Site icon Vistara News

Video Viral: ಮನೆಯಾಕೆ ಅಡುಗೆ ಡಬ್ಬಿಗೆ ಕೈ ಇಟ್ಟಳು; ಹಿಂದಿದ್ದ ನಾಗಪ್ಪ ಬುಸ್‌ ಅಂದುಬಿಟ್ಟ!

Video Viral Snake in the kitchen Woman saved

ಗದಗ: ಇದೊಂದು ಬೆಳ್ಳಂಬೆಳ್ಳಗೆ ಮನೆಯೊಡತಿಗೆ ಬೆವರಿಳಿಸಿದ ಘಟನೆ. ಮನೆಯೊಡತಿ ಎಂದಿನಂತೆ ಎದ್ದವರು ಮನೆಯ ಸಣ್ಣಪುಟ್ಟ ಕೆಲಸಗಳನ್ನು ಮುಗಿಸಿಕೊಂಡು ಅವಸರವಸರವಾಗಿ ಅಡುಗೆ ಮನೆಯತ್ತ ಕಾಲಿಟ್ಟಿದ್ದಾರೆ. ಅಡುಗೆ ಮನೆಗೆ ಬರುವಾಗಲೇ ನೂರೆಂಟು ಯೋಚನೆ! ಇಂದು ಏನು ತಿಂಡಿ ಮಾಡುವುದು? ಗಂಡನಿಗೆ, ಮಕ್ಕಳಿಗೆ, ಮಾವ, ಅತ್ತೆಗೆ ಎಲ್ಲರಿಗೂ ಹಿಡಿಸುವಂತಹ ತಿಂಡಿ ಮಾಡಬೇಕು. ಎಲ್ಲವೂ ಬೇಗ ಬೇಗ ಆಗಬೇಕು ಎಂಬ ಗಡಿಬಿಡಿಯಲ್ಲೇ ಅಲ್ಲಿರುವ ಅಡುಗೆ ಸಾಮಗ್ರಿಗಳ ಡಬ್ಬಿಗೆ ಕೈ ಇಟ್ಟುಬಿಟ್ಟರು. ಅದೇನಾಯಿತೋ ಏನೋ ಒಮ್ಮೆಲೆ ಕೈಯನ್ನು ಹಿಂದೆ ತೆಗೆದುಕೊಂಡು ಬಿಟ್ಟರು. ಕಾರಣ, ಆ ಡಬ್ಬಿಯ ಹಿಂದಿನಿಂದ ಬುಸ್‌.. ಬುಸ್‌ ಎಂಬ ಶಬ್ದ ಕೇಳಿ ಬಂತು. ಮೈ ನಡುಗಿ ಹೋಯಿತು! ಪೂರಾ ಬೆವರಿಳಿದು ಹೋಯಿತು! ಈ ವಿಡಿಯೊ ಈಗ ವೈರಲ್‌ (Video Viral) ಆಗಿದೆ.

ಅಬ್ಬಾ… ಆ ಒಂದು ಕ್ಷಣ ದಿಕ್ಕೇ ತೋಚದಂತೆ ಆಗಿತ್ತು. ಏನಾಗಿದೆ? ಏನಾಗುತ್ತಿದೆ? ತಾನೆಲ್ಲಿದ್ದೇನೆಂಬುದೂ ಸಹ ತಿಳಿಯದ “ಬ್ಲಾಂಕ್‌” ಎನ್ನಿಸುವಂತಹ ಸ್ಥಿತಿ ಆ ಮಹಿಳೆಯದ್ದಾಗಿತ್ತು. ಕಾರಣ, ಆ ಡಬ್ಬಿಯ ಹಿಂದೆ ಇದ್ದಿದ್ದು ನಾಗರಹಾವು! ಒಂದು ಸ್ವಲ್ಪ ಹೆಚ್ಚು ಕಡಿಮೆಯಾಗಿ ಅದೇನಾದರೂ ಕಚ್ಚಿಬಿಟ್ಟಿದ್ದರೆ? ಅರೆ, ನನ್ನ ಪ್ರಾಣವೇ ಹೋಗಿಬಿಡುತ್ತಿತ್ತು. ಅಯ್ಯೋ.. ಏನಾಗಿ ಬಿಡುತ್ತಿತ್ತು? ಎಂದೆಲ್ಲ ಯೋಚಿಸುತ್ತಲೇ ಮನೆಯ ಜಗಲಿಗೆ ಓಡಿ ಬಂದರು. ಜಗಲಿಗೆ ಬಂದವರೇ ಮನೆಯವರನ್ನೆಲ್ಲ ಕರೆದು ವಿಷಯ ಮುಟ್ಟಿಸಿದರು.

ಅಡುಗೆ ಮನೆಯ ಡಬ್ಬಿಯ ಹಿಂದೆ ಇರುವ ನಾಗರಹಾವು

ಇದನ್ನೂ ಓದಿ: Siddaramaiah: ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಎಂದ ಸಚಿವ ವೆಂಕಟೇಶ್;‌ ಮುಗಿಯದ ಕೈ ಕಿತ್ತಾಟ!

