Site icon Vistara News

ವಿಧಾನಸೌಧ ರೌಂಡ್ಸ್‌: ಬಿಜೆಪಿ, ಕಾಂಗ್ರೆಸ್‌ ಟಿಕೆಟ್‌; ಆಗಲಿದೆಯೇ ಹಿಟ್‌ ವಿಕೆಟ್‌?

JDS Congress BJP

| ಮಾರುತಿ ಪಾವಗಡ
ರಾಜ್ಯದ ಲೋಕಸಭೆ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಭೆಯಲ್ಲಿ ಮಾಜಿ ಸಿಎಂ‌ ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರ ಸಲಹೆಯನ್ನು ಬಿಜೆಪಿ ವರಿಷ್ಠರು ಗಂಭೀರವಾಗಿ ಪರಿಗಣಿಸಿದ್ದಾರೆ. ಹೋಲ್‌ಸೇಲ್ ಆಗಿ ಹಾಲಿ ಸಂಸದರಿಗೆ ಟಿಕೆಟ್ ಇಲ್ಲ ಅಂತ ಸಂದೇಶ ರವಾನೆ ಮಾಡಿದರೆ ಅದರಿಂದ ಆಗುವ ಲಾಭಕ್ಕಿಂತಲೂ ನಷ್ಟವೇ ಜಾಸ್ತಿ ಎಂಬ ವಾದವನ್ನು ಯಡಿಯೂರಪ್ಪ ಅವರು ಮಂಡಿಸಿದ್ದಾರೆ. ಕೆಲವು ಸಂಸದರಿಗೆ ಟಿಕೆಟ್ ಕೊಡುವುದು ಬೇಡ. ಆದರೆ ವಯಸ್ಸಾದರೂ ರಾಜಕೀಯದಲ್ಲಿ ಸಕ್ರಿಯವಾಗಿದ್ದವರಿಗೆ ಟಿಕೆಟ್ ಕೊಡಬೇಕು ಎಂಬ ವಾದವನ್ನು ಯಡಿಯೂರಪ್ಪ ಮಂಡಿಸಿದ್ದಾರೆ. ಐದಾರು ಬಾರಿ ಗೆದ್ದರೂ ಪಕ್ಷಕ್ಕೂ ಕ್ಷೇತ್ರಕ್ಕೂ ಪ್ರಯೋಜನವಿಲ್ಲದವರನ್ನು ಕೈಬಿಡಿ, ಯುವಕರಿಗೆ ಮಣೆ ಹಾಕಿ ಅನ್ನೋ ವಾದ ಮಂಡಿಸಿದ್ದಾರೆ. ಈ ವಾದಕ್ಕೆ ಬಿಜೆಪಿ ವರಿಷ್ಠರು ಸಹಮತ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಐದಾರು ಬಾರಿ ಗೆದ್ದರೂ ಕ್ಷೇತ್ರಕ್ಕೆ ನಿಷ್ಪ್ರಯೋಜಕರಾಗಿರುವ ಸಂಸದರಿಗೆ ಈ ಬಾರಿ ಟಿಕೆಟ್‌ ಸಿಗುವ ಸಾಧ್ಯತೆ ಕಡಿಮೆ ಎನ್ನುತ್ತಿವೆ ಬಿಜೆಪಿ ಮೂಲಗಳು.

ಕಾಂಗ್ರೆಸ್ ಟಿಕೆಟ್ ಹಂಚಿಕೆ ನೋಡಿ ಕಾಂಗ್ರೆಸ್‌ನವರೇ ನಕ್ಕು ಬಿಟ್ರಂತೆ!

