Site icon Vistara News

ವಿಧಾನಸೌಧ ರೌಂಡ್ಸ್:‌ ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳಿಗೆ ಒಳ ಏಟಿನ ಭೀತಿ!

Siddaramaiah and Yediyurappa

| ಮಾರುತಿ ಪಾವಗಡ
ಏಪ್ರಿಲ್ 26 ಮತ್ತು ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ (Lok Sabha Election 2024) ರಾಜ್ಯದ ಮೂರೂ ಪಕ್ಷಗಳು ಭಾರಿ ಉತ್ಸಾಹದಿಂದ ತಯಾರಿ ಶುರು ಮಾಡಿವೆ. ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿ ಮುಂದೆ ದಿನವೂ ಉತ್ಸವದ ವಾತಾವರಣ ಕಂಡು ಬರುತ್ತಿದೆ. ಇತ್ತ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಇರುವ ಕಾಂಗ್ರೆಸ್ ಕಚೇರಿಯಲ್ಲೂ ಹಬ್ಬದ ವಾತಾವರಣ ಇದೆ. ಇನ್ನು ಜೆಡಿಎಸ್‌ನ ಜೆಪಿ ಭವನದಲ್ಲಿ ಕಳೆದ ವಿಧಾನಸಭಾ ಚುನಾವಣೆ (Vidhana Soudha rounds) ವೇಳೆ ಆದ ಸೋಲಿನ ಕಹಿ ಮರೆಯಲು ಯೋಜನೆ ರೂಪಿಸಲಾಗುತ್ತಿದೆ.

ಈಗಾಗಲೇ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 20 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದೆ. ಮೂರು ಕ್ಷೇತ್ರ ಪಡೆದಿರುವ ಜೆಡಿಎಸ್‌ಗೆ ಮಂಡ್ಯದಲ್ಲಿ ಪುಟ್ಟರಾಜು ವರ್ಕೌಟ್ ಆಗುವಂತೆ ಕಾಣಿಸುತ್ತಿಲ್ಲ. ಹೀಗಾಗಿ ಯುದ್ಧಕ್ಕೂ ಮೊದಲೇ ಪುಟ್ಟರಾಜು ಶಸ್ತ್ರ ತ್ಯಾಗ ಮಾಡಿ ಕುಮಾರಸ್ವಾಮಿ ನೀನೇ ಬರಬೇಕು ಅಂತ ಕೂಗತೊಡಗಿದ್ದಾರೆ. ಇನ್ನು “ರೆಬಲ್ ಲೇಡಿʼ ಸುಮಲತಾ ಈ ಮಾತು ಕೇಳಿದ ತಕ್ಷಣ ಆಲರ್ಟ್ ಆಗಿದ್ದಾರೆ. ಕಾಂಗ್ರೆಸ್ 24 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿ ಆರು ಮಂದಿ ಮಹಿಳೆ ಹಾಗೂ ಯುವಕರಿಗೆ ಮಣೆ ಹಾಕುವ ಕೆಲಸ ಮಾಡಿ ಹೊಸ ಹಾದಿ ತುಳಿದಿದೆ. ಆದರೆ ಕಾಂಗ್ರೆಸ್‌ ಕುಟುಂಬ ರಾಜಕಾರಣಕ್ಕೆ ಅತಿಯಾಗಿ ಜೋತು ಬಿದ್ದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾನ್ಯ ಕಾರ್ಯಕರ್ತರ ಮನಸ್ಸಿಗೂ ಇದರು ಬೇಸರ ತರಿಸಿದೆ.

ಇದನ್ನೂ ಓದಿ | Parliament Flashback: ಲೋಕಸಭೆ ತೀರ್ಪೇ ಬೇರೆ, ವಿಧಾನಸಭೆ ತೀರ್ಪೇ ಬೇರೆ! ಅಗ್ನಿಪರೀಕ್ಷೆಗೆ ಧುಮುಕಿ ಗೆದ್ದಿದ್ದ ರಾಮಕೃಷ್ಣ ಹೆಗಡೆ!

