Site icon Vistara News

Video Viral: ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮೇಲೆ ನಿಂತು ಆಜಾನ್‌ ಕೂಗಿದ ಯುವಕ; ಎಚ್‌ಡಿಕೆ ಹೇಳಿದ್ದೇನು?

Video Viral Youth stands atop Shivamogga DEPUTY COMMISSIONER office shouts azaan What did HDK say

ಶಿವಮೊಗ್ಗ: ಜಿಲ್ಲಾಧಿಕಾರಿ ಕಚೇರಿ ಮೇಲೆ ನಿಂತು ಯುವಕನೊಬ್ಬ ಆಜಾನ್ ಕೂಗಿ ಉದ್ದಟತನವನ್ನು ಪ್ರದರ್ಶನ ಮಾಡಿದ್ದಾನೆ. ಇದಕ್ಕೆ ಪೊಲೀಸರು ಬೆದರಿಸಿದ್ದಕ್ಕೆ ಸಮುದಾಯದವರು ಸೇರಿ ಗಲಾಟೆ ಮಾಡಿದ್ದಾರೆ. ಮೂರು ದಿನಗಳ ಬಳಿಕ ಆಜಾನ್‌ ಕೂಗಿದ ವಿಡಿಯೊ ವೈರಲ್‌ (Video Viral) ಆಗಿದೆ.

ಸ್ಥಳೀಯರ ಮೊಬೈಲ್‌ನಲ್ಲಿ ಆಜಾನ್ ಕೂಗಿದ ದೃಶ್ಯ ಸೆರೆಯಾಗಿದೆ. ಆಜಾನ್ ಹಾಗೂ ಅಲ್ಲಾಹು ಬಗ್ಗೆ ಮಾಜಿ‌ ಸಚಿವ ಈಶ್ವರಪ್ಪ ಅವಹೇಳನ ಮಾಡಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಮುಸ್ಲಿಂ ಸಮುದಾಯದವರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ಹೊರಹಾಕಿದ್ದರು.

ಇದನ್ನೂ ಓದಿ: Rajasthan PFI case: ನಿಷೇಧಿತ ಪಿಎಫ್​ಐ ಸಂಘಟನೆಯ ಇಬ್ಬರ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ ಎನ್​ಐಎ

ಪ್ರತಿಭಟನೆ ವೇಳೆ ಮುಸ್ಲಿಂ ಸಮುದಾಯದ ಯುವಕ ಮೌಸಿನ್ ಆಜಾನ್ ಕೂಗಿ ಉದ್ಧಟತನ ಪ್ರದರ್ಶನ ಮಾಡಿದ್ದಾನೆ. ಜಿಲ್ಲಾಧಿಕಾರಿ ಕಚೇರಿ ಮೇಲೆ ಹತ್ತಿ ಆಜಾನ್ ಕೂಗಿದ್ದಾನೆ. ಆಜಾನ್ ಕೂಗುವುದನ್ನು ಕಂಡ ಪೊಲೀಸರು ಬೆದರಿಸಿದ್ದರು. ಈ ವೇಳೆ ಪೊಲೀಸರು, ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿತ್ತು.

ಆಜಾನ್ ಬಗ್ಗೆ ಮಾತನಾಡುವುದಕ್ಕೆ ಈಶ್ವರಪ್ಪ ಯಾರು? ಇವತ್ತು ಇಲ್ಲಿ ಕೂಗಿದ್ದೇವೆ, ನಾಳೆ ವಿಧಾನಸೌಧದಲ್ಲಿ ಕೂಗುತ್ತೇವೆ. ಇದು ತಾಯಿ ಬಗ್ಗೆ ಮಾತನಾಡಿದ್ದಲ್ಲ, ಅಲ್ಲಾ ಬಗ್ಗೆ ಮಾತನಾಡಿದ್ದು ಎಂದು ಕೂಗಾಡಲಾಗಿದೆ.

