು ಹೆಚ್ಚಾಗಿ ಬರುತ್ತಿರಲಿಲ್ಲ. ದರ್ಬಾರ್ ಹಾಲ್, ಶಿರಸಂಗಿ ಸಭಾಂಗಣಕ್ಕೆ ಬರುತ್ತಿದ್ದರು. ನಾನಿಲ್ಲದ ವೇಳೆ ನನ್ನ ಕೋಣೆಗೆ ಹೋಗಿದ್ದರೆ ಆ ಬಗ್ಗೆ ನನಗೆ ತಿಳಿದಿಲ್ಲ. ನಾನು ಮಠದಲ್ಲಿದ್ದಾಗ ಖಾಸಗಿ ಕೊಠಡಿಗೆ ಬೀಗ ಹಾಕುತ್ತಿರಲಿಲ್ಲ. ನನ್ನ ಕೊಠಡಿಗೆ ಹೆಣ್ಣು ಮಕ್ಕಳು ಬರಲು ಟೈಂ ಟೇಬಲ್ ಹಾಕಿರಲಿಲ್ಲ. ಸಂತ್ರಸ್ತ ಬಾಲಕಿಯರು ಯಾವತ್ತೂ ನನ್ನ ಕೊಠಡಿಗೆ ಬಂದಿಲ್ಲ ಎಂದು ಪ್ರಕರಣದ ಮೊದಲನೇ ಆರೋಪಿ ಶಿವಮೂರ್ತಿ ಮುರುಘಾ ಶರಣರು ನೀಡಿರುವ ಹೇಳಿಕೆಯನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Retail Inflation : ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ 6.52%ಕ್ಕೆ ಜಿಗಿತ, ಆರ್‌ಬಿಐ ಸುರಕ್ಷತಾ ಮಟ್ಟ ಮೀರಿದ ಬೆಲೆ ಏರಿಕೆ
ದರ್ಬಾರ್ ಹಾಲ್‌ನಲ್ಲಿ ಟ್ಯೂಷನ್ ನಡೆಸುತ್ತಿದ್ದೆ. ಮಕ್ಕಳಿಗೆ ಪ್ರಸಾದದ ರೂಪದಲ್ಲಿ ಹಣ್ಣು, ಡ್ರೈಫ್ರೂಟ್ಸ್ ನೀಡುತ್ತಿದ್ದೆ. ವಿದೇಶಕ್ಕೆ ಹೋದಾಗ ನಾನು ಚಾಕೋಲೇಟ್ ತರುತ್ತಿದ್ದೆ. ಮಕ್ಕಳಿಗೆ ಮಾತ್ರ ಅಲ್ಲ, ಮಠದಲ್ಲಿದ್ದ ಎಲ್ಲರಿಗೂ ಕೊಡುತ್ತಿದ್ದೆ. ಚಾಕೊಲೇಟ್‌ಗಳಲ್ಲಿ ಮತ್ತು ಬರಿಸುವ ಅಂಶ ಇರುವುದಿಲ್ಲ. ನಾನು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಚಾರ್ಜ್‌ಶೀಟ್‌ನಲ್ಲಿ ಮತ್ತೇನಿದೆ?
ಒಟ್ಟು 761 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಮಕ್ಕಳು ಮತ್ತು ಕುಟುಂಬಸ್ಥರ ಅನುಕಂಪ, ಗೌರವ ಗಳಿಸಿ ದೌರ್ಜನ್ಯ ಎಸೆಗಲಾಗಿದೆ. ಹಾಸ್ಟೆಲ್ ವಾರ್ಡನ್ ರಶ್ಮಿ ಮೂಲಕ ಮಕ್ಕಳನ್ನು ಕೊಠಡಿಗೆ ಕರೆಸಿಕೊಂಡಿದ್ದರು. ಮತ್ತು ಭರಿಸುವ ಚಾಕೋಲೆಟ್ ನೀಡಿ ಲೈಂಗಿಕ ದೌರ್ಜನ್ಯ ಎಸೆಗಲಾಗಿದೆ. ಕಲಂ 376(C), 376(2)(n), 376(AB), 376(3), r/w 34, ಐಪಿಸಿ & u/s 5(L), 6,7 POCSO Act -2012 & sec: 3(f), 7 ಧಾರ್ಮಿಕ ಕೇಂದ್ರ ದುರ್ಬಳಕೆ 1988
& sec 77 Juvenile Justice Act 2015 ಅಡಿ ಪ್ರಕರಣವನ್ನು ದಾಖಲು ಮಾಡಲಾಗಿದ್ದು, ಸಂತ್ರಸ್ತರು ನೀಡಿರುವ ಸಿಆರ್‌ಪಿಸಿ 161, 164 ಹೇಳಿಕೆ ಆಧಾರದ ಮೇಲೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಎ1 ಆರೋಪಿ ಮುರುಘಾಶ್ರೀ, ಎ2 ಆರೋಪಿ ವಾರ್ಡನ್ ರಶ್ಮಿ ವಿರುದ್ಧ ಸಲ್ಲಿಕೆಯಾಗಿರುವ ಚಾರ್ಜ್‌ಶೀಟ್‌ನಲ್ಲಿ ಕಲಂ 173 (8) ಸಿಆರ್‌ಪಿಸಿ ಅಡಿಯಲ್ಲಿ ತನಿಖೆ ಮುಂದುವರಿದಿದೆ ಎಂದು ಮಾಹಿತಿ ನೀಡಲಾಗಿದೆ. ದೂರಿನಲ್ಲಿ ನಾಲ್ವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ದೃಢಪಟ್ಟಿಲ್ಲ. ಮುರುಘಾಶ್ರೀ ವಿರುದ್ಧ ಪಿತೂರಿ ಕೇಸ್, ಕೌಂಟರ್ ಬ್ಲಾಸ್ಟ್ ಕೇಸ್ ಎಂದು ಕಂಡು ಬರುತ್ತದೆ. ಬಾಕಿ ತನಿಖೆ ಪೂರ್ಣಗೊಳಿಸಿ ಅಂತಿಮ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Murder Case: ಪತ್ನಿಯ ಕತ್ತು ಸೀಳಿದ ಪತಿ ಪರಾರಿ, ಸಣ್ಣದಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
14 ವರ್ಷದ ಸಂತ್ರಸ್ತ ಬಾಲಕಿಯು ಸಿಆರ್‌ಪಿಸಿ 161 ರ ಅಡಿ ಹೇಳಿಕೆ ನೀಡಿದ್ದು, ವಾರ್ಡನ್ ರಶ್ಮಿ ಮುರುಘಾಶ್ರೀ ಬಳಿ ಹೋಗಲು ಟೈಂ ಟೇಬಲ್ ಹಾಕಿದ್ದರು. ಪ್ರತಿ ದಿನ ಹಾಸ್ಟೆಲ್‌ನ ಇಬ್ಬರು ಮಕ್ಕಳು ಮುರುಘಾಶ್ರೀ ಬಳಿ ಹೋಗಬೇಕಿತ್ತು. ದತ್ತು ಕೇಂದ್ರದ ಮಕ್ಕಳನ್ನೂ ಕರೆದುಕೊಂಡು ಹೋಗಬೇಕಿತ್ತು ಎಂದು ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಲಾಕ್‌ಡೌನ್ ವೇಳೆ ಮಕ್ಕಳೊಂದಿಗೆ ಕಾಲ ಕಳೆಯುವುದು ಮುರುಘಾಶ್ರೀಗೆ ರೂಢಿ ಆಗಿತ್ತು. ಮೊದಲ ಭಾನುವಾರ ಮುರುಘಾಶ್ರೀ ಬಳಿಗೆ ಹೋದಾಗ ಚಾಕೋಲೆಟ್ ನೀಡಿದ್ದರು. ಮಧ್ಯಾಹ್ನದವರೆಗೆ ಮುರುಘಾಶ್ರೀ ರೂಮ್‌ನಲ್ಲಿದ್ದು ಬಂದಿದ್ದೆ. ಪ್ರತಿ ಭಾನುವಾರ ನಾನು ಮುರುಘಾಶ್ರೀ ರೂಮ್‌ಗೆ ಹೋಗಬೇಕಿತ್ತು. ಸ್ವಾಮೀಜಿ ನೀಡಿದ ಚಾಕೋಲೆಟ್ ತಿಂದ ಬಳಿಕ ನಿದ್ದೆ ಬಂದು ಮಲಗಿದ್ದೆ. ಎಚ್ಚರವಾದಾಗ ಸುಸ್ತು ಹಾಗೂ ಕಾಲು, ತೊಡೆ ಭಾಗದಲ್ಲಿ ನೋವಿತ್ತು. ಮತ್ತೊಂದು ಭಾನುವಾರ ಹೋದಾಗ ಮತ್ತೆ ಚಾಕೋಲೆಟ್ ನೀಡಿದರು. ಎಚ್ಚರವಾದಾಗ ಮುರುಘಾಶ್ರೀ ಏನೋ ಮಾಡಿದ್ದಾರೆ ಎಂದು ತಿಳಿಯಿತು. ಟೈಂ ಟೇಬಲ್ ಬದಲಾದ ಕಾರಣ ಸೋಮವಾರ ಹೋಗಬೇಕಾಯಿತು. ಕುರ್ಚಿ ಮೇಲೆ ಕುಳಿತಿದ್ದ ಮುರುಘಾಶ್ರೀ ತೊಡೆ ಮೇಲೆ ಕೂರಿಸಿಕೊಂಡರು. ಖಾಸಗಿ ಅಂಗಾಂಗ ಮುಟ್ಟಿ ಲೈಂಗಿಕ ದೌರ್ಜನ್ಯ ಮಾಡಿದರು. ಮುರುಘಾಶ್ರೀ ರೂಮಿನಲ್ಲಿ 2ಸಲ ಮಲಗಿದ್ದಾಗ ಬಳಸಿಕೊಂಡಿದ್ದಾರೆ ಅನ್ನಿಸುತ್ತಿದೆ. ಮುರುಘಾಶ್ರೀ ರೂಮ್‌ಗೆ ಹೋಗಿ ಬಂದಾಗಿಂದ ಸರಿಯಾಗಿ ಪೀರಿಯಡ್ಸ್ ಆಗುತ್ತಿರಲಿಲ್ಲ. ವಾರ್ಡನ್ ರಶ್ಮಿ ಟೈಂ ಟೇಬಲ್‌ನಂತೆ ಹೋಗದಿದ್ದರೆ ಹೊಡೆಯುತ್ತಿದ್ದರು ಎಂದು ಬಾಲಕಿ ನೀಡಿರುವ ಹೇಳಿಕೆಯನ್ನು ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಜಾರ್ಜ್‌ಶೀಟ್ ಪ್ರತಿ ಕೇಳಿದ್ದ ವಕೀಲರು
ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ 2ನೇ ಫೋಕ್ಸೋ ಪ್ರಕರಣದಲ್ಲಿ ಗ್ರಾಮಾಂತರ ಪೊಲೀಸರಿಂದ ಜನವರಿ ೧೦ರಂದು ಸಲ್ಲಿಕೆಯಾಗಿದ್ದ ಚಾರ್ಜ್‌ಶೀಟ್ ಪ್ರತಿಯನ್ನು ನೀಡುವಂತೆ ಮುರುಘಾ ಶ್ರೀ ಪರ ವಕೀಲರು ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಕೋರಿದ್ದರು. ಈ ಸಂಬಂಧ ಸೋಮವಾರ (ಫೆ. ೧೩) ಚಾರ್ಜ್‌ಶೀಟ್‌ಗೆ ನಂಬರ್ ನೀಡಿ ಪ್ರತಿಯನ್ನು ಕೋರ್ಟ್ ನೀಡಿದೆ.
2022ರ ಅ.13ರಂದು 2ನೇ ಪೋಕ್ಸೊ ಪ್ರಕರಣ ದಾಖಲು
ಮುರುಘಾ ಶರಣರ ವಿರುದ್ಧ ಅಕ್ಟೋಬರ್ 13ರಂದು ಫೋಕ್ಸೊ ಪ್ರಕರಣ ದಾಖಲಾಗಿತ್ತು. ಮುರುಘಾಶ್ರೀ ಸೇರಿ 7 ಜನರ ವಿರುದ್ಧ ಕೇಸ್ ದಾಖಲಾಗಿತ್ತು. ಎ1 ಆರೋಪಿ ಮುರುಘಾಮಠದ ಮುರುಘಾಶ್ರೀ, ಎ2 ಆರೋಪಿ ವಾರ್ಡನ್ ರಶ್ಮಿ, ಎ3 ಆರೋಪಿಯಾಗಿ ಮಠದ ಉತ್ತರಾಧಿಕಾರಿ (ಬಸವಾದಿತ್ಯ 17), ಎ4 ಮ್ಯಾನೇಜರ್ ಪರಮಶಿವಯ್ಯ, ಎ5 ವಕೀಲ ಗಂಗಾಧರ, ಎ6 ಮುರುಘಾಶ್ರೀ ಸಹಾಯಕ ಮಹಾಲಿಂಗ, ಎ7 ಅಡುಗೆಭಟ್ಟ ಕರಿಬಸಪ್ಪ ವಿರುದ್ಧ ಕೇಸ್ ದಾಖಲು ಮಾಡಲಾಗಿತ್ತು. ಮಠದ ಅಡುಗೆ ಸಹಾಯಕಿ ನೀಡಿದ ದೂರಿನನ್ವಯ ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಬಳಿಕ ಅಲ್ಲಿಂದ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ದೂರು ವರ್ಗಾವಣೆ ಆಗಿತ್ತು.
ಇದನ್ನೂ ಓದಿ: Cryptocurrency : ಬಿಟ್ ಕಾಯಿನ್, ಬೆಟ್ಟಿಂಗ್, ತಂಬಾಕಿನ ಜಾಹೀರಾತು ಬೇಡ; ಫ್ರಾಂಚೈಸಿಗಳಿಗೆ ಬಿಸಿಸಿಐ ಸೂಚನೆ
ಮಠದ ಹಾಸ್ಟೆಲ್‌ನಲ್ಲಿದ್ದ ತನ್ನ ಇಬ್ಬರು ಮಕ್ಕಳು, ಮತ್ತಿಬ್ಬರು ಮಕ್ಕಳು ಸೇರಿ ನಾಲ್ವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಅಡುಗೆ ಸಹಾಯಕಿ ದೂರಿನಲ್ಲಿ ಉಲ್ಲೇಖಿಸಿದ್ದರು. ಬಳಿಕ ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿ, ವೈದ್ಯಕೀಯ ಪ್ರಕ್ರಿಯೆಗಳನ್ನು ಪೂರೈಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಅನ್ನು ಸಲ್ಲಿಕೆ ಮಾಡಲಾಗಿತ್ತು.