| ಮಾರುತಿ ಪಾವಗಡ
ರಾಜ್ಯದಲ್ಲಿ ಮೂರು ಪಕ್ಷಗಳಲ್ಲೂ ಇರುವ ಗೊಂದಲ ಕಡಿಮೆ ಆಗುವ ಲಕ್ಷಣಗಳು ಕಾಣ್ತಿಲ್ಲ. ದಿನೇದಿನೇ ಗೊಂದಲ ಮತ್ತು ಭಿನ್ನಾಭಿಪ್ರಾಯಗಳು ಹೆಚ್ಚಾಗಲು ಆಯಾ ಪಕ್ಷಗಳ ಮುಖಂಡರೇ ಕಾರಣವಾಗುತ್ತಿದ್ದಾರೆ. ಇತ್ತ ಆಡಳಿತ ಪಕ್ಷದಲ್ಲಿ ಶಾಸಕರು, ಸಚಿವರಿಗೆ ಲಂಗುಲಗಾಮೇ ಇಲ್ಲವಾಗಿದೆ. ರಾಜ್ಯ ಬಿಜೆಪಿಯತ್ತ ಬಿಜೆಪಿ ಹೈಕಮಾಂಡ್ ಗಂಭೀರವಾಗಿ ನೋಡುತ್ತಿಲ್ಲ. ಇನ್ನು ಜೆಡಿಎಸ್‌ನಲ್ಲಿ ʼಬ್ರದರ್ ಸರ್ಕಾರʼ ಬೀಳಿಸಿದ ಸಿಪಿವೈ ಜತೆಗೇ ಕುಮಾರಸ್ವಾಮಿಯವರು ವಿದೇಶ ಪ್ರವಾಸ ಮಾಡಿದ್ದು ಭಾರಿ ಚರ್ಚೆಗೆ ಕಾರಣವಾಗಿದೆ.
ರಾಜ್ಯ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲು ಹೈಕಮಾಂಡ್ ವಿಫಲ
ಚುನಾವಣೆಗೂ ಮೊದಲು ಇದ್ದ ಹೈಕಮಾಂಡ್‌ಗೂ, ಸರ್ಕಾರ ರಚನೆ ಆದ ಬಳಿಕದ ಹೈಕಮಾಂಡ್‌ಗೂ ಅಜಗಜಾಂತರ ವ್ಯತ್ಯಾಸ ಕಾಣಿಸುತ್ತಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದ ಹೈಕಮಾಂಡ್, ಸರ್ಕಾರ ಬಂದ ತಕ್ಷಣ ಸಿದ್ದರಾಮಯ್ಯ ಬಣದ ಮುಂದೆ ಮಂಡಿಯೂರಿ ಕುಳಿತಂತೆ ಕಾಣಿಸುತ್ತಿದೆ. ಈ ಬೆಳವಣಿಗೆಯಿಂದ ಹೈಕಮಾಂಡ್ ತನ್ನ ಸಾಮರ್ಥ್ಯವನ್ನು ತಾನೇ ಕುಗ್ಗಿಸಿಕೊಳ್ಳುತ್ತಿದೆ. ಬಿಟ್ಟಿ ʼಹೇಳಿಕೆಗಳ ಭಾಗ್ಯʼಕ್ಕೆ ಕಾಂಗ್ರೆಸ್ ಹೈಕಮಾಂಡ್ ಮೌನ ವಹಿಸಿರುವುದು ನೋಡಿದ್ರೆ ಮತ್ತೊಮ್ಮೆ ಹೈಕಮಾಂಡ್ ಹಲ್ಲು ಕಿತ್ತ ಹಾವಿನಂತಾಗಿದೆಯೇ ಎಂಬ ಪ್ರಶ್ನೆ ಮೂಡಿಸಿದೆ.
