Site icon Vistara News

BJP Ticket Fraud : ಮತ್ತೊಂದು ಬಿಜೆಪಿ ಟಿಕೆಟ್‌ ಮೋಸ; 2.55 ಕೋಟಿ ರೂ. ವಂಚನೆ ಸಂಬಂಧ FIR ದಾಖಲು!

bjp ticket fraud case in kottur

ವಿಜಯನಗರ: ಹಿಂದು ಕಾರ್ಯಕರ್ತೆ ಕುಂದಾಪುರದ ಚೈತ್ರಾಳ ಮೋಸದ ಕೇಸ್ ರೀತಿಯೇ ಈಗ ಬಿಜೆಪಿ ಟಿಕೆಟ್‌ ವಂಚನೆಯ (BJP Ticket Fraud) ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಎಫ್‌ಐಆರ್‌ ದಾಖಲು (FIR registered) ಮಾಡಿಕೊಳ್ಳಲಾಗಿದೆ. ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣ ಇದಾಗಿದ್ದು, ಕೊಟ್ಟೂರು ನಿವಾಸಿ, ನಿವೃತ್ತ ಎಂಜಿನಿಯರ್‌ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ (Assembly election) ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರದ (Hagaribommanahalli SC reserved assembly constituency) ಟಿಕೆಟ್ ಕೊಡಿಸುವುದಾಗಿ ಶಿವಮೂರ್ತಿ ಅವರಿಗೆ ನಾಲ್ವರ ತಂಡವು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಆರೋಪಿ ರೇವಣಸಿದ್ದಪ್ಪ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿವಮೂರ್ತಿ, ಪಕ್ಷದ ಚಟುವಟಿಕೆಗಾಗಿ 65 ಲಕ್ಷ ರೂಪಾಯಿಯನ್ನು ಖರ್ಚು ಮಾಡಿಸಲಾಗಿದೆ. ಅಲ್ಲದೆ, ಟಿಕೆಟ್‌ ಕೊಡಿಸುವುದಾಗಿ ವಂಚಕರು ತಮ್ಮ ಬಳಿ ಒಟ್ಟು 1.90 ಕೋಟಿ ರೂಪಾಯಿಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಒಟ್ಟು 2.55 ಕೋಟಿ ರೂ. ವಂಚನೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.

ದೂರುದಾರ ಶಿವಮೂರ್ತಿ

ಎಫ್‌ಐಆರ್‌ ದಾಖಲು

ಈ ಪ್ರಕರಣ ಸಂಬಂಧ ಅಕ್ಟೋಬರ್‌ 19ರಂದು ಶಿವಮೂರ್ತಿ ಅವರು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ನೀಡಿದ ದೂರಿನನ್ವಯ ಪೊಲೀಸರು ಎಫ್‌ಐಆರ್‌ ದಾಖಲು ಮಾಡಿಕೊಂಡಿದ್ದಾರೆ.

ಸಿಎಂಗೆ ಬರೆಯಲಾದ ಪತ್ರ

ಕೊಟ್ಟೂರಿನ ಕಟಾರಿ ಆಪ್ಟಿಕಲ್ ಮಾಲೀಕ ಮೋಹನ್ ಕಟಾರಿಯಾ, ಬಿಜೆಪಿ ಮಾಜಿ ಮುಖಂಡ, ಹಾಲಿ ಜನಾರ್ದನ ರೆಡ್ಡಿ ಪಕ್ಷದ ವಿಜಯನಗರ ಜಿಲ್ಲಾಧ್ಯಕ್ಷ ರೇವಣಸಿದ್ದಪ್ಪ ಹಾಗೂ ಪುತ್ತೂರು ಮೂಲದ ಶೇಖರ್ ಪುರುಷೋತ್ತಮ್ ನಿರ್ಲಕಟ್ಟೆ (ರಾಜಶೇಖರ್) ಎಂಬುವವರಿಂದ ವಂಚನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಒಟ್ಟು 1.90 ಕೋಟಿ ರೂಪಾಯಿಯನ್ನು ಇದುವರೆಗೆ ಪಡೆಯಾಗಿದೆ. ಅದರಲ್ಲಿ 65 ಲಕ್ಷ ರೂಪಾಯಿಯನ್ನು ಪಕ್ಷದ ಬೇರೆ ಬೇರೆ ವಿಚಾರಕ್ಕೆ ಖರ್ಚು ಮಾಡಿಸಲಾಗಿದೆ ಎಂದು ಆರೋಪ ಮಾಡಿರುವ ಶಿವಮೂರ್ತಿ, ತಾವು ಕೊಟ್ಟಿರುವ ಎಲ್ಲ ಹಣದ ದಾಖಲೆ ಸಮೇತ ದೂರು ನೀಡಿದ್ದಾರೆ. ಅಲ್ಲದೆ, ಈಗ ಹಣವನ್ನು ವಾಪಸ್ ಕೇಳಿದ್ದಕ್ಕೆ ಧಮಕಿ ಹಾಕುತ್ತಿದ್ದಾರೆ ಎಂದು ಸಹ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಿಎಂ, ಗೃಹ ಸಚಿವರಿಗೆ ಪತ್ರ

ಹಣ ಕಳೆದುಕೊಂಡ ಶಿವಮೂರ್ತಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ಗೆ ಪತ್ರ ಬರೆದು ಮನವಿ ಮಾಡಿದ್ದರು. ತಮಗೆ ವಂಚನೆ ಮಾಡಿದವರ ಬಗ್ಗೆ ಸಂಪೂರ್ಣ ವಿವರವನ್ನು ಹಾಕಿ, ಮೋಸ ಮಾಡಿದವರ ಮೇಲೆ ಕ್ರಮ ಕೈಗೊಂಡು ತಮ್ಮ ಹಣವನ್ನು ವಾಪಸ್‌ ಕೊಡಿಸುವಂತೆ ಕೋರಿದ್ದಾರೆ.

