Site icon Vistara News

ಪಂಚಪೀಠಗಳು, ಕೈ, ಕಮಲ ಪಕ್ಷಗಳ ವಿರುದ್ಧ ಅಸಮಾಧಾನದ ವಿಡಿಯೋ ವೈರಲ್; ಸತ್ಯ ಹೇಳಿದ್ದೇನೆ‌ ಎಂದ ವಚನಾನಂದ ಶ್ರೀ

Panchamasali Reservation

ಹೊಸಪೇಟೆ: ಪಂಚಪೀಠಗಳು, ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಅಸಮಾಧಾನದ ವಿಡಿಯೋ ವೈರಲ್ ವಿಚಾರಕ್ಕೆ ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ನಾನು ಸತ್ಯವನ್ನೇ ಹೇಳಿದ್ದೇನೆ. ಹೇಳಿದ್ದರಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ನಮ್ಮ ಭಕ್ತರು ಕೇಳಿದ ಪ್ರಶ್ನೆಗೆ ನಾನು ಉತ್ತರ ಕೊಟ್ಟಿದ್ದೇನೆ. ಇದರಲ್ಲಿ ಯಾವುದೇ ರೀತಿಯ ವಿವಾದ ಇಲ್ಲ ಎಂದು ತಿಳಿಸಿದ್ದಾರೆ.

ಗದಗ ಜಿಲ್ಲೆಯ ಯಳವತ್ತಿ ಗ್ರಾಮದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪಂಚಪೀಠಾಧಿಪತಿಗಳ ವಿರುದ್ಧ ವಚನಾನಂದ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದ ವಿಡಿಯೊ ವೈರಲ್‌ ಆಗಿತ್ತು. ರಾಜ್ಯದಲ್ಲಿ 3-4 ಸಾವಿರ ಮಠಗಳು ಇದ್ದವು. ಎಲ್ಲ ಮಠಗಳ ಶ್ರೀಗಳು ಇದ್ದರು. ಅವರಿಗೆ ದಾನ ಧರ್ಮ ಮಾಡುತ್ತಿದ್ದೆವು. ಅವರೇ ನಮ್ಮ ಗುರುಗಳು ಎಂದು ತಿಳಿದುಕೊಂಡಿದ್ದೆವು. ಹೀಗಿದ್ದ ಮೇಲೆಯೂ ಮತ್ತೆ ಪಂಚಮಸಾಲಿ ಪೀಠ ಮಾಡಬೇಕಿತ್ತು ಎಂಬುದನ್ನು ವಿವರಿಸಿದ್ದ ಅವರು, ಮೀಸಲಾತಿಗಾಗಿಯೇ ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆಯಾಗಿತ್ತು ಎಂದು ವಿಡಿಯೋದಲ್ಲಿ ಹೇಳಿದ್ದರು.

ಇದನ್ನೂ ಓದಿ | Panchamasali Reservation | ಸಾಹುಕಾರ್‌ ಹೆಸರು ತೆಗೆದರೆ ವೇದಿಕೆಗೆ ನುಗ್ಗಿ ಹೊಡೀತೀವಿ: ಯತ್ನಾಳ್‌ಗೆ ಜಾರಕಿಹೊಳಿ ಬೆಂಬಲಿಗರ ಎಚ್ಚರಿಕೆ

2003ರಲ್ಲಿ ವಾಜಪೇಯಿ ಪ್ರಧಾನಿ, ಎಲ್‌.ಕೆ.ಅಡ್ವಾಣಿ ಉಪ ಪ್ರಧಾನಿ ಆಗಿದ್ದರು. ಆ ಸಂದರ್ಭದಲ್ಲಿ ಅವರನ್ನು ಐದು ಜಗದ್ಗುರುಗಳು ಭೇಟಿಯಾಗಿ ಒಂದು ಮನವಿ ಮಾಡಿದ್ದರು. ನಾವು ಬೇಡ ಜಂಗಮರು, ಬೇಡಿಕೊಂಡು ತಿನ್ನುವವರು. ನಮಗೆ ಎಸ್‌ಸಿ ಸರ್ಟಿಫಿಕೇಟ್‌ ಕೊಡಿ ಎಂದು ಕೇಳಿದ್ದರು. ಅದು ಮಾಧ್ಯಮಗಳಲ್ಲಿ ಬಂದಿತ್ತು. ಈ ವಿಚಾರಕ್ಕೆ ಪಂಚಮಸಾಲಿ ಮುಖಂಡರು ಪ್ರತಿಕ್ರಿಯಿಸಿ, ನೀವು ಯಾವ ಆಧಾರದ ಮೇಲೆ ಎಸ್‌ಸಿ ಸರ್ಟಿಫಿಕೆಟ್ ಕೇಳುತ್ತೀರಾ? ನಿಮ್ಮನ್ನು ಗುರುಗಳು ಎಂದು ಪೂಜೆ ಪುನಸ್ಕಾರ ಮಾಡಿ ಆಶೀರ್ವಾದ ಪಡೆದುಕೊಳ್ಳುತ್ತೇವೆ. ಇಂತಹವರು ಹೇಗೆ ಎಸ್‌ಸಿ ಆಗುತ್ತೀರಿ ಎಂದು ಕೇಳಿದ್ದರು.

