| ಮಾರುತಿ ಪಾವಗಡ
ಮೋದಿ ಸರ್ಕಾರ ಹತ್ತು ವರ್ಷ (ವಿಧಾನಸೌಧ ರೌಂಡ್ಸ್) ಅಧಿಕಾರ ನಡೆಸುತ್ತಿದ್ದರೂ ಕಾಂಗ್ರೆಸ್‌ಗೆ ಇನ್ನೂ ಶುಕ್ರದೆಸೆ ಶುರುವಾಗುವ ಲಕ್ಷಣವೇ ಇಲ್ಲ. ಆದರೆ ಇತ್ತ ರಾಜ್ಯದಲ್ಲಿ ಬಿಜೆಪಿಗೆ ಟೈಮ್ ಸರಿಯಿಲ್ಲ. ವಿಧಾನಸಭೆ ಒಳಗೆ ಆಡಳಿತ ಪಕ್ಷದ ಪರ ಬಿಜೆಪಿ ಶಾಸಕರೇ ನಿಲ್ಲುವ ಮಟ್ಟಿಗೆ ಇದು ಬಂದು ತಲುಪಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಈ ಬಾರಿ ಬೆಳಗಾವಿ ಅಧಿವೇಶನವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬಂದರು. ಬಿಜೆಪಿ ಆಡಳಿತ ಪಕ್ಷವನ್ನ ಕಟ್ಟಿಹಾಕುವಲ್ಲಿ ವಿಫಲವಾಗಿ ತನ್ನ ಕೈಗೆ ತಾನೇ ಕೋಳ ತೊಡಿಸಿಕೊಂಡಂತೆ ಆಗಿದೆ.
ಇನ್ನು ರಾಜ್ಯದಲ್ಲಿ ಬಿಜೆಪಿ ಪರಿಸ್ಥಿತಿ ಈ ರೀತಿ ಇದ್ದರೂ ವರಿಷ್ಠರು ತಲೆಕೆಡಿಸಿಕೊಳ್ಳುತ್ತಿಲ್ಲ. ಮೈತ್ರಿಯ ಮತ್ತೊಂದು ಪಕ್ಷ ಜೆಡಿಎಸ್ ನಾಯಕ ಕುಮಾರಸ್ವಾಮಿ ಈ ಬಾರಿಯೂ ಅಧಿವೇಶನವನ್ನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
ಎಐಸಿಸಿಗೆ ಶುಕ್ರದೆಸೆ ಕಾಣಿಸುತ್ತಿಲ್ಲ; ರಾಜ್ಯ ಬಿಜೆಪಿಗೆ ಟೈಮ್ ಸರಿಯಿಲ್ಲ
ರಾಜ್ಯ ರಾಜಕಾರಣ ಮತ್ತು ದೆಹಲಿ ರಾಜಕಾರಣ ಯಾವಾಗಲೂ ತದ್ವಿರುದ್ಧವಾಗಿ ನಡೆಯುತ್ತದೆ. ದೇಶದಲ್ಲಿ ಮೋದಿ ಅಲೆ ಇದ್ದರೂ ರಾಜ್ಯದಲ್ಲಿ ಅದು ವರ್ಕೌಟ್ ಆಗಲಿಲ್ಲ. ಬಳಿಕ ರಾಜ್ಯ ಬಿಜೆಪಿಯನ್ನ ವರಿಷ್ಠರು ನೆಗ್ಲೆಕ್ಟ್ ಮಾಡುತ್ತಲೇ ಬಂದರು. ಇದರ ಪರಿಣಾಮವಾಗಿ ರಾಜ್ಯ ಬಿಜೆಪಿಯಲ್ಲಿ ಒಗ್ಗಟ್ಟಿನ ಕೊರತೆ ಕಾಣುತ್ತಿದೆ. ಮೊನ್ನೆ ಸದನದಲ್ಲಂತೂ ತೀರ ಅತಿರೇಕಕ್ಕೆ ಹೋಗಿ ವಿಪಕ್ಷ ನಾಯಕ ಆರ್ ಆಶೋಕ್‌ಗೆ ಸಾಕಪ್ಪ ಈ ಜವಾಬ್ದಾರಿ ಅನ್ನೋ ಬೇಸರ ಉಂಟಾಗುವಂತಾಯಿತು. ಕೆಲವು ಶಾಸಕರು ಅಶೋಕ್ ಹೇಳಿದಕ್ಕೆ ಉಲ್ಟಾ ಹೇಳಿದರು. ಕೆಲವು ಸದಸ್ಯರು ಸಭಾತ್ಯಾಗ ಅಂತ ಘೋಷಣೆ ಮಾಡಿದಾಗ ಸದನದಲ್ಲಿ ಕೂತು ಮುಜುಗರ ಅನುಭವಿಸುವಂತಾಯಿತು ಅಶೋಕ್. ವಿಪಕ್ಷದಲ್ಲಿನ ಈ ನಡೆ ಆಡಳಿತ ಪಕ್ಷವಾದ ಕಾಂಗ್ರೆಸ್ ನಿರಾಯಾಸವಾಗಿ ಅಧಿವೇಶನ ನಡೆಸಲು ಕಾರಣವಾಯಿತು.