ಯುವಕ ಈ ಕೃತ್ಯಕ್ಕೆ ಹಿಂದು ಪರ ಸಂಘಟನೆಗಳು ಸೇರಿದಂತೆ ನಾಗರಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಕಟ್ಟಡಕ್ಕೆ ಅದರದ್ದೇ ಆದ ಘನತೆ ಇರುತ್ತದೆ. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇರುತ್ತದೆ. ಆದರೆ, ಇಂತಹ ಉದ್ದಟತನವನ್ನು ಯಾರೂ ಪ್ರದರ್ಶನ ಮಾಡಬಾರದು. ಅವರೇ ಹೇಳಿದಂತೆ ನಾಳೆ ವಿಧಾನಸೌಧದಲ್ಲೂ ಕೂಗಲು ಮುಂದಾಗುತ್ತಾರೆ. ಇಂಥ ಕೃತ್ಯಗಳಿಗೆ ಮೊದಲ ಹಂತದಲ್ಲಿಯೇ ಕಡಿವಾಣ ಹಾಕಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಯುವಕನನ್ನು ಕರೆದು ಎಚ್ಚರಿಕೆ

ಅಜಾನ್​ ಕೂಗಿದ ಯುವಕನನ್ನು ಕರೆದು ಎಚ್ಚರಿಕೆ ನೀಡಲಾಗಿದೆ. ಈ ಸಂಬಂಧ ಕೇಸ್​ವೊಂದನ್ನು ದಾಖಲಿಸಲಾಗಿದೆ ಎಂದು ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದಾರೆ.

ಈ ರೀತಿಯಾಗಲು ಬಿಜೆಪಿಯೇ ಕಾರಣ- ಎಚ್‌ಡಿಕೆ

ಮಂಡ್ಯ: ಇಂತಹ ವಿಚಾರ ಸೂಕ್ಷ್ಮ ವಿಚಾರಗಳು ಇಂದು ರಾಜ್ಯದಲ್ಲಿ ನಡೆಯಲು ಬಿಜೆಪಿ ಕಾರಣವಾಗಿದೆ. ಬಿಜೆಪಿ ನಾಯಕರು ಅನಾವಶ್ಯಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಧರ್ಮದಲ್ಲಿ ಕೆಲವು ಕಿಡಿಗೇಡಿಗಳು ಯುವಕರು ಸಹ ಇರುತ್ತಾರೆ. ಹೀಗಾಗಿ ಮಾತನಾಡುವಾಗ ಎಚ್ಚರಿಕೆ ಇರಬೇಕು. ಈಶ್ವರಪ್ಪ ಆಗಲಿ, ಬಿಜೆಪಿಯ ಇನ್ಯಾವನದ್ದೋ ಹೇಳಿಕೆಯಾಗಲಿ, ಇದು ಸರಿಯಲ್ಲ. ಬಿಜೆಪಿಯವರು ಸ್ವಲ್ಪ ಹದ್ದುಬಸ್ತಿನಲ್ಲಿರಬೇಕು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮೇಲೆ ಆಜಾನ್ ಕೂಗಿದ ವಿಚಾರದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡ್ಯದ ಮಾಚಹಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: Road Accident: ಟೋಲ್‌ ತಪ್ಪಿಸಲು ಹೋಗಿ ಬೈಕ್‌ಗೆ ಗುದ್ದಿದ ಕೆಎಸ್‌ಆರ್‌ಟಿಸಿ ಬಸ್‌; ಒಬ್ಬ ಸಾವು, ಮತ್ತೊಬ್ಬ ಗಂಭೀರ

ಇಂದು ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟವಾಗಿರಬೇಕು. ಇಲ್ಲಿ ಈ ರೀತಿಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಹೇಗೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕೆಂದು ಗೊತ್ತಿದೆ- ಸಿ.ಟಿ. ರವಿ

ಚಿಕ್ಕಮಗಳೂರು: ಶಿವಮೊಗ್ಗ ಡಿಸಿ ಕಚೇರಿಯ ಮೇಲೆ ಆಜಾನ್ ಕೂಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿ, ಅವರ ಮಾನಸಿಕತೆ ಬಗ್ಗೆ ಇದರಿಂದಲೇ ಗೊತ್ತಾಗುತ್ತದೆ. ವಿಧಾನಸೌಧದಲ್ಲಿ ಕೂಗುತ್ತೇವೆ ಎನ್ನುವ ಉದ್ದಟತನ ಸರಿಯಲ್ಲ. ಜಿನ್ನಾ ಮಾನಸಿಕತೆ, ಬಿನ್ ಲಾಡನ್ ಮಾನಸಿಕತೆಗಿಂತ ಭಿನ್ನವಾದದ್ದೇನೂ ಅಲ್ಲ. ಆ ಮಾನಸಿಕತೆಯನ್ನು ಹೇಗೆ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು ಎಂದು ಗೊತ್ತಿದೆ ಎಂದು ಹೇಳಿದ್ದಾರೆ.

Exit mobile version