ಬೆಂಗಳೂರು/ಬೆಳಗಾವಿ/ಮೈಸೂರು: ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಬುಧವಾರ (ಜೂನ್ 15) ಪ್ರಕಟವಾಗುತ್ತಿದೆ.
ವಾಯುವ್ಯ ಪದವೀಧರ, ವಾಯುವ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಪದವೀಧರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಬಿಜೆಪಿ, ಕಾಂಗ್ರೆಸ್, ಜಾ.ದಳ ಸೇರಿದಂತೆ ನಾನಾ ಪಕ್ಷಗಳ 49 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಪಶ್ಚಿಮ ಶಿಕ್ಷಕರ, ವಾಯುವ್ಯ ಪದವೀಧರ, ಶಿಕ್ಷಕರ ಚುನಾವಣೆ
ಪಶ್ಚಿಮ ಶಿಕ್ಷಕರ, ವಾಯುವ್ಯ ಪದವೀಧರ, ಶಿಕ್ಷಕರ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಲಿದೆ. ಬೆಳಗಾವಿಯ ಕ್ಲಬ್ ರಸ್ತೆಯ ಜ್ಯೋತಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ.
ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಪ್ರಕ್ರಿಯೆ ಶುರುವಾಗುತ್ತಿದೆ. ಪ್ರತಿ ಕ್ಷೇತ್ರದ ಮತ ಎಣಿಕೆಗೆ ಒಟ್ಟು 11 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆಗಾಗಿ ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ.
ಮತ ಎಣಿಕೆ ಕೇಂದ್ರದ ಸುತ್ತ ಮುಂಜಾಗ್ರತಾ ಕ್ರಮವಾಗಿ ನಿಷೇದಾಜ್ಞೆ ಜಾರಿಯಾಗಿದೆ. ಬೆಳಗ್ಗೆ ಮೊದಲು ಸಿಂಧು- ಅಸಿಂಧು ಮತಗಳ ಬೇರ್ಪಡಿಕೆ ಕಾರ್ಯ ನಡೆಯಲಿದೆ. ವಾಯುವ್ಯ ಪದವೀಧರ ಕ್ಷೇತ್ರದಲ್ಲಿ 99,598 ಮತದಾರರ ಪೈಕಿ 65,914 ಮತ ಚಲಾವಣೆಯಾಗಿದೆ. ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಶೇಕಡ 66.18ರಷ್ಟು ಮತದಾನವಾಗಿತ್ತು.
ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 25,386 ಮತದಾರರ ಪೈಕಿ 21,401 ಮತ ಚಲಾವಣೆ ಆಗಿತ್ತು. ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ 84.30%ರಷ್ಟು ಮತದಾನವಾಗಿತ್ತು. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 17,973 ಮತದಾರರ ಪೈಕಿ 15,577 ಮತ ಚಲಾವಣೆಯಾಗಿತ್ತು. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶೇಕಡ- 86.67%ರಷ್ಟು ಮತದಾನವಾಗಿತ್ತು.
ವಾಯುವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಕಾಂಗ್ರೆಸ್ – ಬಿಜೆಪಿ ಮಧ್ಯೆ ನೇರಾನೇರ ಹಣಾಹಣಿ ನಡೆದಿತ್ತು. ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಮಧ್ಯೆ ಪೈಪೋಟಿ ಇತ್ತು.
ಕಳೆದ ಬಾರಿಗಿಂತ ಈ ಬಾರಿ ದಾಖಲೆ ಪ್ರಮಾಣದಲ್ಲಿ ಮತದಾನ ಆಗಿತ್ತು. ಒಟ್ಟು 84.10ರಷ್ಟು ಮತದಾನವಾಗಿತ್ತು. ಉಭಯ ರಾಷ್ಟ್ರೀಯ ಪಕ್ಷಗಳಿಗೂ ಮತ ವಿಭಜನೆಯ ಆತಂಕ ಇದೆ.
ಕಾಂಗ್ರೆಸ್‌ನಿಂದ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ ಎನ್.ಬಿ.ಬನ್ನೂರು ಸ್ಪರ್ಧಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರ ಲೋಣಿಯಿಂದ ಮತ ವಿಭಜನೆ ಆತಂಕ ಇದೆ.
ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಎಂಎಲ್‌ಸಿ ಹನುಮಂತ ನಿರಾಣಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಸಂಕ್ ಮಧ್ಯೆ ಪೈಪೋಟಿ ಇದೆ. ಬೆಳಗಾವಿ, ಬಾಗಲಕೋಟ, ವಿಜಯಪುರ ಜಿಲ್ಲಾ ವ್ಯಾಪ್ತಿಯ ವಾಯುವ್ಯ ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲಿದೆ.
ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ
ದಕ್ಷಿಣ ಪದವೀಧರ ಕ್ಷೇತ್ರದ ಕಣದಲ್ಲಿ ಒಟ್ಟು ಒಟ್ಟು 19 ಅಭ್ಯರ್ಥಿಗಳು ಇದ್ದಾರೆ. ಮೂರು ಪ್ರಮುಖ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯಿಂದ ಮೈ.ವಿ.ರವಿಶಂಕರ್, ಕಾಂಗ್ರೆಸ್ ನಿಂದ ಮಧು ಜಿ.ಮಾದೇಗೌಡ, ಜೆಡಿಎಸ್ ನಿಂದ ಎಚ್.ಕೆ.ರಾಮು ಸ್ಪರ್ಧಿಸಿದ್ದಾರೆ. ಬಿಜೆಪಿ ಮೈ.ವಿ.ರವಿಶಂಕರ್ ಗೆ ಅದೃಷ್ಟ ಪರೀಕ್ಷೆ ಇದಾಗಿದೆ.
ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದರು. ಹಾಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಜೆಡಿಎಸ್ ಹರಸಾಹಸ ಮಾಡುತ್ತಿದೆ. ಬಂಡಾಯ, ಅಸಮಾಧಾನದ ನಡುವೆ ಚುನಾವಣೆ ಗೆಲ್ಲಲು ರಣತಂತ್ರ ನಡೆದಿತ್ತು. ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ರಾಮು ಕಣದಲ್ಲಿದ್ದಾರೆ. ಮೊದಲ ಬಾರಿಗೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಕಾತರದಲ್ಲಿದೆ.