ಸಿಎಂ ರೇಸ್‌ನಲ್ಲಿ ಡಿಕೆಶಿ, ಪರಮೇಶ್ವರ್ ಬಿಟ್ರೆ ರಾಜ್ಯ ಕಾಂಗ್ರೆಸ್ ಲ್ಲಿ ಬೇರೆ ಯಾರಿಗೂ ಅರ್ಹತೆ ಇಲ್ಲ
ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ರನ್ನು ಕೂರಿಸಿಕೊಂಡು ವೇಣುಗೋಪಾಲ್ ಮತ್ತು ಸುರ್ಜೇವಾಲಾ ಸಭೆ ನಡೆಸಿ ತೆರಳಿದ ಬಳಿಕವೂ, ʼಐದು ವರ್ಷಗಳ ಕಾಲ ನಾನೇ ಸಿಎಂʼ ಎಂಬ ಹೇಳಿಕೆಗೆ ಡಿ ಕೆ ಶಿವಕುಮಾರ್ ಬಣದಿಂದ ಭಾರಿ ವಿರೋಧ ಎದುರಾಯಿತು. ಈ ಬಾರಿ ಪಕ್ಷ ಅಧಿಕಾರಕ್ಕೆ ಬರಲು ಡಿ. ಕೆ. ಶಿವಕುಮಾರ್ ಪಾತ್ರ ಜಾಸ್ತಿ ಇದೆ. ರಾಜ್ಯಾಧ್ಯಕ್ಷರಾದ ದಿನದಿಂದ ಅಧಿಕಾರಕ್ಕೆ ಬರುವವರೆಗೂ ಬಿಜೆಪಿಯ ವಿರುದ್ಧ ಒಂದು ರಾಷ್ಟ್ರೀಯ ಪಕ್ಷ ಮಾಡಬೇಕಾದ ಎಲ್ಲ ರೀತಿಯ ಹೋರಾಟ ಮಾಡಿ ಕಾಂಗ್ರೆಸ್ ಯಶಸ್ವಿಯಾಯಿತು. ಬಿಜೆಪಿಯ ವೈಫಲ್ಯಗಳನ್ನು ಬೂತ್ ಮಟ್ಟಕ್ಕೆ ತಲುಪಿಸುವಲ್ಲಿ ಕೆಪಿಸಿಸಿ ಯಶಸ್ವಿಯಾಯಿತು. ಹೀಗಾಗಿ 135 ಸ್ಥಾನ ಕಾಂಗ್ರೆಸ್ ಗೆಲ್ಲುವುದಕ್ಕೆ ಕಾರಣವಾಯಿತು. ಆದರೆ ಹೈಕಮಾಂಡ್ ಮುಂದೆ ಸಿಎಂ ಹುದ್ದೆ ವಿಚಾರ ಬಂದಾಗ ಅವರ ಕಣ್ಣಮುಂದೆ ಬಂದಿದ್ದು 2024ರ ಲೋಕಸಭಾ ಚುನಾವಣೆಯೇ ಹೊರತು ಗೆಲುವಿನ ಹಿಂದಿನ ಶ್ರಮ ಅಲ್ಲ. ಹೀಗಾಗಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ ಸಿದ್ದರಾಮಯ್ಯಗೆ ಜೈ ಎಂದಿತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆದರೆ ರಾಜ್ಯ ನಾಯಕತ್ವ ಸಹ ಬದಲಾವಣೆ ಮಾಡಲು ಹೈಕಮಾಂಡ್‌ಗೆ ಶಕ್ತಿ ಬರಬಹುದು. ಇಲ್ಲದೇ ಇದ್ದರೆ ಡಿಕೆಶಿ ಎರಡೂವರೆ ವರ್ಷಗಳವರೆಗೂ ಕಾಯಲೇಬೇಕು. ಈ ನಡುವೆ ಡಿಕೆಶಿ ಶಾಸಕರ ಮನಸ್ಸು ಗೆದ್ದು ಹೈಕಮಾಂಡ್‌ಗೆ ಇನ್ನಷ್ಟು ಹತ್ತಿರ ಆಗಬೇಕು.
