ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದ ವಿಲೇಜ್ ರೆಸ್ಟೋರೆಂಟ್‌ನಲ್ಲಿ ನವೆಂಬರ್ ೨೦ರಂದು ತಡರಾತ್ರಿ ಅವಧಿ ಮೀರಿದ ಹಿನ್ನೆಲೆಯಲ್ಲಿ ಊಟ ಕೊಡಲು ನಿರಾಕರಿಸಿದರು ಎಂಬ ಕಾರಣಕ್ಕೆ ೨೦ ಮಂದಿ ಯುವಕರ ಗುಂಪು ದಾಂಧಲೆ ನಡೆಸಿದ್ದ ಪ್ರಕರಣದಲ್ಲಿ ಬಿಜೆಪಿ ಮುಖಂಡರೊಬ್ಬರ ಪುತ್ರ ಪ್ರಮುಖ ಆರೋಪಿ ಎಂಬುದು ಬೆಳಕಿಗೆ ಬಂದಿದೆ. ಈ ದಾಂಧಲೆ ವಿಡಿಯೊ ವೈರಲ್ (Video Viral) ಆಗಿದೆ. ಅಲ್ಲದೆ, ಪ್ರಕರಣ ನಡೆದು ಎಫ್‌ಐಆರ್ ದಾಖಲಾಗಿ ೧೦ ದಿನವಾದರೂ ಆರೋಪಿಗಳ ಬಂಧನವಾಗದಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ನವೆಂಬರ್ ೨೦ರ ರಾತ್ರಿ ೧೧.೩೦ರ ಸುಮಾರಿಗೆ ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ. ರಾಮಚಂದ್ರ ಅವರ ಪುತ್ರ ಧನುಷ್ ಮತ್ತವರ ತಂಡವು ಹುಟ್ಟುಹಬ್ಬದ ಪಾರ್ಟಿ ಮುಗಿಸಿ ವಿಲೇಜ್ ರೆಸ್ಟೋರೆಂಟ್‌ಗೆ ಬಂದಿದೆ. ಈ ವೇಳೆ ಊಟವನ್ನು ಕೇಳಿದ್ದಾರೆ. ಆದರೆ, ಅದಾಗಲೇ ರೆಸ್ಟೋರೆಂಟ್ ಅವಧಿ ಮುಕ್ತಾಯಗೊಂಡಿದ್ದು, ಅಡುಗೆ ಖಾಲಿಯಾಗಿದೆ ಎಂದು ಸೇವೆ ನೀಡಲು ರೆಸ್ಟೋರೆಂಟ್ ಸಿಬ್ಬಂದಿ ನಿರಾಕರಿಸಿದ್ದಾರೆ.
ಅದಾಗಲೇ ಪಾನಮತ್ತರಾಗಿದ್ದ ಧನುಷ್ ಮತ್ತವನ ತಂಡದವರು ಗಲಾಟೆ ಪ್ರಾರಂಭಿಸಿದ್ದಾರೆ. ತಮಗೆ ಊಟವನ್ನು ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ರೆಸ್ಟೋರೆಂಟ್ ಸಿಬ್ಬಂದಿ ಸಮಯದ ಕಾರಣ ನೀಡಿ ಸೇವೆ ನೀಡಲು ನಿರಾಕರಣೆ ಮಾಡಿದ್ದು, ಈ ವೇಳೆ ಮಾತಿನ ಚಕಮಕಿ ನಡೆದಿದೆ. ಆಗ ಧನುಷ್ ಟೀಂ ಏಕಾಏಕಿ ಸಿಬ್ಬಂದಿ ಮೇಲೆ ದಾಳಿ ನಡೆಸಿ ಹಿಗ್ಗಾಮುಗ್ಗ ಥಳಿಸಿದೆ. ಬಿಡಿಸಲು ಬಂದ ಸಿಬ್ಬಂದಿ ಮೇಲೂ ದಾಳಿ ಮಾಡಿದ್ದು, ೧೦ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗಳಾಗಿತ್ತು. ಅಲ್ಲಿದ್ದ ಮಹಿಳಾ ಸಿಬ್ಬಂದಿ ಮೇಲೆಯೂ ದಾಳಿ ನಡೆಸಿದ್ದಾರೆನ್ನಲಾಗಿದ್ದು, ಎಲ್ಲ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ.
ದೂರು ನೀಡಿದ ರೆಸ್ಟೋರೆಂಟ್
ಪುಂಡರ ದಾಂಧಲೆ ಬಗ್ಗೆ ವಿಲೇಜ್ ರೆಸ್ಟೋರೆಂಟ್‌ನ ಇಮ್ರಾನ್ ಖಾನ್ ಎಂಬುವವರು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿ 10 ದಿನಗಳು ಕಳೆದರೂ ಆರೋಪಿಗಳನ್ನು ಬಂಧಿಸಲಾಗಿಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ರೆಸ್ಟೋರೆಂಟ್‌ಗೆ ಭದ್ರತೆಯನ್ನು ನಿಯೋಜಿಸಿದ್ದು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಈಗ ದಾಳಿ ವಿಡಿಯೊ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ | Bilkis Bano Case | 11 ರೇಪಿಸ್ಟ್‌ಗಳ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಸಂತ್ರಸ್ತೆ ಬಿಲ್ಕಿಸ್ ಬಾನೊ