ಇದನ್ನೂ ಓದಿ | COVID Subvariant JN.1: ರಾಜ್ಯದಲ್ಲಿ ಕೋವಿಡ್ ಹೈ ಅಲರ್ಟ್; 60 ವರ್ಷ ದಾಟಿದವರಿಗೆ ಮಾಸ್ಕ್ ಕಡ್ಡಾಯ
ಎಸ್.ಟಿ. ಸೋಮಶೇಖರ್, ಹೆಬ್ಬಾರ್, ವಿಶ್ವನಾಥ ಆಟಕ್ಕೆ ಶರಣಾದ ಬಿಜೆಪಿ!
ಸದನದಲ್ಲಿ ಈ ಮೂರು ಶಾಸಕರ ಆಟ ಬಿಜೆಪಿಗೆ ದೊಡ್ಡ ತಲೆನೋವು ತರಿಸಿತು. ಇವರು ಕೊಟ್ಟ ಏಟಿಗೆ ವಿಪಕ್ಷ ಬಿಜೆಪಿ ನಾಯಕರು ಸದನದಲ್ಲಿ ಸುಧಾರಿಸಿಕೊಳ್ಳಲು ಆಗಲಿಲ್ಲ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಸ್ಥಳಕ್ಕೆ ಊಟಕ್ಕೆ ಹೋಗಿದ್ದು, ಸಭಾತ್ಯಾಗ ಮಾಡುವಾಗ ಸದನದಲ್ಲಿಯೇ ಸೋಮಶೇಖರ್ ಠಿಕಾಣಿ ಹಾಕಿದ್ದು, ಕೊನೆಗೆ ಇದನ್ನು ಗಮನಿಸಿದ ಆರ್. ಅಶೋಕ್ ʼಗುರು ಕಾಂಗ್ರೆಸ್‌ಗೆ ಹೋಗುವುದಿದ್ರೆ ಹೋಗಿಬಿಡುʼ ಎಂದು ಗದರಿಸಿದರು. ಎಸ್ಟಿ ಸೋಮಶೇಖರ್ ಧೃತಿಗೆಡದೆ ಕೂತು ಸಂದೇಶ ರವಾನೆ ಮಾಡಿದರು. ಆದರೆ ಈ ಮೂವರ ಲೆಕ್ಕಾಚಾರ ಏನು ಅಂದರೆ ಅವರೇ ನಮ್ಮನ್ನ ಪಕ್ಷದಿಂದ ಉಚ್ಚಾಟನೆ ಮಾಡಿದರೆ ನಮಗೆ ಶಾಸಕ ಸ್ಥಾನ ರದ್ದು ಆಗುವುದಿಲ್ಲ, ಜತೆಗೆ ನಮ್ಮಿಂದ ಸರ್ಕಾರ ಬಂದರೂ ನಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಿದರು ಅಂತ ಕ್ಷೇತ್ರದಲ್ಲಿ ಹೇಳಿ ಅನುಕಂಪ ಗಿಟ್ಟಿಸಿಕೊಳ್ಳಬಹುದು ಅನ್ನೋ ಲೆಕ್ಕಾಚಾರದಲ್ಲಿ ಶಾಸಕರು ಇದ್ದಾರೆ. ಆದರೆ ಪಕ್ಷದಿಂದ ಕ್ರಮ ಕೈಗೊಂಡ್ರೆ ಲೋಕಸಭಾ ಚುನಾವಣೆ ದೃಷ್ಟಿಯಿಂದ ಲಾಸ್ ಆಗಬಹುದು ಅನ್ನೋ ಭಯವೂ ಬಿಜೆಪಿ ಮುಖಂಡರಿಗೆ ಕಾಡುತ್ತಿದೆ.