ಇದನ್ನೂ ಓದಿ | Congress Karnataka : ಡಿಕೆಶಿ ಸಿಎಂ ಆಗೋದರಲ್ಲಿ ಅನುಮಾನವೇ ಇಲ್ಲ ಎಂದ ಮತ್ತೊಬ್ಬ ಶಾಸಕ! ಹೈಕಮಾಂಡ್ ಮಾತಿಗೆ ಇಲ್ಲ ಬೆಲೆ
ಇನ್ನು ಡಿಕೆಶಿಯಷ್ಟೇ ಸಮರ್ಥ ಪರಮೇಶ್ವರ್ ಅನ್ನೋದು ಕೆಲವರ ವಾದ. 2013ರಲ್ಲಿ ಕೊರಟಗೆರೆಯಲ್ಲಿ ಪರಮೇಶ್ವರ್ ಗೆದ್ದಿದ್ದರೆ ಲೆಕ್ಕಾಚಾರಗಳು ಬದಲಾಗುತ್ತಿದ್ದವು. ಅಂದು ಪರಮೇಶ್ವರ್ ಸಿಎಂ ಆಗ್ತಿದ್ರು. ಆದರೆ ಅಂದು ಸೋತ ಕಾರಣ ಪರಮೇಶ್ವರ್ ಸಿಎಂ ಸ್ಥಾನ ಬೇಕು ಅಂತ ಪಟ್ಟು ಹಿಡಿಯಲು ಆಗಲಿಲ್ಲ. ಈಗ ಅವರಿಗೆ ಕೊನೆಯ ಅವಕಾಶ. ಇದು ನನ್ನ ಕೊನೆಯ ಚುನಾವಣೆ ಅವಕಾಶ ಕೊಡಿ ಅಂತ ಕೇಳಲು ಅವರು ಮುಂದಾಗಿದ್ದಾರೆ ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಬಳಿಯೂ ಅವರು ಚರ್ಚೆ ಮಾಡಿದ್ದಾರೆ. ಆದರೆ, ಒಂದು ವೇಳೆ ನಾಯಕತ್ವ ಬದಲಾವಣೆ ಆಗುವ ಸಂದರ್ಭ ಬಂದರೆ ಪರಮೇಶ್ವರ್‌ಗೆ ಹೈಕಮಾಂಡಗಿಂತಲೂ ಸಿದ್ದರಾಮಯ್ಯ ಕೃಪೆ ತೋರಿಸುವುದು ಮುಖ್ಯ!
ಎಂ. ಬಿ. ಪಾಟೀಲ್, ಸಿದ್ದರಾಮಯ್ಯಗೆ ಹೈಕಮಾಂಡ್ ಕೋಟಾ
ಒಂದು ವೇಳೆ ನಾಯಕತ್ವ ಬದಲಾವಣೆ ಅನಿವಾರ್ಯ ಆದರೆ ಸಿದ್ದರಾಮಯ್ಯ ತಮ್ಮ ಬಣದಲ್ಲಿ ಗುರುತಿಸಿಕೊಂಡಿರುವ ಎಂ. ಬಿ. ಪಾಟೀಲ್ ಹೆಸರು ಮುನ್ನೆಲೆಗೆ ತರಬಹುದು. ವೀರೇಂದ್ರ ಪಾಟೀಲ್ ಬಳಿಕ ಕಾಂಗ್ರೆಸ್‌ನಲ್ಲಿ ಲಿಂಗಾಯತರು ಸಿಎಂ ಆಗಲಿಲ್ಲ ಅನ್ನೋ ಅಪವಾದ ಇದೆ. ಅಲ್ಲದೇ 2023ರಲ್ಲಿ ಈ ಸಮುದಾಯ ಕಾಂಗ್ರೆಸ್ ಪರ ನಿಂತಿದೆ. ರಾಜ್ಯದಲ್ಲಿ ಬಿಜೆಪಿಯನ್ನು ದುರ್ಬಲ ಮಾಡಲು ಎಂ. ಬಿ. ಪಾಟೀಲ್‌ಗೆ ಮಣೆ ಹಾಕಿ ಎಂಬ ಒತ್ತಾಯ ಮಾಡಬಹುದು ಸಿದ್ದರಾಮಯ್ಯ! ಆಗ ಎಂ. ಬಿ. ಪಾಟೀಲ್‌ಗೆ ಜಾಕ್‌ಪಾಟ್ ಹೊಡೆಯಬಹುದು.