Vistara Editorial, Dr. C.N. Manjunath service is unforgettable

ರಾಜ್ಯದ ಏಳು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿ ಫೈನಲ್ ಮಾಡಿಕೊಂಡು ಬಂದಿದ್ದಾರೆ. ಆದರೆ, ಅದರಲ್ಲಿ ಬೆಂಗಳೂರು ಗ್ರಾಮಾಂತರದ ಹಾಲಿ ಸಂಸದರೊಬ್ಬರು ಬಿಟ್ಟರೆ ಬಹುತೇಕ ಹೊಸ ಮುಖಗಳಿವೆ. ಮಂಡ್ಯದಲ್ಲಿ ಸ್ಟಾರ್ ಚಂದ್ರು ಸದ್ದು ಮಾಡ್ತಿದ್ರು. ಅವರು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಎದುರು ನಕ್ಷತ್ರದಂತೆ ಮಿಂಚಲು ಸಾಧ್ಯವೇ ಅನ್ನೋ ಪ್ರಶ್ನೆಯನ್ನು ಕಾಂಗ್ರೆಸಿಗರೇ ಕೇಳುತ್ತಿದ್ದಾರೆ. ಒಂದು ವೇಳೆ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಾಲಾಗಿ ಸುಮಲತಾ ಸ್ವತಂತ್ರ ಅಭ್ಯರ್ಥಿಯಾದರೆ ಸ್ಟಾರ್ ಚಂದ್ರು ನಕ್ಷತ್ರದಂತೆ ಹೊಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ದೇವೇಗೌಡರ ಕುಟುಂಬದಿಂದ ಅಭ್ಯರ್ಥಿಯಾದರೆ ಇದು ಸ್ಟಾರ್ ಚಂದ್ರುಗೆ ಪ್ಲಸ್ ಆಗಬಹುದು, ಮೈನಸ್ ಕೂಡ ಆಗಬಹುದು. ಕಳೆದ ಬಾರಿ ಸೋತಿರುವ ನಿಖಿಲ್ ಕುಮಾರಸ್ವಾಮಿ ಅವರೇ ಅಭ್ಯರ್ಥಿ ಆಗಬೇಕು ಅನ್ನೋದು ಮಂಡ್ಯ ಕಾರ್ಯಕರ್ತರ ಒತ್ತಡ. ಗೌಡರ ಕುಟುಂಬದಿಂದ ಯಾರೇ ಅಭ್ಯರ್ಥಿಯಾದರೂ ಟಫ್ ಫೈಟ್ ಆಗೋದು ನಿಶ್ಚಿತ.

ಇದನ್ನೂ ಓದಿ | Vistara News Polling Booth: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಜನ ಬೆಂಬಲ; ಕಾಂಗ್ರೆಸ್‌ ನಂ. 2

ಗೀತಕ್ಕನಿಗೆ ಬೇಕಿರಲಿಲ್ಲ ಟಿಕೆಟ್; ರಾಘವೇಂದ್ರಗೆ ಸುಲಭ ಮಾಡಿಕೊಟ್ರಾ ಕೈ ನಾಯಕರು?

Vistara Editorial, Dr. C.N. Manjunath service is unforgettable

ಗೀತಾ ಶಿವಕುಮಾರ್ ಬಂಗಾರಪ್ಪ ಮಗಳಾದರೂ ಡಾ.ರಾಜಕುಮಾರ್ ಸೊಸೆ, ಶಿವರಾಜಕುಮಾರ್ ಹೆಂಡ್ತಿ. ಹೀಗಾಗಿ ಈ ಕುಟುಂಬಕ್ಕೆ ರಾಜಕೀಯದ ಅನಿವಾರ್ಯತೆ ಮತ್ತು ಅಗತ್ಯತೆ ಇಲ್ಲ. ರಾಜಕುಮಾರ್ ಮತ್ತು ಅಪ್ಪು ಇರೋವರೆಗೂ ರಾಜಕೀಯದ ಕಡೆ ತಿರುಗಿ ಸಹ ನೋಡಿರಲಿಲ್ಲ. ಯಾಕೆಂದರೆ ರಾಜಕೀಯ ವ್ಯವಸ್ಥೆ ಕುಲಗೆಟ್ಟು ಹೋಗಿದೆ ಎಂಬುದನ್ನು ಅವರು ಅರಿತಿದ್ದರು. ಆದರೆ ಗೀತಕ್ಕಗೆ ರಾಜಕೀಯದ ಮೇಲೆ ಪ್ರೀತಿ ಜಾಸ್ತಿ ಆಗ್ತಿದೆ. 2014ರಲ್ಲಿ ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿಯಾದಾಗ ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ರು. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ಸಂಸದ ರಾಘವೇಂದ್ರ ಅವರ ಬಲ ಇನ್ನೂ ಜಾಸ್ತಿ ಆಗಿದೆ. ಜತೆಗೆ ರಾಘವೇಂದ್ರ ನಿರಂತರವಾಗಿ ಕ್ಷೇತ್ರ ಸುತ್ತಿದ್ದಾರೆ. ಯಡಿಯೂರಪ್ಪ ಮತ್ತು ವಿಜೇಯೇಂದ್ರಗೆ ಇದು ಪ್ರತಿಷ್ಠೆಯ ಚುನಾವಣೆ. ಹೀಗಿರುವಾಗ ಗೀತಕ್ಕ ಗೆಲುವು ಅಂದುಕೊಂಡಷ್ಟು ಸಲುಭವಲ್ಲ. ಮಧು ಬಂಗಾರಪ್ಪ ಒತ್ತಡಕ್ಕೆ ಇವರು ಚುನಾವಣೆಗೆ ನಿಂತ್ರಾ ಅಥವಾ ಯಡಿಯೂರಪ್ಪ, ಡಿಕೆಶಿ ಒಳಗೊಳಗೆ ಚೆನ್ನಾಗಿದ್ದಾರೆ ಅಂತ ಇವರನ್ನ ಹಳ್ಳಕ್ಕೆ ದಬ್ಬಿದ್ರಾ ಅನ್ನೋ ಚರ್ಚೆ ವಿಧಾನಸೌಧದಲ್ಲಿ (Vidhana Soudha rounds) ನಡೆಯುತ್ತಿದೆ. ಗೀತಕ್ಕ ಗೆದ್ರೆ ಬಂಗಾರಪ್ಪ ಫ್ಯಾಮಿಲಿ ಯಡಿಯೂರಪ್ಪ ಫ್ಯಾಮಿಲಿ ವಿರುದ್ಧ ಗೆಲ್ತು ಅಂತಾರೆ. ಸೋತ್ರೆ ರಾಜಕುಮಾರ್ ಸೊಸೆಗೆ ಸೋಲಾಯಿತು ಅಂತಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ಜವಾಬ್ದಾರಿ ತೆಗೆದುಕೊಳ್ತಾರಾ? ಕಾಲವೇ ಉತ್ತರ ಕೊಡಬೇಕು.