ಕಣದಲ್ಲಿರುವ ಅಭ್ಯರ್ಥಿಗಳಿಗೆ ಒಳಪೆಟ್ಟಿನ ಭಯ

ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಎರಡೂ ಪಕ್ಷಗಳ ಕಾರ್ಯಕರ್ತರ ಅಸಮಾಧಾನ ಬಹಿರಂಗಗೊಂಡಿದೆ. ಎರಡು ಮೂರು ವರ್ಷಗಳಿಂದ ಕೆಲಸ ಮಾಡಿದ್ದ ಆಕಾಂಕ್ಷಿಗಳಿಗೆ ಟಿಕೆಟ್ ಕೊಡದೇ ಕುಟುಂಬಕ್ಕೆ ಟಿಕೆಟ್ ಕೊಟ್ಟಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಪಕ್ಷದ ತಳ ಹಂತದ ನಾಯಕರ ಸಿಟ್ಟು ವ್ಯಕ್ತವಾಗುತ್ತಿದೆ.
ಇತ್ತ ಬಿಜೆಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಟಿಕೆಟ್ ತಪ್ಪಿರುವ ಸದಾನಂದ ಗೌಡ, ಈಶ್ವರಪ್ಪ, ನಳೀನ್ ಕುಮಾರ್ ಕಟೀಲ್, ರೇಣುಕಾಚಾರ್ಯ, ಸಂಗಣ್ಣ ಕರಡಿ, ಪ್ರಭು ಚೌಹಾಣ್,‌ ರಮೇಶ್ ಕತ್ತಿ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಆಯಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಒಳ ಪೆಟ್ಟಿನ ಭಯ ಕಾಡುತ್ತಿದೆ. ಇನ್ನು ಜೆಡಿಎಸ್‌ಗೆ ಮಂಡ್ಯದಲ್ಲಿ ಸುಮಲತಾ, ಹಾಸನದಲ್ಲಿ ಪ್ರೀತಂ ಗೌಡ ಮತ್ತು ಕೋಲಾರದಲ್ಲಿ ಮುನಿಸ್ವಾಮಿ ಅವರ ಒಳಪೆಟ್ಟಿನ ಭಯ ಕಾಡುತ್ತಿದೆ.

ಸುಮಲತಾಗೆ ಮಂಡ್ಯ ರಾಜಕೀಯ ಅನಿವಾರ್ಯ

ಮೈತ್ರಿ ಧರ್ಮದಲ್ಲಿ ಬಿಜೆಪಿ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟಿದೆ. ಹೀಗಾಗಿ ಸುಮಲತಾಗೆ ಟಿಕೆಟ್ ಸಿಗಲ್ಲ ಅನ್ನೋದು ಕನ್ಫರ್ಮ್ ಆದ ಬೆನ್ನಲ್ಲೇ, ಮಂಡ್ಯದ ಕಾರ್ಯಕರ್ತರು ಸುಮಲತಾ ಮನೆಗೆ ಬಂದು “ಮತ್ತೆ ಸ್ವಾಭಿಮಾನಿ ಪಾಲಿಟಿಕ್ಸ್” ಶುರು ಮಾಡಿ. ಅಂಬರೀಶ್ ಹುಟ್ಟಿದ ಊರಲ್ಲಿ ನೀವು ಸ್ಪರ್ಧೆ ಮಾಡದಿದ್ರೆ ಜನ ನಿಮ್ಮ ಬಗ್ಗೆ ತಪ್ಪು ತಿಳಿದುಕೊಳ್ತಾರೆ. ಅಲ್ಲದೇ ಅಭಿಷೇಕ್ ಅಂಬರೀಶ್‌ಗಾಗಿ ನೀವು ರಾಜಕೀಯ ಮಾಡೋದು ಅನಿವಾರ್ಯʼʼ ಎಂದು ಸಲಹೆ ನೀಡತೊಡಗಿದ್ದಾರೆ. ಇದನ್ನ ಕೇಳಿಸಿಕೊಂಡ ಸುಮಲತಾ ನಾನು ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಅಂತಿದ್ದಾರೆ. ಸುಮಲತಾ ಈ ನಡೆಯ ಹಿಂದೆ ಅಭಿಷೇಕ್ ರಾಜಕೀಯ ಭವಿಷ್ಯದ ದೂರದೃಷ್ಟಿಯೂ ಇದೆ.

