| ಮಾರುತಿ ಪಾವಗಡ
ರಾಜ್ಯ ರಾಜಕೀಯದ ಚದುರಂಗದ ಆಟ ಈ ವಾರ ಇನ್ನಷ್ಟು ಚುರುಕು ಪಡೆದುಕೊಂಡಿದೆ. ಎರಡು ರಾಷ್ಟ್ರೀಯ ಪಕ್ಷಗಳ ರಾಜ್ಯ ಘಟಕಗಳಲ್ಲಿನ ಭಿನ್ನಾಭಿಪ್ರಾಯಗಳಿಗೆ ಮದ್ದು ಕಂಡುಕೊಳ್ಳುವ ಪ್ರಯತ್ನವನ್ನು ದೆಹಲಿ ದೊರೆಗಳು ಮಾಡುತ್ತಿದ್ದಾರೆ. ಐದು ತಿಂಗಳಿಂದ ನೇಮಕ ಆಗದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಪಟ್ಟ ಬಿ.ವೈ. ವಿಜಯೇಂದ್ರ ಅವರಿಗೆ ನೀಡಿದ್ದು ಹಲವರು ಕೇಕೆ ಹಾಕಲು ಕಾರಣವಾದರೂ, ಇನ್ನೊಂದಷ್ಟು ಜನರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತಾಯಿತು. ಬಿಜೆಪಿಯ ಈ ಬೆಳವಣಿಗೆ ಕಾಂಗ್ರೆಸ್‌ನ ರಾಜ್ಯ ಮುಂಚೂಣಿ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಅವರನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ವಿಜಯೇಂದ್ರ ಅವರಿಗೂ ಈ ಟಾಸ್ಕ್ ಸುಲಭದ್ದೇನಲ್ಲ.
ರಾಜ್ಯ ಬಿಜೆಪಿ ಗೊಂದಲಗಳಿಗೆ ಬಿಎಸ್‌ವೈ ಮದ್ದು
ಬಿಜೆಪಿ ವರಿಷ್ಠರ ಮುಂದೆ ಸದ್ಯ ಕಾಣುಸುತ್ತಿರುವುದು ಕೇವಲ ಲೋಕಸಭಾ ಚುನಾವಣೆ. ಈ ಚುನಾವಣೆ ಗೆದ್ದು ಮತ್ತೊಮ್ಮೆ ದೇಶದಲ್ಲಿ ಮೋದಿ ಸರ್ಕಾರ ರಚನೆ ಮಾಡುವುದಾಗಿದೆ. ಹೀಗಾಗಿ ಯಾವ ಯಾವ ರಾಜ್ಯದ ಘಟಕಗಳಲ್ಲಿ ಏನು ಸಮಸ್ಯೆ ಇದೆ, ಅದಕ್ಕೆ ತಕ್ಕ ಚಿಕಿತ್ಸೆ ಮತ್ತು ಮದ್ದು ಕೊಡುವುದರ ಬಗ್ಗೆ ತಂತ್ರಗಾರಿಕೆ ನಡೆಯುತ್ತಿದೆ. ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಎಂಬ ಪ್ರಚಾರ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಲು ಮುಖ್ಯ ಕಾರಣವಾಗಿತ್ತು. ಬರುವ ಚುನಾವಣೆಯಲ್ಲಿ ಯಡಿಯೂರಪ್ಪ ಸಾಥ್ ಸಿಗದಿದ್ರೆ ರಾಜ್ಯದಲ್ಲಿ ಬಿಜೆಪಿ ಸೀಟುಗಳು 20ರ ಗಡಿಯನ್ನೂ ದಾಟುವುದು ಕಷ್ಟ. ಜತೆಗೆ ಯುವಕರಲ್ಲಿ ಉತ್ಸಾಹ ತುಂಬುವ ನಾಯಕರ ಅಗತ್ಯ ಇದೆ ಎನ್ನುವುದನ್ನು ಮನಗಂಡು ಬಿ. ವೈ. ವಿಜೇಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏರಿಸಲು ಹೈಕಮಾಂಡ್ ಅಸ್ತು ಎಂದಿದೆ.