ಗದಗ ಜಿಲ್ಲೆ ನರಗುಂದ ತಾಲೂಕಿನ ಜಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಹನುಮಂತ ಗುಂಡಳ್ಳಿ ಅವರ ನಿವಾಸದಲ್ಲಿ ಹಾವು ಪ್ರವೇಶ ಮಾಡಿ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿತ್ತು. ಮನೆಯವರೆಲ್ಲರೂ ಸೀದಾ ಅಡುಗೆ ಮನೆಗೆ ಹೋಗಿ ನೋಡಿದ್ದಾರೆ. ಅಲ್ಲಿ ಡಬ್ಬಿಯ ಹಿಂದುಗಡೆ ಹಾವೊಂದು ಅವಿತು ಕುಳಿತಿರುವುದು ಕಂಡಿದೆ. ಒಮ್ಮೆಲೆ ಅವರ ಮೈ ಸಹ ಝಲ್‌ ಎಂದಿದೆ. ಮನೆಯೊಳಗೆ ಎಲ್ಲರೂ ಇದ್ದೇವೆ. ಏನಾದರೂ ಹಾವು ಈಗ ಮನೆಯೊಳಗೆ ಎಲ್ಲೆಂದರಲ್ಲಿ ಹೋಗಿ ಅವಿತು ಕುಳಿತು ಬಿಟ್ಟರೆ? ಮನೆಯೊಳಗೆ ಇರುವುದಾದರೂ ಹೇಗೆ? ಎಂಬೆಲ್ಲ ಯೋಚನೆಗಳು ಬಂದು ಭಯಗೊಂಡಿದ್ದಾರೆ.

ಮನೆಯ ಹೊರಗೆ ಹಾವನ್ನು ತಂದು ರಕ್ಷಣೆಯಲ್ಲಿ ತೊಡಗಿರುವ ಬಿ.ಆರ್.‌ ಸುರೇಬಾನ

ತಕ್ಷಣವೇ ಉರಗ ರಕ್ಷಕ ಬಿ.ಆರ್. ಸುರೇಬಾನ ಅವರ ನೆನಪಾಗಿದೆ. ಕೂಡಲೇ ಅವರಿಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ. ಸುರೇಬಾನ ಅವರು ಬರುವವರೆಗೂ ಮನೆಯವರಿಗೆ ಆತಂಕ ಸ್ವಲ್ಪವೂ ಕಡಿಮೆಯಾಗಿರಲಿಲ್ಲ. ಭಯದಲ್ಲೇ ಆಗಾಗ ಇಣುಕಿ, ಇಣುಕಿ ಆ ಹಾವು ಇನ್ನೂ ಅಲ್ಲೇ ಇದೆಯೇ? ಎಂಬುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದರು.

ಇದನ್ನೂ ಓದಿ: Video Viral: ಇದು ನಾರಿ ಶಕ್ತಿಯ ಸೈಡ್‌ ಎಫೆಕ್ಟ್; ‌ಸೀಟ್‌ಗಾಗಿ ಬಸ್ಸಿನಲ್ಲೇ ಬಡಿದಾಡಿಕೊಂಡ ನಾರಿಯರು!

ಹಾವನ್ನು ರಕ್ಷಣೆ ಮಾಡಿದ ಸುರೇಬಾನ

ಕೊನೆಗೂ ಆಯಿತು ಹಾವಿನ ರಕ್ಷಣೆ

ಸ್ವಲ್ಪ ಹೊತ್ತಿನಲ್ಲೇ ಮನೆಗೆ ಬಂದ ಸುರೇಬಾನ ಅವರು ನಾಲ್ಕು ಅಡಿಯಷ್ಟು ಉದ್ದದ ಹಾವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಹಾವುಗಳನ್ನು ಸೆರೆ ಹಿಡಿದು ಸುರಕ್ಷಿತವಾಗಿ ಬಿಡುವುದರಲ್ಲಿ ಸುರೇಬಾನ್ ಅವರು ಈ‌ ಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸತತ ಆರು ವರ್ಷಗಳಿಂದ ಅವರು ಹಾವುಗಳನ್ನು ರಕ್ಷಿಸುತ್ತಾ ಬಂದಿದ್ದು, ಸಾವಿರಾರು ಹಾವುಗಳನ್ನು ಸೆರೆ ಹಿಡಿದು, ಅಪಾಯಗಳನ್ನು ತಪ್ಪಿಸಿದ್ದಾರೆ. ಅವರಿಗೆ ಮನೆಯವರು ಕೃತಜ್ಞತೆ ಸಲ್ಲಿಸಿದ್ದಾರೆ. ಮನೆಯ ಹಿತ್ತಲ ಬಾಗಿಲ ಮೂಲಕ‌ ನಾಗರಹಾವು ಬಂದಿರಬಹುದು ಎಂದು ಶಂಕಿಸಲಾಗಿದೆ.

Exit mobile version