ರಾಜ್ಯ ಬಿಜೆಪಿಗೆ ಕೊಳೆ ರೋಗ ಬಂದಿದೆ!
ಮಳೆನಾಡಿನ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿ ಇರುವಂತೆ ರಾಜ್ಯ ಬಿಜೆಪಿ ಸಹ ಸಂಕಷ್ಟದಲ್ಲಿದೆ. ರಾಜ್ಯ ಬಿಜೆಪಿಗೆ ಯುವ ನಾಯಕತ್ವದ ಅವಶ್ಯಕತೆ ಇದೆ. ವಿಜಯೇಂದ್ರಗೆ ಪಟ್ಟ ಕಟ್ಟಿದ್ರೆ ಬಿಜೆಪಿ ಮತ್ತೆ ಹೊಸ ಚಿಗುರು ಹಾಕಬಹುದು. ಆದರೆ ಯಡಿಯೂರಪ್ಪ ಮಗ ಅನ್ನೋ ಕಾರಣಕ್ಕೆ ಒಂದು ವರ್ಗ ಅವರ ಹೆಸರಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಸೋಲು ಯಾವ ಕಾರಣಕ್ಕೆ ಆಗಿದೆ ಅನ್ನೋದನ್ನು ಮತ್ತೊಮ್ಮೆ ಪರಾಮರ್ಶೆ ಮಾಡಿಕೊಂಡರೆ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಅಂತಿಮ ಮಾಡುವುದು ಬಿಜೆಪಿ ವರಿಷ್ಠರಿಗೆ ಕಷ್ಟದ ಕೆಲಸವೇನು ಅಲ್ಲ!
ಇದನ್ನೂ ಓದಿ | Narendra Modi : ಕರ್ನಾಟಕವನ್ನು ನಿರ್ನಾಮ ಮಾಡುತ್ತಿದೆ ಕಾಂಗ್ರೆಸ್; ಪ್ರಧಾನಿ ಮೋದಿ ಟೀಕೆ
ಮೈತ್ರಿ ಸರ್ಕಾರ ಬೀಳಿಸಿದ ಸಿಪಿವೈ ಜತೆ ಎಚ್ಡಿಕೆ ಮಾತುಕತೆ!
2019ರಲ್ಲಿ ಮೈತ್ರಿ ಸರ್ಕಾರ ಬೀಳಿಸಿದ ಸಿ. ಪಿ. ಯೋಗೇಶ್ವರ್ ಜತೆಗಿನ ಎಚ್. ಡಿ. ಕುಮಾರಸ್ವಾಮಿ ಫ್ರೆಂಡ್ಲಿ ಪಾಲಿಟಿಕ್ಸ್‌ಗೆ ಜೆಡಿಎಸ್‌ನಲ್ಲಿ ವಿರೋಧ ವ್ಯಕ್ತವಾಗಿದೆ. ಅಂದು ಸರ್ಕಾರ ಬೀಳಿಸಿ ಬಿಜೆಪಿ ಸರ್ಕಾರ ಪ್ರತಿಷ್ಠಾಪನೆ ಮಾಡುವಲ್ಲಿ ಪಾತ್ರ ವಹಿಸಿದ್ದ ಸಿ. ಪಿ. ಯೋಗೇಶ್ವರ್ ಜತೆ ವಿದೇಶದಲ್ಲಿ ಆದ ಮಾತುಕತೆ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ರಾಜಕೀಯ ಬೆಳವಣಿಗೆಗಳನ್ನು ಪೂರಕವಾಗಿ ಬಳಸಿಕೊಂಡು ಲೋಕಸಭಾ ಚುನಾವಣೆ ಬಳಿಕ ಮತ್ತೆ ಮೈತ್ರಿ ಸರ್ಕಾರ ರಚನೆ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.