ಬೆಂ. ಗ್ರಾಮಾಂತರ: ದೊಡ್ಡಬಳ್ಳಾಪುರದಲ್ಲಿ ಅಕ್ರಮ ಗೋಮಾಂಸ ಸಾಗಾಟಗಾರರ ಮೇಲೆ ಹಲ್ಲೆಯ (Beef Smuggling) ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ಹಿನ್ನೆಲೆಯಲ್ಲಿ 6 ಫೇಸ್‌ಬುಕ್ ಹಾಗೂ ಟೆಲಿಗ್ರಾಪ್ ಗ್ರೂಪ್‌ಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೆ.24ರಂದು ದೊಡ್ಡಬಳ್ಳಾಪುರದ ಐಬಿ ವೃತ್ತದಲ್ಲಿ ಅಕ್ರಮವಾಗಿ 18 ಟನ್ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಶ್ರೀರಾಮಸೇನೆ ಕಾರ್ಯಕರ್ತರು ತಡೆದಿದ್ದರು. ಈ ವೇಳೆ ವಾಹನ ಚಾಲಕರು ಹಲ್ಲೆಗೆ ಯತ್ನಿಸಿದರು ಎಂದು ರೊಚ್ಚಿಗೆದ್ದ ಶ್ರೀರಾಮಸೇನೆ ಕಾರ್ಯಕರ್ತರು, ಗೋಮಾಂಸ ಸಾಗಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿ, ಕಾರಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರಹಾಕಿದ್ದರು. ಈ ಸಂಬಂಧ 23 ಮಂದಿಯನ್ನು ಪೊಲೀಸರು ಈಗಾಗಾಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಗೋಮಾಂಸ ಸಾಗಾಟಗಾರರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ 2 ಕೇಸ್ ದಾಖಲಿಸಿ, 19 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ನಂತರ ನಾಲ್ವರನ್ನು ವಶಕ್ಕೆ ಪಡೆಯಲಾಗಿತ್ತು. ಇನ್ನು ಘಟನೆಗೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕುವಂತಹ ಹಲ್ಲೆಯ ವಿಡಿಯೊ ಶೇರ್ ಮಾಡಿದ ಹಿನ್ನೆಲೆಯಲ್ಲಿ ಸೆನ್ ಠಾಣೆ (CEN) ಪೊಲೀಸರು 6 ಸೋಶಿಯಲ್ ಮೀಡಿಯಾ ಗ್ರೂಪ್‌ಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ | Cauvery water dispute : ಕನ್ನಡಿಗರಿಗೆ ನೀರಿಲ್ಲ, ತಮಿಳುನಾಡಿಗೆ ನೀರು ಬಿಡಲು ಡಿಸಿಎಂಗೆ ಸಂತೋಷವಾಗುತ್ತಿದೆ!
ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್‌ನ ಮಲ್ಲಿಕಾರ್ಜುನ್ ಎಂಬುವವರು ನೀಡಿದ ದೂರಿನ ಮೇರೆಗೆ 6 ಸೋಶಿಯಲ್ ಮೀಡಿಯಾ ಗ್ರೂಪ್‌ಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೊಡ್ಡಬಳ್ಳಾಪುರ ಟುಡೇ ನ್ಯೂಸ್, ಕೇಸರಿ ರಾಷ್ಟ್ರ, ವಾರ್ತಾಗುರು ಮತ್ತು ಸಾರ್ವಜನಿಕ ಸಮಸ್ಯೆ ಎಂಬ ನಾಲ್ಕು ಫೇಸ್‌ಬುಕ್ ಗ್ರೂಪ್‌ಗಳು ಹಾಗೂ ಎರಡು ಟೆಲಿಗ್ರಾಮ್ ಗ್ರೂಪ್ಗಳಾದ ಥಗ್ಸ್ ಆಫ್ ದೊಡ್ಡಬಳ್ಳಾಪುರ ಮತ್ತು ಶಿವು ಹಿಂದು ಹುಲಿ_2.0 ಗ್ರೂಪ್‌ಗಳಲ್ಲಿ ವಿಡಿಯೊಗಳನ್ನು ಶೇರ್ ಮಾಡಲಾಗಿತ್ತು.
ಅನ್ಯಕೋಮಿನ 7 ಮಂದಿ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಹಾಗೆಯೇ ಚಾಲಕರ ತಲೆ ಮೇಲೆ ಕಡಿದ ಜಾನುವಾರುಗಳ ತಲೆಯನ್ನು ಇಟ್ಟುಕೊಟ್ಟು ಮೆರವಣಿಗೆ ಮಾಡುವಂತೆ ಹೇಳಿ ಥಳಿಸಿದ್ದಾರೆ. ಈ ಮೂಲಕ ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟುಹಾಕಲು ಯತ್ನಿಸಿದ್ದಾರೆ ಎಂದು ದೂರುದಾರ ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ.