ವಿಜಯನಗರ: ಅವಳ ಮದುವೆಗೆ ಇನ್ನು ಕೇವಲ ಎರಡು ದಿನ ಬಾಕಿ ಇತ್ತು. ಮದುವೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳು ಮುಗಿದಿದ್ದವು. ಉಳಿದಿದ್ದು ತಾಳಿ ಕಟ್ಟುವುದೊಂದೇ. ಅಂಥ ಹೊತ್ತಲ್ಲೇ ಯುವತಿಯೊಬ್ಬಳು ತನ್ನ ಭಾವಿ ಗಂಡನ ಮನೆಯಲ್ಲೇ ಸಾವಿಗೆ (Bride Ends life) ಶರಣಾಗಿದ್ದಾಳೆ. ಆಕೆ ಜಾತಿ ವೈಷಮ್ಯಕ್ಕೆ (Caste revenge) ಬಲಿಯಾದಳೇ? ಗಂಡನ ಮನೆಯವರೇ ಕೊಂದು ಹಾಕಿದರು ಎಂಬ ಆಕೆಯ ತಾಯಿ ಮನೆಯವರ ಆರೋಪ ನಿಜವೇ? ಜಾತಿಯ ಕಾರಣಕ್ಕಾಗಿ ಮಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಆಕೆಯೊಬ್ಬಳನ್ನೇ ವರನ ಮನೆಗೆ ಕಳುಹಿಸಿಕೊಟ್ಟು ತಾವು ದೂರದಿಂದಲೇ ಆಶೀರ್ವಾದ ಮಾಡಲು ನಿರ್ಧರಿಸಿದ್ದೇ ತಪ್ಪಾಯಿತಾ? ಹುಡುಗಿಯ ಮನೆಯವರು ಯಾರೂ ಮದುವೆಗೆ ಬರಬಾರದು ಎಂಬ ಹುಡುಗನ ಕಡೆಯವರ ಆಗ್ರಹ ಆಕೆಯ ಬಾಳಿಗೆ ಕುತ್ತಾಯಿತಾ?
ಇಂಥ ಹಲವು ಪ್ರಶ್ನೆಗಳನ್ನು ಒಳಗೊಂಡ ದಾರುಣ ಸಾವು ಸಂಭವಿಸಿದ್ದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂನಲ್ಲಿ. ಮೃತಪಟ್ಟ ಯುವತಿಯ ಹೆಸರು ಐಶ್ವರ್ಯ. ಸೌಂದರ್ಯದ ಖನಿಯಾಗಿದ್ದ ಆಕೆಗೆ ಇನ್ನೂ ಕೇವಲ ಎರಡು ದಿನದಲ್ಲಿ ಮದುವೆ ನಡೆಯುವುದಕ್ಕಿತ್ತು. ಆದರೆ, ಹುಡುಗನ ಮನೆಯಲ್ಲೇ ಆಕೆಯ ಕೊನೆಯ ಉಸಿರು ನಿಂತಿದೆ.
ಐಶ್ವರ್ಯಗೆ ಮದುವೆ ನಿಶ್ಚಯವಾಗಿದ್ದು ಅಶೋಕ್ ಕುಮಾರ್ ಎಂಬ ಹುಡುಗನ ಜತೆ. ಅವರಿಬ್ಬರೂ ಬಾಲ್ಯದಿಂದಲೇ ಕ್ಲಾಸ್ಮೇಟ್ಸ್. ಪ್ರೀತಿಗಿಂತಲೂ ಹೆಚ್ಚಾದ ಬಾಂಧವ್ಯವೊಂದು ಅವರ ನಡುವೆ ಇತ್ತು. ಅವರಿಬ್ಬರೂ ಖಾಸಗಿ ಕಂಪನಿಯಲ್ಲಿ ಒಳ್ಳೆಯ ಉದ್ಯೋಗದಲ್ಲೂ ಇದ್ದರು.