ಹಾವೇರಿ ಟಿಕೆಟ್ ವಿಚಾರದಲ್ಲಿ ಡಿಕೆಶಿಗೆ ಆತುರವೇಕೆ?

ಹಾವೇರಿ ಮುಸ್ಲಿಂ, ಲಿಂಗಾಯತ ಮತ್ತು ಕುರುಬ ಸಮುದಾಯ ಪ್ರಾಬಲ್ಯ ಇರುವ ಕ್ಷೇತ್ರ. ಇಲ್ಲಿ ಬಿಜೆಪಿಯಿಂದ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಹೆಸರು ಕೇಳಿ ಬರ್ತಿದೆ. ಈ ನಡುವೆ ಡಿ.ಕೆ. ಶಿವಕುಮಾರ್ ಅವರು ಗಡ್ಡದೇವರ್‌ಮಠ ಅವರ ಹೆಸರು ಅಂತಿಮ‌ ಮಾಡಿಸಿದ್ದು ಸಹ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಕನಿಷ್ಠ ಜಿಲ್ಲೆ ಮತ್ತು ರಾಜ್ಯದಲ್ಲಿ ನೇಮ್ ಫೇಮ್ ಇರೋ ನಾಯಕನನ್ನು ಹಾಕುವುದು ಬಿಟ್ಟು ಇಷ್ಟು ಆತುರವಾಗಿ ಅಭ್ಯರ್ಥಿಯನ್ನು ಅನೌನ್ಸ್ ಮಾಡುವ ಅನಿವಾರ್ಯತೆ ಏನಿತ್ತು? ಅಲ್ಲಿ ಕಾಂಗ್ರೆಸ್ ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿರುವುದರಿಂದ ಬಿಜೆಪಿ ಸಹ ಬಹುತೇಕ ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಬೇಕಾಗುತ್ತದೆ. ಶೆಟ್ಟರ್ ಇಲ್ಲವೇ ಬೊಮ್ಮಾಯಿ ಅಭ್ಯರ್ಥಿಯಾಗಿ ಗೆದ್ದರೆ ಈಶ್ವರಪ್ಪ ಮಗನಿಗೆ ಟಿಕೆಟ್ ತಪ್ಪಿಸಿದ ಕೀರ್ತಿ ಡಿಕೆಶಿಯದ್ದು ಆಗಬಹುದು. ಆದರೆ ಕಾಂಗ್ರೆಸ್ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗಲು ಸಾಧ್ಯವಿಲ್ಲ. ಇಂತಹದೊಂದು ಚರ್ಚೆ ಕಾಂಗ್ರೆಸ್‌ನಲ್ಲಿ ಶುರುವಾಗಿದೆ.

