Site icon Vistara News

Victoria Hospital: 11ನೇ ಮಹಡಿಯಿಂದ ಬಿದ್ದು ಕಾರ್ಮಿಕನಿಗೆ ಗಂಭೀರ ಗಾಯ

Victoria Hospital

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ (Victoria Hospital) ಕಟ್ಟಡ ಕಾಮಗಾರಿ ವೇಳೆ ಆಯತಪ್ಪಿ ಬಿದ್ದು ಕಾರ್ಮಿಕರೊಬ್ಬರಿಗೆ ಗಂಭೀರ ಗಾಯಗಳಾಗಿವೆ. 11ನೇ ಮಹಡಿಯಿಂದ ಕಾರ್ಮಿಕ ಬಿದ್ದಿದ್ದು, ಸದ್ಯ ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ತಮಿಳುನಾಡಿನ ಧರ್ಮಪುರಿಯ ಕಾರ್ಮಿಕ ಮುನಿರಾಜು ಗಾಯಾಳು. ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಕಳೆದ 4 ವರ್ಷಗಳಿಂದ 1000 ಬೆಡ್‌ಗಳ ಸರ್ಜಿಕಲ್ ಆಸ್ಪತ್ರೆ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಮುಂಜಾಗ್ರತಾ ಕ್ರಮ ವಹಿಸದೇ ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದರಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿವಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಮುನಿರಾಜು ಕೆಲಸಕ್ಕೆ ಬರುತ್ತಿದ್ದ. ಮಂಗಳವಾರ ಕಲ್ಲಿನ ನೆಲ‌ಹಾಸು ಹಾಕುವ ಕೆಲಸ ಮಾಡುತ್ತಿದ್ದಾಗ ಆಯ ತಪ್ಪಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕನಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮಳೆಯ ಅಬ್ಬರಕ್ಕೆ ಕುಸಿದ ಸರ್ಕಾರಿ ಶಾಲೆ ಗೋಡೆ

ಶಿವಮೊಗ್ಗ: ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಈ ನಡುವೆ ಭಾರಿ ಮಳೆಗೆ ಸರ್ಕಾರಿ ಶಾಲೆಯ ಗೋಡೆ ಕುಸಿದಿದ್ದು, ಮಕ್ಕಳು ಕೊಠಡಿಯಲ್ಲಿ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿ ಉರ್ದು ಸರ್ಕಾರಿ ಶಾಲೆಯ ಗೋಡೆ ಕುಸಿತಿದೆ.

ವಿದ್ಯಾರ್ಥಿಗಳು ಹೊರಗೆ ತೆರಳಿದ್ದ ಸಮಯದಲ್ಲಿ ಗೋಡೆ ಕುಸಿದಿದೆ. ಇದರಿಂದ ಭಾರಿ ಅನಾಹುತ ತಪ್ಪಿದೆ. ಅನೇಕ ದಿನಗಳಿಂದ ಅಧಿಕಾರಿಗಳಿಗೆ ಕೊಠಡಿ ದುರಸ್ತಿಗೊಳಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ ಅವಘಡ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಹೋಮ್‌ ವರ್ಕ್‌ ಮಾಡದ್ದಕ್ಕೆ ಬಾಲಕಿಗೆ ಬಾಸುಂಡೆ ಬರುವಂತೆ ಬಾರಿಸಿದ ಮುಖ್ಯ ಶಿಕ್ಷಕಿ

ವಿಜಯನಗರ : ಹೋಮ್‌ ವರ್ಕ್ (Home Work) ಮಾಡದಿದ್ದಕ್ಕೆ ವಿದ್ಯಾರ್ಥಿನಿಗೆ ಕಾಲು ಊತ ಬರುವಂತೆ ಮುಖ್ಯ ಶಿಕ್ಷಕಿ (Assault Case) ಬಾರಿಸಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿರುವ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ.

ವಿಜ್ಞಾನ ವಿಷಯದ ಹೋಂ ವರ್ಕ್ ಮಾಡದಿದ್ದಕ್ಕೆ ಮುಖ್ಯ ಶಿಕ್ಷಕಿ ವಾಣಿ ಎಂಬುವವರು ವಿದ್ಯಾರ್ಥಿನಿಗೆ ಮನಬಂದಂತೆ ಹೊಡೆದಿದ್ದಾರೆ. ಮಾನಸ ಎಂಬಾಕೆಗೆ ಈ ಮೊದಲು ಅಪಘಾತ ಆಗಿದ್ದರಿಂದ ಕಾಲಿಗೆ ರಾಡ್ ಅಳವಡಿಸಲಾಗಿತ್ತು. ಮತ್ತೆ ಅದೇ ಕಾಲಿಗೆ ಶಿಕ್ಷಕಿ ವಾಣಿ ಸ್ಕೇಲ್‌ನಿಂದ ಜೋರಾಗಿ ಹೊಡೆದಿದ್ದಾರೆ. ಜೋರಾಗಿ ಹೊಡೆತದಿಂದಾಗಿ ಕಾಲು ಊದಿಕೊಂಡು ಬಾಲಕಿಗೆ ನಡೆದಾಡುವುದಕ್ಕೂ ಸಾಧ್ಯವಾಗಿಲ್ಲ.

ಇದನ್ನೂ ಓದಿ: Murder case : ಭೂ ವಿವಾದಕ್ಕಾಗಿ ಪರಸ್ಪರ ಹೊಡೆದಾಡಿಕೊಂಡ ಅಣ್ಣ-ತಮ್ಮ ಮೃತ್ಯು

ಇನ್ನೂ ಮನಸೋ ಇಚ್ಛೆ ಥಳಿಸಿದ ಶಿಕ್ಷಕಿ ವಾಣಿಯೇ ಬಾಲಕಿಯನ್ನು ಚಿತ್ರದುರ್ಗದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎಲುಬು ಮತ್ತು ಮೂಳೆ ತಜ್ಞರಿಂದ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕಿಯ ಕಾಲಿಗೆ ಬ್ಯಾಂಡೇಜ್ ಹಾಕಿ ಸೂಕ್ತ ಚಿಕಿತ್ಸೆ ನೀಡಿ ವೈದ್ಯರು ಕಳಿಸಿದ್ದಾರೆ. ಇತ್ತ ಬಾಲಕಿಯನ್ನು ನೋಡಲೆಂದು ಪಾಲಕರು ಭಾನುವಾರ ಶಾಲೆಗೆ ಬಂದಿದ್ದಾರೆ. ಆಗಲೇ ಮಗಳ ಕಾಲಿನ ಸ್ಥಿತಿ ನೋಡಿ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ಪೋಷಕರು ಬಳಿಕ ಮುಖ್ಯ ಶಿಕ್ಷಕಿ ವಾಣಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Exit mobile version