ಇಷ್ಟೊಂದು ಅರ್ಥ ಮಾಡಿಕೊಳ್ಳುವಿಕೆ ಇರುವುದರಿಂದ ಮದುವೆಯಾಗೋಣ ಎಂದು ನಿರ್ಧರಿಸಿದರು. ಹತ್ತು ವರ್ಷಗಳ ಪ್ರೀತಿ ಕಂ ಸ್ನೇಹಕ್ಕೆ ತಾಳಿ ಕಟ್ಟಲು ಬಯಸಿದ್ದರು. ಆದರೆ, ಆಗ ಅವರ ಮದುವೆಗೆ ಎದುರಾಗಿದ್ದು ಜಾತಿ. ಅದುವರೆಗೆ ಯಾವ ಹಂತದಲ್ಲೂ ಅಡ್ಡ ಬಾರದ ಜಾತಿ ಮದುವೆ ವಿಚಾರಕ್ಕೆ ಅಡ್ಡ ಬಂತು. ಐಶ್ವರ್ಯ ಸಾಕಷ್ಟು ಬುದ್ಧಿವಂತೆ ಮತ್ತು ಒಳ್ಳೆಯ ಉದ್ಯೋಗದಲ್ಲಿದ್ದರೂ ಆಕೆ ಪರಿಶಿಷ್ಟ ಜಾತಿಗೆ ಸೇರಿದವಳು ಎಂಬ ಕಾರಣಕ್ಕೆ ಅಶೋಕ್ ಕುಮಾರ್ ಮನೆಯವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದರು. ಯಾಕೆಂದರೆ, ಅಶೋಕ್ ಕುಮಾರ್ ಗೌಂಡರ್ ಜಾತಿಗೆ ಸೇರಿದವರು.
ಮದುವೆಯ ಮಾತುಕತೆಗಳು ಈ ಕಾರಣಕ್ಕಾಗಿ ಮುರಿದು ಬಿದ್ದಾಗ ಐಶ್ವರ್ಯಳ ತಂದೆ ಸುಬ್ರಮಣಿ ಅವರು ಬೇಡ ಮಗಳೇ ಈ ಸಂಬಂಧ. ನಿನ್ನ ವಿದ್ಯೆಗೆ, ನಿನ್ನ ಉದ್ಯೋಗಕ್ಕೆ ಒಳ್ಳೆಯ ಸಂಬಂಧ ಬರುತ್ತದೆ. ಜಾತಿಯ ಕಾರಣಕ್ಕಾಗಿ ತುಚ್ಛೀಕರಿಸುವವರ ಜತೆ ಹೇಗೆ ಬದುಕುತ್ತೀಯಾ ಎಂದು ಕೇಳಿದ್ದರು. ಆದರೆ, ಐಶ್ವರ್ಯಗೆ ಎಲ್ಲರಿಗಿಂತ ಹೆಚ್ಚಾಗಿ ಅಶೋಕ್ ಕುಮಾರ್ ಮೇಲೆ ನಂಬಿಕೆ ಇತ್ತು. ಯಾರು ಕೈಬಿಟ್ಟರೂ ಅವನೊಬ್ಬ ಆಧರಿಸಿ ನಿಲ್ಲುತ್ತಾನೆ ಎನ್ನುವ ನಂಬಿಕೆ ಇತ್ತು. ಆ ಕಾರಣಕ್ಕಾಗಿ ಮನೆಯವರನ್ನು ಹಠ ಮಾಡಿ ಒಪ್ಪಿಸಿದ್ದಳು ಐಶ್ವರ್ಯ.