ವಿಜಯೇಂದ್ರಗೆ ಬಿಗ್ ಟಾಸ್ಕ್
ವಿಜಯೇಂದ್ರ ಈ ಹಿಂದೆ ಸರ್ಕಾರ ಇದ್ದಾಗ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲದಿರುವ ಕ್ಷೇತ್ರಗಳಲ್ಲೂ ಗೆಲ್ಲಿಸಿದ್ದಾರೆ. ಆದರೆ, ಆಗ ಅವರದ್ದೇ ಸರ್ಕಾರ ಇತ್ತು. ಹೀಗಾಗಿ ವಾತಾವರಣ ಅವರಿಗೆ ಅನುಕೂಲಕರವಾಗಿತ್ತು. ಆದರೆ, 2024ರ ಲೋಕಸಭೆ ಚುನಾವಣೆಯ ವಾತಾವರಣ ಸ್ವಲ್ಪ ಭಿನ್ನವಾಗಿದೆ. ದೇಶದಲ್ಲಿ ಮೋದಿ ಹವಾ ಇದ್ರೂ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರಿಗೆ ರೀಚ್ ಆಗುವ ಯೋಜನೆ ಜಾರಿ ಮಾಡಿದೆ. ಸಣ್ಣಪುಟ್ಟ ಎಡವಟ್ಟುಗಳ ನಡುವೆಯೂ ವಿದ್ಯುತ್ ಉಚಿತ, ಉಚಿತ ಬಸ್ ಪಯಣ, ಅನ್ನ ಭಾಗ್ಯ, ಗೃಹ ಲಕ್ಷ್ಮೀ ಯೋಜನೆ ಜನರ ಬಳಿ ಹೋಗಿರುವುದರಿಂದ ರಾಜ್ಯದಲ್ಲಿ ಬಿಜೆಪಿಗೆ ಸವಾಲಿದೆ. ಜತೆಗೆ ವಿಜಯೇಂದ್ರ ಅವರ ಆಯ್ಕೆ ಕೆಲವು ಹಿರಿಯ ನಾಯಕರಿಗೆ ಕರುಬುವಂತೆ ಮಾಡಿದೆ! ತಾವೂ ಏನೂ ಮಾಡದ, ಬೇರೆಯವರಿಗೂ ಮುಂದೆ ಹೋಗಲು ಬಿಡದ ಇಂಥ ಹಿರಿಯರನ್ನು ವಿಜಯೇಂದ್ರ ಮನವೊಲಿಸಿದರೆ ಅವರು ಮೊದಲ ಟಾಸ್ಕ್‌ನಲ್ಲಿ ಜಯ ಗಳಿಸಿದಂತೆ.
ವಿಜಯೇಂದ್ರಗೆ ಗುಡ್ ನ್ಯೂಸ್; ಬೊಮ್ಮಾಯಿ, ಆರಗ ಜ್ಞಾನೇಂದ್ರಗೆ ಬ್ಯಾಡ್ ನ್ಯೂಸ್
ವಿಜಯೇಂದ್ರ ಮೇಲುಗೈ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಆರಗ ಜ್ಞಾನೇಂದ್ರ ಅವರು ಹಿಂದೆ ಸರಿಯುವಂತಾಗಿದೆ. ಲಿಂಗಾಯತ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದರಿಂದ ಬೊಮ್ಮಾಯಿ ಅವರಿಗೆ ವಿಪಕ್ಷ ನಾಯಕ ಸ್ಥಾನ ಸಿಗುವ ಸಾಧ್ಯತೆ ಇಲ್ಲವೇ ಇಲ್ಲ. ಇನ್ನು, ಆರಗ ಜ್ಞಾನೇಂದ್ರ ಶಿವಮೊಗ್ಗ ಜಿಲ್ಲೆಯವರೇ ಆಗಿರುವ ಕಾರಣ ಅವರೂ ವಿಪಕ್ಷ ನಾಯಕ ಸ್ಥಾನದಿಂದ ರನ್ ಔಟ್ ಆಗುವಂತಾಗಿದೆ.
ಇದನ್ನೂ ಓದಿ | ವಿಧಾನಸೌಧ ರೌಂಡ್ಸ್: ಕಾಂಗ್ರೆಸ್‌ಗೆ ʼಬಿಟ್ಟಿ ಹೇಳಿಕೆʼ ಭಾಗ್ಯ! ಬಿಜೆಪಿಗೆ ಪ್ರತಿಪಕ್ಷ ನಾಯಕ ಸಿಗದ ದೌರ್ಭಾಗ್ಯ!
ಸಿದ್ದರಾಮಯ್ಯ, ಡಿಕೆಶಿ ಸಂಬಂಧ ಸರಿ ಹೋಗಬಹುದು!
ರಾಜ್ಯ ಕಾಂಗ್ರೆಸ್‌ನ ರಥ ಎಳೆಯುತ್ತಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರೋದು ಓಪನ್ ಸೀಕ್ರೆಟ್. ಆದರೆ, ಇವರ ನಡುವೆ ಹತ್ತು ಇಂಚು ಗ್ಯಾಪ್ ಇರೋದನ್ನ ಅವರ ಆಪ್ತ ಸಚಿವರು, ಶಾಸಕರು ನೂರಡಿ ಗ್ಯಾಪ್ ಇದೆ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಇವರಿಬ್ಬರ ಸಂಬಂಧದಲ್ಲಿ ʼಲವ್ ಆ್ಯಂಡ್ ಹೇಟ್ ಪಾಲಿಟಿಕ್ಸ್ʼ ಇರೋದು ವಾಸ್ತವ. ಆದರೆ, ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾಗಿರುವುದು ಇವರಿಬ್ಬರ ನಿದ್ದೆಕೆಡಿಸಲಿದೆ. ವಿಜಯೇಂದ್ರ ಅಧ್ಯಕ್ಷರಾಗಿರುವುದರಿಂದ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಸಂಘಟಿಸಲು ಪ್ರಯತ್ನ ಮಾಡುತ್ತಾರೆ. ಇದು ಇವರಿಬ್ಬರನ್ನು ಹತ್ತಿರ ತರಬಹುದು!
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