ದಾನಧರ್ಮ ಮಾಡುವವರು ಪಂಚಮಸಾಲಿಗಳು. ನಿಮ್ಮ ಮಠಕ್ಕೆ ಅಕ್ಕಿ, ಜೋಳ ನೀಡಿ, ಮನೆಯಲ್ಲಿ ಮಾಡಿದ ಮೊದಲ ರೊಟ್ಟಿ ಮಠಕ್ಕೆ ಇಟ್ಟವರು ನಾವು. ನಿಮ್ಮ ಶಿಕ್ಷಣ ಸಂಸ್ಥೆಗಳಿಗೆ ಜಮೀನು ದಾನ ಮಾಡಿದ್ದೇವೆ. ಆದರೆ, ನೀವು ನಿಮ್ಮ ಜಾತಿಗಾಗಿ ಮೀಸಲಾತಿ ಕೇಳಿದ್ದೀರಿ, ಆದರೆ, ಪಂಚಮಸಾಲಿ ಸಮುದಾಯದ ಭಕ್ತರಿಗಾಗಿ ಏನೂ ಕೇಳಿಲ್ಲ ಎಂದು ಪಂಚಮಸಾಲಿ ಭಕ್ತರು, ಪಂಚಪೀಠಗಳ ಜಗದ್ಗುರುಗಳನ್ನು ಪ್ರಶ್ನಿಸಿದ್ದರು.

ನಂತರ ಪಂಚಪೀಠಗಳಲ್ಲಿ ಎರಡು ಪೀಠಗಳನ್ನು ಪಂಚಮಸಾಲಿ ಸಮಾಜಕ್ಕೆ ನೀಡುವಂತೆ ಮನವಿ ಮಾಡಿದ್ದೆವು. ಆದರೆ, ಅದು ಸಾಧ್ಯವಿಲ್ಲ ಎಂದು ಪಂಚ ಪೀಠದ ಜಗದ್ಗುರುಗಳು ಹೇಳಿದ್ದರು. ಹೀಗಾಗಿ ನಾವು ದಾನ ಮಾಡಲು, ಮೆರವಣಿಗೆ ಮಾಡಲು ಬೇಕಾಗುತ್ತದೆ. ಆದರೆ ನಮ್ಮ ಸಮುದಾಯದವರು ಸ್ವಾಮೀಜಿಯಾಗಲು ಯಾಕೆ ಸಾಧ್ಯವಿಲ್ಲ ಎನ್ನುವ ಯೋಚನೆ ಮಾಡಲಾಯಿತು. ಆಗ ನಾವೇ ಒಂದು ಪ್ರತ್ಯೇಕ ಪಂಚಮಸಾಲಿ ಪೀಠವನ್ನು ಸ್ಥಾಪನೆ ಮಾಡಿದ್ದೆವು. ನಂತರ ಮಹಾಂತ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯಾದ್ಯಂತ ಮೀಸಲಾತಿಗಾಗಿ ಪ್ರತಿಭಟನೆಗಳು ನಡೆದಿದ್ದವು.

ಹೋರಾಟಗಳ ಫಲವಾಗಿ ಇದರಿಂದ 2009ರಲ್ಲಿ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಸಾಮಾನ್ಯ ವರ್ಗದಲ್ಲಿದ್ದ ಪಂಚಮಸಾಲಿ ಸಮುದಾಯಕ್ಕೆ ಒಬಿಸಿ 3ಬಿ ಮೀಸಲಾತಿ ಕೊಟ್ಟರು. ಆದರೆ, ಆಗಲೇ ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಬೇಡಿಕೆ ಇತ್ತು. ಮುಂದೆ ಬಂದಂತಹ ಮುಖ್ಯಮಂತ್ರಿಗಳು ಮನವಿ ಸ್ವೀಕರಿಸಿದರೇ ವಿನಃ 2ಎ ಮೀಸಲಾತಿ ನೀಡಲಿಲ್ಲ. ಅದುವರೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಹೈಕಮಾಂಡ್‌, ವೀರಶೈವ ಲಿಂಗಾಯತರು ಎಲ್ಲಾ ಒಂದೇ ಎಂದು ರಾಜ್ಯದಲ್ಲಿ ಅಧಿಕಾರ ಅನುಭವಿಸುತ್ತಿದ್ದರು. ನಂತದ ಹೋರಾಟದ ಪ್ರತಿಫಲವಾಗಿ ರಾಜ್ಯ ಹಿಂದುಳಿದ ವರ್ಗಗಳ ಇಲಾಖೆಯಿಂದ ಪಂಚಮಸಾಲಿ ಸಮಾಜದ ಕುಲಶಾಸ್ತ್ರ ಅಧ್ಯಯನ ನಡೆಯುತ್ತಿದೆ ಎಂದು ವಚನಾನಂದ ಶ್ರೀ ಹೇಳಿರುವುದು ವಿಡಿಯೋದಲ್ಲಿದೆ.

ಇದನ್ನೂ ಓದಿ | Election 2023 | ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಗಿಮಿಕ್‌?: ವರುಣಾ ಖಚಿತ ಎಂದ ಶ್ರೀರಾಮುಲು

Exit mobile version