ಈ ವಂಚಕ ಟೀಂ ತಮಗೆ 2022ರ ಅಕ್ಟೋಬರ್ 23ಕ್ಕೆ ಪುತ್ತೂರು ಬಿಜೆಪಿ ಮುಖಂಡ ಶೇಖರ್‌ಗೆ ಪರಿಚಯ ಮಾಡಿಸಿದೆ. ಬಳಿಕ ನಳಿನ್ ಕುಮಾರ್ ಕಟೀಲ್ ಅವರನ್ನು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಭೇಟಿ ಮಾಡಿಸಿತ್ತು. ನಳಿನ್ ಕುಮಾರ್ ಕಟೀಲ್ ಕೂಡಾ ಟಿಕೆಟ್ ವಿಚಾರ ಪುತ್ತೂರು ಬಿಜೆಪಿ ಮುಖಂಡ ಶೇಖರ್ ಎನ್.ಪಿ ಬಳಿಯೇ ಮಾತನಾಡಿ ಎಂದು ಹೇಳಿದ್ದರು ಎಂದು ಶಿವಮೂರ್ತಿ ಅವರು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2.55 ಕೋಟಿ ರೂಪಾಯಿ ಮೋಸ

2022ರ ಅಕ್ಟೋಬರ್‌ನಿಂದ ಹಣದ ವ್ಯವಹಾರ ಶುರುವಾಗಿದೆ. ಏಪ್ರಿಲ್ 2023ರವರೆಗೆ ಒಟ್ಟು 2.55 ಕೋಟಿ ರೂಪಾಯಿ ಹಣವನ್ನು ಈ ವಂಚಕ ತಂಡ ಪಡೆದಿದೆ ಎಂದು ಶಿವಮೂರ್ತಿ ಆರೋಪಿಸಿದ್ದಾರೆ.

ಚೆಕ್‌ ಬೌನ್ಸ್‌

ಟಿಕೆಟ್‌ ಅನೌನ್ಸ್‌ ಬಳಿಕ ವರಸೆ ಬೇರೆ

ಹಗರಿಬೊಮ್ಮನಹಳ್ಳಿ ಬಿಜೆಪಿ ಟಿಕೆಟ್ ಅನ್ನು ಬಲ್ಲಾಹುಣ್ಸಿ ರಾಮಣ್ಣ ಎಂಬುವವರಿಗೆ ಅನೌನ್ಸ್ ಆಗಿತ್ತು. ಟಿಕೆಟ್ ಘೋಷಣೆ ಆಗುತ್ತಿದ್ದಂತೆ ನಿವೃತ್ತ ಎಂಜಿನಿಯರ್ ಶಿವಮೂರ್ತಿಗೆ ತಾವು ಮೋಸ ಹೋಗಿರುವುದು ಅರಿವಿಗೆ ಬಂದಿದೆ. ಹಾಗಾಗಿ ಅವರು ವಂಚಕರಿಗೆ ಕರೆ ಮಾಡಿ ಕೇಳಿದ್ದಾರೆ. ಆದರೆ, ಹಣ ಕೊಡುವುದಿಲ್ಲ, ಏನ್ ಮಾಡುತ್ತೀಯೋ ಮಾಡು. ನಿನಗೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಅಂತ ಬೆದರಿಕೆ ಹಾಕಿದ್ದಾರೆ ಎಂದು ಶಿವಮೂರ್ತಿ ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: Road Accident : ತುಮಕೂರಲ್ಲಿ ಅಪಘಾತಕ್ಕೆ ವಿಕಲಚೇತನ ಬಲಿ; ಶಿರಸಿಯಲ್ಲಿ ಖಾಸಗಿ-ಸಾರಿಗೆ ಬಸ್‌ ಡಿಕ್ಕಿ

90 ಲಕ್ಷ ರೂ. ಚೆಕ್‌ ಬೌನ್ಸ್‌

ಟಿಕೆಟ್ ಸಿಗದಿದ್ದಾಗ ಹಣ ವಾಪಸ್ ಕೇಳಿದೆ. ಅದಕ್ಕೆ 90 ಲಕ್ಷ ರೂಪಾಯಿ ಚೆಕ್ ನೀಡಿದ್ದರು. ಅಕ್ಟೋಬರ್‌ 10ರ ದಿನಾಂಕವನ್ನು ಹಾಕಲಾಗಿತ್ತು. ಆದರೆ, ಚೆಕ್‌ ಬೌನ್ಸ್‌ ಆಗಿದೆ ಎಂದು ಸಹ ಶಿವಮೂರ್ತಿ ಆರೋಪ ಮಾಡಿದ್ದಾರೆ.

Exit mobile version