ಚಾಮರಾಜನಗರ: ಬಿಳಿಗಿರಿ ರಂಗನ ಬೆಟ್ಟದ ಕೆ.ಗುಡಿ ವಲಯದಲ್ಲಿ ವಿಚಾರವಾದಿ ಕೆ.ಎಸ್. ಭಗವಾನ್ (Rationalist KS Bhagavan) ಸಫಾರಿಯಲ್ಲಿ ತೊಡಗಿದ್ದರು. ಜೀಪ್‌ನಲ್ಲಿ ಚಾಲಕನ ಪಕ್ಕದಲ್ಲೇ ಕುಳಿತು ಪರಿಸರವನ್ನು ಹತ್ತಿರದಿಂದ ನೋಡಿ ಖುಷಿ ಪಡುತ್ತಿದ್ದರು. ಹೀಗೆ ನೋಡ ನೋಡುತ್ತಿದ್ದಂತೆ ಮುಂದೆ ಸ್ವಲ್ಪ ದೂರದಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿದೆ. ಅದರಲ್ಲಿ ಒಂದು ಆನೆಗೆ ಅದೇನನ್ನಿಸಿತೋ ಏನೋ? ದಿಢೀರನೆ ಜೀಪ್ ಕಡೆ ತಿರುಗಿದೆ. ತಿರುಗಿ ನೋಡಿದ್ದೇ ವೇಗವಾಗಿ ಇವರತ್ತ ಓಡೋಡಿ ಬರಲು ಶುರು ಮಾಡಿದೆ. ಜೀಪಲ್ಲಿ ಕುಳಿತಿದ್ದ ಭಗವಾನ್ ಸೇರಿದಂತೆ ಎಲ್ಲರೂ ಜೀವ ಕೈಯಲ್ಲಿ ಹಿಡಿದು ಕುಳಿತುಕೊಂಡರು. ಆದರೆ, ಚಾಲಕನ ಸಮಯ ಪ್ರಜ್ಞೆಯಿಂದ ಎಲ್ಲರೂ ಬಚಾವ್ ಆಗಿದ್ದಾರೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ (Video Viral) ಆಗಿದೆ.
ಏನಿದು ಆನೆ ದಾಳಿ?
ಸಹಜವಾಗಿಯೇ ಆನೆ ಸಫಾರಿಯಲ್ಲಿ ಕೆ.ಎಸ್. ಭಗವಾನ್ ಸೇರಿದಂತೆ ಇನ್ನಿತರರು ಜೀಪ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಹಿಂಬದಿ ಸೀಟ್‌ನಲ್ಲಿದ್ದ ಒಬ್ಬರು ವಿಡಿಯೊ ಮಾಡಿಕೊಳ್ಳುತ್ತಿದ್ದರು. ಪ್ರಕೃತಿಯ ಸೊಬಗನ್ನು ವಿಡಿಯೊ ಮೂಲಕ ಸೆರೆ ಹಿಡಿಯುತ್ತಿದ್ದರು. ಹೀಗೆಯೇ ಮುಂದೆ ಸಾಗುತ್ತಿದ್ದಾಗ ಅವರಿಗೆ ರಸ್ತೆಯ ಮುಂದೆ ಅನತಿ ದೂರದಲ್ಲಿ ಆನೆಗಳ ಹಿಂಡು ಕಂಡಿದೆ. ಈ ವೇಳೆ ಜೀಪ್ ಚಾಲಕ ಸಹ ವೇಗವನ್ನು ನಿಧಾನ ಮಾಡಿದ್ದಾನೆ. ಆನೆಗಳ ಹಿಂಡನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಾ ಇರುವಾಗಲೇ ಆನೆಯೊಂದು ಇವರತ್ತ ಓಡಲು ಬರಲಾರಂಭಿಸಿದೆ.
ಇದನ್ನೂ ಓದಿ: Weather Report: ಉತ್ತರ ಕನ್ನಡದಲ್ಲಿ ಮಳೆ ಅಬ್ಬರ, ಇರಲಿ ಎಚ್ಚರ; ಮೀನುಗಾರರಿಗೆ ಕಟ್ಟೆಚ್ಚರ
ಆನೆ ತಮ್ಮತ್ತ ಬರುತ್ತಿದ್ದಂತೆ ಎಲ್ಲರಿಗೂ ಭೀತಿ ಹೆಚ್ಚಾಗಿದೆ. ಅಯ್ಯೋ ದೇವರೇ ಇನ್ನೇನು ಕಥೆ? ಆನೆಗಳ ಹಿಂಡೆಲ್ಲವೂ ಒಟ್ಟಾದರೆ ಜೀವ ಉಳಿಸಿಕೊಳ್ಳುವುದು ಹೇಗೆ? ಎಂಬೆಲ್ಲ ಯೋಚನೆಗಳು ಒಂದು ಸಾರಿ ಬಂದು ಹೋಗಿದೆ. ಆದರೆ, ಆನೆ ಇತ್ತ ಬರುತ್ತಿದ್ದಂತೆ ಚಾಲಕ ಸಮಯಪ್ರಜ್ಞೆ ಮೆರೆದಿದ್ದಾನೆ.
