ವಿಜಯನಗರ : ಹೋಮ್ ವರ್ಕ್ (Home Work) ಮಾಡದಿದ್ದಕ್ಕೆ ವಿದ್ಯಾರ್ಥಿನಿಗೆ ಕಾಲು ಊತ ಬರುವಂತೆ ಮುಖ್ಯ ಶಿಕ್ಷಕಿ (Assault Case) ಬಾರಿಸಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿರುವ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಘಟನೆ ನಡೆದಿದೆ.
ವಿಜ್ಞಾನ ವಿಷಯದ ಹೋಂ ವರ್ಕ್ ಮಾಡದಿದ್ದಕ್ಕೆ ಮುಖ್ಯ ಶಿಕ್ಷಕಿ ವಾಣಿ ಎಂಬುವವರು ವಿದ್ಯಾರ್ಥಿನಿಗೆ ಮನಬಂದಂತೆ ಹೊಡೆದಿದ್ದಾರೆ. ಮಾನಸ ಎಂಬಾಕೆಗೆ ಈ ಮೊದಲು ಅಪಘಾತ ಆಗಿದ್ದರಿಂದ ಕಾಲಿಗೆ ರಾಡ್ ಅಳವಡಿಸಲಾಗಿತ್ತು. ಮತ್ತೆ ಅದೇ ಕಾಲಿಗೆ ಶಿಕ್ಷಕಿ ವಾಣಿ ಸ್ಕೇಲ್‌ನಿಂದ ಜೋರಾಗಿ ಹೊಡೆದಿದ್ದಾರೆ. ಜೋರಾಗಿ ಹೊಡೆತದಿಂದಾಗಿ ಕಾಲು ಊದಿಕೊಂಡು ಬಾಲಕಿಗೆ ನಡೆದಾಡುವುದಕ್ಕೂ ಸಾಧ್ಯವಾಗಿಲ್ಲ.
ಇನ್ನೂ ಮನಸೋ ಇಚ್ಛೆ ಥಳಿಸಿದ ಶಿಕ್ಷಕಿ ವಾಣಿಯೇ ಬಾಲಕಿಯನ್ನು ಚಿತ್ರದುರ್ಗದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಎಲುಬು ಮತ್ತು ಮೂಳೆ ತಜ್ಞರಿಂದ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕಿಯ ಕಾಲಿಗೆ ಬ್ಯಾಂಡೇಜ್ ಹಾಕಿ ಸೂಕ್ತ ಚಿಕಿತ್ಸೆ ನೀಡಿ ವೈದ್ಯರು ಕಳಿಸಿದ್ದಾರೆ. ಇತ್ತ ಬಾಲಕಿಯನ್ನು ನೋಡಲೆಂದು ಪಾಲಕರು ಭಾನುವಾರ ಶಾಲೆಗೆ ಬಂದಿದ್ದಾರೆ. ಆಗಲೇ ಮಗಳ ಕಾಲಿನ ಸ್ಥಿತಿ ನೋಡಿ ಪ್ರಕರಣ ಬೆಳಕಿಗೆ ಬಂದಿದೆ. ಬಾಲಕಿ ಪೋಷಕರು ಬಳಿಕ ಮುಖ್ಯ ಶಿಕ್ಷಕಿ ವಾಣಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Murder case : ಭೂ ವಿವಾದಕ್ಕಾಗಿ ಪರಸ್ಪರ ಹೊಡೆದಾಡಿಕೊಂಡ ಅಣ್ಣ-ತಮ್ಮ ಮೃತ್ಯು
ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರಗಳ ರಕ್ಷಣೆ
ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಜಾನುವಾರಗಳ ರಕ್ಷಣೆ ಮಾಡಲಾಗಿದೆ. ಬುಲೆರೋ ವಾಹನದಲ್ಲಿ ಸಾಗಿಸುತ್ತಿದ್ದ 7 ಹಸುಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಚಿತ್ರದುರ್ಗದಿಂದ ಮಧುಗಿರಿ ಮೂಲಕ ಗೌರಿಬಿದನೂರಿನ ಅಲ್ಲಿಪುರಕ್ಕೆ ಸಾಗಿಸುತ್ತಿದ್ದರು ಎನ್ನಲಾಗಿದೆ. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಬ್ಬಿನ ಗದ್ದೆಯಲ್ಲಿ ಬಲೆಗೆ ಬಿದ್ದ ಚಿರತೆ
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಂಟೂರ ಗ್ರಾಮದಲ್ಲಿ ಕಳೆದೊಂದು ವಾರದಿಂದ ಆತಂಕ ಸೃಷ್ಟಿಸಿದ್ದ ಚಿರತೆಯು ಕೊನೆಗೂ ಕಬ್ಬಿನ ಗದ್ದೆಯಲ್ಲಿ ಬೋನಿಗೆ ಬಿದ್ದಿದೆ. ಬೋನಿಗೆ ಹಾಕಿ ಟ್ಯಾಕ್ಟರ್ ಮೂಲಕ ಸಾಗಾಟ ಮಾಡುವಾಗ ಚಿರತೆ ಎಸ್ಕೇಪ್ ಆಗಿತ್ತು. ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಮಂಟೂರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬೋನು ಇಟ್ಟಿದ್ದರು.
ಬೋನಿನಿಂದ ಪರಾರಿಯಾದ ಚಿರತೆಗೆ ಮತ್ತೆ ಮೂರು ತಾಸು ಕಾರ್ಯಾಚರಣೆ ನಡೆಸಿದ್ದರು. ನಾಪತ್ತೆಯಾಗಿದ್ದ ಚಿರತೆ ಮತ್ತೆ ಮಂಟೂರ ಗ್ರಾಮಸ್ಥರ ಸಹಕಾರದೊಂದಿಗೆ ಸೆರೆಯಾಗಿದೆ. ಚಿರತೆ ಸೆರೆಯಿಂದ ಮಂಟೂರ, ಕಿಶೋರಿ, ಹಲಗಲಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