ಕೊನೆಗೆ ಐಶ್ವರ್ಯಳ ತಂದೆ ಮದುವೆಯಾಗಲು ಒಪ್ಪಿದರು. ಆದರೆ, ಅಶೋಕ್ ಕುಮಾರ್ ಗೌಂಡರ್ ಅವರ ಕುಟುಂಬ ದೊಡ್ಡದೊಂದು ಷರತ್ತನ್ನು ವಿಧಿಸಿತ್ತು. ಅದೇನೆಂದರೆ, ನಾವು ಮದುವೆ ಮಾಡಿಕೊಳ್ಳುತ್ತಿರುವುದು ಐಶ್ವರ್ಯಳನ್ನು ಮಾತ್ರ. ನಮಗೆ ಬೇಕಾಗಿರುವುದು ಆಕೆ ಮಾತ್ರ. ಸಂಬಂಧವಾಯಿತು ಎಂಬ ಕಾರಣಕ್ಕಾಗಿ ನಿಮ್ಮ ಮನೆಯವರು ನಮ್ಮ ಜತೆ ಬೆರೆಯಲು ಮುಂದಾಗಬಾರದು ಎಂದರು. ಅದಕ್ಕೂ ಐಶ್ವರ್ಯ ಮನೆಯವರು ಒಪ್ಪಿದರು. ಕೊನೆಗೆ ನೀವ್ಯಾರು ಮದುವೆಗೂ ಬರುವಂತಿಲ್ಲ ಎಂದು ತಾಕೀತು ಮಾಡಿದರು. ಐಶ್ವರ್ಯ ತಂದೆ ಸುಬ್ರಮಣಿ ಅವರು ಮಗಳ ಮದುವೆಗೇ ಹೋಗಬಾರದು ಎಂದರೆ ಹೇಗೆ ಒಮ್ಮೆ ಕೇಳಿಕೊಂಡರಾದರೂ ಕೊನೆಗೆ ಮಗಳಿಗೆ ಒಳ್ಳೆಯದಾಗಬೇಕು ಎಂಬ ಒಂದೇ ಕಾರಣಕ್ಕೆ ಆಯಿತು… ಮದುವೆಗೆ ಬರೋದಿಲ್ಲ ಎಂದು ಹೇಳಿಬಿಟ್ಟಿದ್ದರು.
ಮೂರು ದಿನ ಮೊದಲೇ ಐಶ್ವರ್ಯ ಒಬ್ಬಳೇ ಹೋಗಿದ್ದಳು
ಹುಡುಗನ ಮನೆಯವರ ಷರತ್ತಿನಂತೆ ಐಶ್ವರ್ಯ ಮೂರು ದಿನದ ಮೊದಲು ಒಬ್ಬಳೇ ಆಗಿ ವರನ ಮನೆಗೆ ಹೋಗಿದ್ದಳು. ಮದುವೆ ಮನೆಯಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಆಕೆ ಭಾಗಿಯಾಗಿದ್ದಳು. ಅದಾದ ಬಳಿಕ ಆಕೆಯ ಶವ ಅದೇ ವರನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು.
ಎರಡು ಗಂಟೆ ಬಳಿಕ ಸಾವಿನ ಮಾಹಿತಿ ಕೊಟ್ರು
ಈ ನಡುವೆ, ಕೆಳ ಜಾತಿಯವರು ಎಂಬ ಕಾರಣಕ್ಕೆ ಮಗಳನ್ನು ಕೊಂದಿದ್ದಾರೆ ಎಂದು ಯುವತಿಯ ತಂದೆ ಸುಬ್ರಮಣಿ ಆರೋಪಿಸಿದರು.
ʻʻನಮ್ಮ ಕುಟುಂಬದವರು ಮದುವೆಗೆ ಬರಬಾದರು ಅಂತ ಹುಡುಗನ ಕಡೆಯವರು ಷರತ್ತು ವಿಧಿಸಿದ್ದರು. ಅದಕ್ಕೂ ಒಪ್ಪಿ ಹುಡುಗನ ಮನೆಗೆ ಯುವತಿಯನ್ನಷ್ಟೇ ಕಳುಹಿಸಿದ್ದೆವು. ಒಬ್ಬಳೇ ಬಂದಿದ್ದಾಳ ಅಂತ ಪ್ಲಾನ್ ಮಾಡಿ ಕೊಲೆ ಮಾಡಲಾಗಿದೆʼʼ ಎಂದು ಪೋಷಕರು ಆರೋಪ ಮಾಡಿದ್ದಾರೆ.