ತಕ್ಷಣವೇ ರಿವರ್ಸ್ ತೆಗೆದುಕೊಂಡ ಚಾಲಕ
ಆನೆ ವೇಗವಾಗಿ ಓಡಿ ಬರುತ್ತಿರುವುದನ್ನು ಕಂಡ ಸಫಾರಿ ಜೀಪ್ ಚಾಲಕ ಕೂಡಲೇ ಜೀಪ್ ಅನ್ನು ರಿವರ್ಸ್ ತೆಗೆದುಕೊಂಡಿದ್ದಾನೆ. ಬಂದ ದಾರಿಯಲ್ಲಿ ಅಷ್ಟೇ ವೇಗವಾಗಿ ಹಿಮ್ಮುಖವಾಗಿ ಚಲಾಯಿಸಿದ್ದಾನೆ. ಹಾಗೆ ಒಂದು ನೂರು, ನೂರೈವತ್ತು ಮೀಟರ್ ಹಿಮ್ಮುಖವಾಗಿ ವೇಗವಾಗಿ ಚಲಾಯಿಸುತ್ತಿದ್ದಂತೆ ಆನೆ ಸಹ ತನ್ನ ವೇಗವನ್ನು ಕಡಿಮೆ ಮಾಡಿ ಕೊನೆಗೆ ಒಂದು ಕಡೆ ನಿಂತುಕೊಂಡಿದೆ. ಎಲ್ಲರೂ ಬದುಕಿದೆಯಾ ಬಡ ಜೀವವೇ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಚಾಲಕನ ಸಮಯಪ್ರಜ್ಞೆಗೆ ಕೋಟಿ ಕೋಟಿ ಥ್ಯಾಂಕ್ಸ್ ಹೇಳಿದ್ದಾರೆ.
ಮರಿಗಳಿದ್ದಿದ್ದರಿಂದ ದಾಳಿಗೆ ಮುಂದಾಯಿತೇ?
ಆನೆಗಳ ಹಿಂಡು ರಸ್ತೆಯಲ್ಲಿದ್ದಾಗ ಏಕಾಏಕಿ ವಾಹವನ್ನು ನೋಡಿ ಆನೆಯು ಗಾಬರಿಯಾಗಲು ಕಾರಣವೂ ಇದೆ ಎನ್ನಲಾಗಿದೆ. ಕಾರಣ ಆ ಹಿಂಡಿನಲ್ಲಿ ಮರೆ ಆನೆಗಳೂ ಇದ್ದವು. ಅವುಗಳಿಗೆ ಅಪಾಯವಾದರೆ ಎಂಬ ಆತಂಕದಿಂದ ಈ ಆನೆಯು ದಾಳಿ ಮಾಡಿರಬಹುದು ಎಂದು ಊಹಿಸಲಾಗಿದೆ. ಅಲ್ಲದೆ, ಇಂಥ ಹಲವಾರು ಸಂದರ್ಭಗಳಲ್ಲಿ ಕಾಡು ಪ್ರಾಣಿಗಳು ತಮ್ಮ ರಕ್ಷಣೆಗಾಗಿ ದಾಳಿ ಮಾಡುತ್ತವೆ ಎಂದು ಪರಿಸರ ತಜ್ಞರು ಸಹ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಟ್ರೀಟ್ಮೆಂಟ್ ತಗೊಳ್ಳೋದಾದ್ರೆ ತಗೊಳ್ಳಿ; ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರನೇ ಡಾಕ್ಟರ್!
ನನಗೆ ಭಯ ಆಗಲಿಲ್ಲ: ಕೆ.ಎಸ್. ಭಗವಾನ್
ಸಫಾರಿ ವೇಳೆ ಆನೆ ಅಟ್ಟಾಡಿಸಿಕೊಂಡು ಬಂದಿದ್ದು ನಿಜ. ನನ್ನ ಜತೆ ಅರಣ್ಯ ಸಿಬ್ಬಂದಿ ಇದ್ದರು. ನನ್ನ ಸ್ನೇಹಿತರು ಕೂಡ ಇದ್ದರು. ಅರಣ್ಯ ಸಿಬ್ಬಂದಿಗೆ ಇಂತಹ ಘಟನೆಗಳು ಸಾಮಾನ್ಯ. ಆದ್ದರಿಂದ ನನಗೂ ಭಯವಾಗಲಿಲ್ಲ. ಇನ್ನು ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟದಲ್ಲಿ ಸಫಾರಿ ಮಾಡುವುದು ನನಗೆ ಇಷ್ಟ. ಇಲ್ಲಿನ ಕಾಡು ಸುಂದರವಾಗಿದೆ. ದಟ್ಟ ಅರಣ್ಯ ಖುಷಿಕೊಡುತ್ತದೆ. ಆದ್ದರಿಂದ ಇಲ್ಲಿ ಕಾಡು ಸುತ್ತಾಡಲು ನನಗೆ ಇಷ್ಟ ಎಂದು ಕೆ.ಎಸ್. ಭಗವಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್
ಈ ಆನೆ ದಾಳಿಯ ವಿಡಿಯೊ ಈಗ ವಾಟ್ಸಪ್ ಸಹಿತ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಎಲ್ಲರೂ ಸಹ ಚಾಲಕನ ಸಮಯಪ್ರಜ್ಞೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.