ಮೈತ್ರಿ ಬಳಿಕ ಎಚ್ಡಿಕೆಗೆ ಡಿಮ್ಯಾಂಡ್
ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪಕ್ಕಾ ಆದ ಬಳಿಕ ನಡೆದ ಮೊದಲ ಅಧಿವೇಶನದಲ್ಲಿ ಕುಮಾರಸ್ವಾಮಿಗೆ ಭಾರಿ ಡಿಮ್ಯಾಂಡ್ ಜಾಸ್ತಿ ಆಗಿದೆ. ಆರ್.ಆಶೋಕ್‌ಗಿಂತಲೂ ಕೆಲವು ಬಿಜೆಪಿ ಶಾಸಕರು ಕುಮಾರಣ್ಣಾ ಕುಮಾರಣ್ಣಾ ಅಂತ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಸಹಜವಾಗಿ ಕುಮಾರಸ್ವಾಮಿ ಜತೆ ಬಿಜೆಪಿ ಶಾಸಕರು ಚರ್ಚೆ ನಡೆಸುವುದು ಜಾಸ್ತಿ ಆಗಿದೆ. ಇದು ಬಿಜೆಪಿಯ ಕೆಲ ಹಿರಿಯ ನಾಯಕರಿಗೆ ಕಿರಿಕಿರಿ ಸಹ ಶುರುವಾಗಿದೆ.
ಇದನ್ನೂ ಓದಿ | ಇನ್ನೆರಡೇ ದಿನಕ್ಕೆ ನಿಗಮ ಮಂಡಳಿ ಪಟ್ಟಿ ಪ್ರಕಟ? ಅಂತಿಮ ಮಾಡಿಸಿಕೊಂಡು ಬರುತ್ತೇವೆಂದ ಡಿ.ಕೆ. ಶಿವಕುಮಾರ್
ಮಂಡ್ಯದಲ್ಲಿ ರಾಜಕೀಯ ಮತ್ತೆ ರಂಗೇರಲಿದೆ
ಟಾರ್ಗೆಟ್ 20 ರೀಚ್ ಆಗಲು ಹೈಕಮಾಂಡ್ ಕಾಂಗ್ರೆಸ್ ಗೆ ಟಾರ್ಗೆಟ್ ನೀಡಿದೆ. ಹೀಗಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಶುರು ಮಾಡಿದ್ದಾರೆ. ಈ ನಡುವೆ ಮಂಡ್ಯ ಜಿಲ್ಲೆಯಲ್ಲಿ ಯಾರು ಅಭ್ಯರ್ಥಿ ಆಗಬೇಕು ಅನ್ನೋದು ಬಾರಿ ಚರ್ಚೆ ಆಗ್ತಿದೆ.ಇತ್ತ ಜೆಡಿಎಸ್ ಇಂದ ಎಚ್ ಡಿ ಕುಮಾರಸ್ವಾಮಿ ಅವರನ್ನ ಅಭ್ಯರ್ಥಿ ಮಾಡುವಂತೆ ಒತ್ತಡ ಹಾಕ್ತಿರುವುದರಿಂದ ಅವರೇ ಅಭ್ಯರ್ಥಿಯಾದರೆ ಸಚಿವ ಚಲುವರಾಯಸ್ವಾಮಿ ಅವರನ್ನು ಅಭ್ಯರ್ಥಿ ಮಾಡುವಂತೆ ಸದನ ನಡೆಯುವಾಗ ಸಿಎಂ, ಡಿಸಿಎಂಗೆ ಮಂಡ್ಯ ಜನಪ್ರತಿನಿಧಿಗಳು ಒತ್ತಾಯ ಮಾಡಿದ್ದಾರೆ.