ಜಯದೇವ ಖ್ಯಾತಿಯ ಡಾ. ಮಂಜುನಾಥ್ ರಾಜಕೀಯಕ್ಕೆ

Vistara Editorial, Dr. C.N. Manjunath service is unforgettable

ದೇವೇಗೌಡರ ಅಳಿಯ ಆಗಿದ್ದರೂ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದರು ಡಾ.ಮಂಜುನಾಥ್. ವೈದ್ಯಕೀಯ ಕ್ಷೇತ್ರದ ನಿವೃತ್ತಿ ಇವರನ್ನು ರಾಜಕೀಯಕ್ಕೆ ಬರುವಂತೆ ಮಾಡಿದೆ. ಬಹುತೇಕ ಬೆಂಗಳೂರು ಗ್ರಾಮಾಂತರದಿಂದ ಇವರು ಬಿಜೆಪಿ ಅಭ್ಯರ್ಥಿ ಆಗುವುದು ಪಕ್ಕಾ ಆಗಿದೆ. ಸಿದ್ದರಾಮಯ್ಯ, ಡಿಕೆಶಿ ಬ್ರದರ್ಸ್‌ಗೆ ಈ ಡಾಕ್ಟರ್ ನಿದ್ದೆಗೆಡಿಸಿದ್ದಾರೆ‌. ಯಾಕೆಂದರೆ ಈ ಬಾರಿ ಮೊದಲ ಕೋಟಾ ಓಪನ್ ಆಗೋದೇ ಬೆಂಗಳೂರು ಗ್ರಾಮಾಂತರದಿಂದ ಅನ್ನೋ ಹುಮ್ಮಸ್ಸಿನಲ್ಲಿ ಇದ್ದವರಿಗೆ ಡಾಕ್ಟರ್ ಎಂಟ್ರಿ ನಿದ್ದೆಗೆಡಿಸಿರುವುದು ನಿಜ.

ಇದನ್ನೂ ಓದಿ | Vistara news polling booth: ಬೆಳಗಾವಿಯಲ್ಲಿ ಬಿಜೆಪಿಯೇ ಬಿಗ್‌ಬಾಸ್‌; ಜನರ ಅಭ್ಯರ್ಥಿ ಶೆಟ್ಟರೂ ಅಲ್ಲ, ಕವಟಗಿಮಠವೂ ಅಲ್ಲ!

ನಾಲ್ವರ ಮಾಜಿ ಸಿಎಂಗಳು ಲೋಕಸಭಾ ಟಿಕೆಟ್ ಗಿಟ್ಟಿಸಲು ಲಾಬಿ

ನಾಲ್ವರು ಮಾಜಿ ಸಿಎಂಗಳಿಂದ ಟಿಕೆಟ್ ಲಾಬಿ ಜೋರಾಗಿ ಸಾಗಿದೆ. ಬಸವರಾಜ್ ಬೊಮ್ಮಾಯಿ ಹಾವೇರಿಯಿಂದ, ಜಗದೀಶ್ ಶೆಟ್ಟರ್ ಹಾವೇರಿ ಮತ್ತು ಬೆಳಗಾವಿಯಿಂದ, ಸದಾನಂದ ಗೌಡ ಬೆಂಗಳೂರು ಉತ್ತರದಿಂದ, ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದಿಂದ ಟಿಕೆಟ್ ಗಿಟ್ಟಿಸಲು ಲಾಬಿ ಶುರು ಮಾಡಿದ್ದಾರೆ. ವೀರಪ್ಪ ಮೊಯ್ಲಿ ಒಂದು ಕಾಲದಲ್ಲಿ ಬಿ ಫಾರಂ ಕೊಡುತ್ತಿದ್ದವರು 80 ವರ್ಷ ದಾಟಿದ ಮೇಲೂ ಟಿಕೆಟ್‌ಗಾಗಿ ತಾವೇ ಬೆಳೆಸಿದವರ ಮುಂದೆ ಕೈಚಾಚಿ ನಿಲ್ಲುತ್ತಿರುರುವುದು ಕಾಲದ ವ್ಯಂಗ್ಯ.

Exit mobile version