ಇದನ್ನೂ ಓದಿ : Electricuted : ರಸ್ತೆಯಲ್ಲಿ ಬಿದ್ದ ವಿದ್ಯುತ್ ತಂತಿ ಮೆಟ್ಟಿ ತಾಯಿ-ಮಗು ಸುಟ್ಟು ಕರಕಲು ಭಯಾನಕ ವಿಡಿಯೊ
ಹುಡುಗ ಹುಡುಗಿ ಏಳೆಂದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರಾದರೂ ನಮಗೂ ಅವರಿಗೂ ಹೊಂದಾಣಿಕೆಯಾಗೊಲ್ಲ ಅನ್ನುವುದು ಮೊದಲೇ ಗೊತ್ತಿತ್ತು. ಮದುವೆ ಆಗೋದು ಬೇಡ ಅಮ್ಮ ಅಂತ ನನ್ನ ಮಗಳಿಗೆ ಹೇಳಿದ್ದೆ. ನಮ್ಮ ಸಂಪ್ರದಾಯದಂತೆ ಮದುವೆ ಮಾಡಿಕೊಳ್ತೇವೆ ಅಂತ ಶಾಸ್ತ್ರಕ್ಕೆ ಕರ್ಕೊಂಡು ಹೋದರು. ನಾವು ಮಗಳ ಪ್ರೀತಿ ಮುಖ್ಯ ಅಂತ ಒಪ್ಪಿಕೊಂಡಿದ್ದೆವು. ಘಟನೆ ನಡೆದ ಎರಡು ಗಂಟೆ ಬಳಿಕ ನನಗೆ ಫೋನ್ ಮಾಡಿ ಈ ರೀತಿ ಆಗಿದೆ ಅಂತ ಹೇಳಿದರು ಎಂದು ಸುಬ್ರಮಣಿ ಹೇಳಿದರು.
ಅವರೇ ಮೂರ್ನಾಲ್ಕು ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದಾರೆ, ಆದ್ರೆ ಜೀವ ಉಳಿದಿಲ್ಲ. ನನ್ನ ಮಗಳು ಗಟ್ಟಿಗಿತ್ತಿ. ಆತ್ಮಹತ್ಯೆ ಮಾಡಿಕೊಳ್ಳೊಳಲ್ಲ. ಇದರ ಬಗ್ಗೆ ಸರಿಯಾಗಿ ತನಿಖೆಯಾಗಬೇಕಿದೆ ಎಂದು ಹೇಳಿದ್ದಾರೆ ತಂದೆ.
ಯುವತಿ ಆತ್ಮಹತ್ಯೆಗೆ ಯುವಕನ ಕುಟುಂಬಸ್ಥರೇ ಪ್ರಚೋದನೆ ಮಾಡಿದ್ದಾರೆ. ಐಶ್ವರ್ಯ ಕುತ್ತಿಗೆಯ ಭಾಗದಲ್ಲಿ ಹಗ್ಗದಿಂದ ಕಟ್ಟಿರೋ ಕಲೆ ಇದೆ. ಒದೊಂದು ಪಕ್ಕಾ ಕೊಲೆ ಅಂತ ಯುವತಿ ಪೋಷಕರು ದೂರು ನೀಡಿದ್ದಾರೆ. ಹೊಸಪೇಟೆಯ ಟಿಬಿ ಡ್ಯಾಂ ಪೊಲೀಸ್ ಠಾಣೆಯಲ್ಲಿ ಯುವತಿ ಪೋಷಕರಿಂದ ದೂರು ದಾಖಲಾಗಿದೆ.