ರಮೇಶ್ ಕುಮಾರ್-ಮುನಿಯಪ್ಪ ಮುಗಿಯದ ಕೋಲ್ಡ್ ವಾರ್

ಕಾಂಗ್ರೆಸ್‌ಗೆ ರಾಜ್ಯದ 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳ ಸಮಸ್ಯೆ ಅಷ್ಟು ದೊಡ್ಡದಾಗಿ ಕಾಣಿಸಿಲ್ಲ. ಆದರೆ ಕರ್ನಾಟಕದ ಪೂರ್ವ ದಿಕ್ಕಿನಲ್ಲಿ ಇರುವ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಭಾರಿ ತಲೆನೋವು ತರಿಸಿದೆ. ಬೆಂಗಳೂರಿಂದ ದೆಹಲಿಗೆ ಹೋಗಿ ಸಭೆ ನಡೆಸಿ, ಬಳಿಕ ದೆಹಲಿಯಿಂದ ಬೆಂಗಳೂರಿನ ಕ್ವೀನ್ಸ್‌ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸರಣಿ ಸಭೆ ಮಾಡಿದರೂ ಮುನಿಯಪ್ಪ ಮತ್ತು ರಮೇಶ್‌ಕುಮಾರ್‌ ನಡುವಿನ ಹಗೆತನದ ಸಮಸ್ಯೆ ಬಗೆಹರಿಸಲು ಆಗಲಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆಶಿ ಈ ಇಬ್ಬರು ನಾಯಕರ ಏಕವಚನದ ವಾಗ್ವಾದ ಕೇಳಿ ಸುಸ್ತು ಹೊಡೆದಿದ್ದಾರೆ. ಮುನಿಯಪ್ಪ ಅವರ ಒಳ ಒಪ್ಪಂದ ರಾಜಕಾರಣದ ಬಗ್ಗೆ ರಮೇಶ್ ಕುಮಾರ್ ಅಂಡ್ ಟೀಮ್ ದೂರುತ್ತಿದೆ. 2019ರಲ್ಲಿ ನನ್ನನ್ನು ಸೋಲಿಸಿ ಬಿಜೆಪಿಯ ಮುನಿಸ್ವಾಮಿ ಅವರನ್ನು ಗೆಲ್ಲಿಸಿದ್ದಾರೆ ಎಂದು ಮುನಿಯಪ್ಪ ತಿರುಗುಬಾಣ ಬಿಟ್ಟಿದ್ದಾರೆ. ಕೊನೆಗೆ ಇದು ಬಗೆಹರಿಯುವ ಸಮಸ್ಯೆ ಅಲ್ಲ ಎಂಬ ತೀರ್ಮಾನಕ್ಕೆ ಬಂದು ಅಂತಿಮ ತೀರ್ಮಾನವನ್ನು ದೆಹಲಿ ಹೈಕಮಾಂಡ್‌ಗೆ ಬಿಟ್ಟು ಸುಮ್ಮನಾಗಿದ್ದಾರೆ.

ಇದನ್ನೂ ಓದಿ | Parliament Flashback: ಬೆಂಗಳೂರು ದಕ್ಷಿಣ ಕ್ಷೇತ್ರ ಅಂದರೆ ಕಾಂಗ್ರೆಸ್‌ಗೆ ದುಃಸ್ವಪ್ನ! ಗೆದ್ದಿದ್ದು ಒಮ್ಮೆ ಮಾತ್ರ!

ಸೋತರೆ ರಾಜ್ಯದ ನಾಯಕರು ಹೊಣೆ, ಗೆದ್ದರೆ ಹೈಕಮಾಂಡ್‌ಗೆ ಕ್ರೆಡಿಟ್‌!

ಎರಡು ರಾಷ್ಟ್ರೀಯ ಪಕ್ಷಗಳು ಸಹ ಗೆದ್ದರೆ ಅದರ ಕ್ರೆಡಿಟ್ ತಾವೇ ಪಡೆದುಕೊಳ್ಳುತ್ತವೆ. ಸೋತರೆ ಅದನ್ನು ಯಾವತ್ತೂ ತಮ್ಮ ತಪ್ಪು ಅಂತ ಒಪ್ಪಿಕೊಳ್ಳುವುದಿಲ್ಲ. ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135+1 ಸ್ಥಾನ ಗೆದ್ದಾಗ ಅದರ ಹಿಂದಿನ ಮಾಸ್ಟರ್ ಮೈಂಡ್ ಸುರ್ಜೇವಾಲಾ ಅಂದ್ರು. ಬಿಜೆಪಿ ಅಭ್ಯರ್ಥಿ ಆಯ್ಕೆಯಿಂದ ಹಿಡಿದು ಪ್ರಚಾರದ ರೂಪುರೇಷೆ ತಯಾರಿ ಮಾಡಿದ್ದು ದೆಹಲಿ ಬಿಜೆಪಿ ಟೀಮ್. ಆದರೆ ಸೋಲಿನ ಹೊಣೆ ಕಟ್ಟಿದ್ದು ರಾಜ್ಯ ಬಿಜೆಪಿ ಘಟಕದ ಮೇಲೆ! ಎರಡೂ ಪಕ್ಷಗಳಲ್ಲಿ ಈ ಬಾರಿಯ ಸೋಲು ಗೆಲುವಿನ ಹೊಣೆ ಯಾರ ತಲೆಗೆ ಕಟ್ಟಲಾಗುತ್ತದೆ ಎಂಬ ಕುತೂಹಲವಿದೆ!

Exit mobile version