Site icon Vistara News

ದಾದಾಪೀರ್‌ ಜೈಮನ್‌, ತಮ್ಮಣ್ಣ ಬೀಗಾರಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ

award

ವಿಜಯನಗರ: ಕೇಂದ್ರ ಸಾಹಿತ್ಯ ಅಕಾಡೆಮಿಯ 2022ರ ಯುವ ಸಾಹಿತ್ಯ ಪ್ರಶಸ್ತಿಗೆ ದಾದಾಪೀರ್‌ ಜೈಮನ್‌ ಹಾಗೂ ಬಾಲ ಸಾಹಿತ್ಯ ಪ್ರಶಸ್ತಿಗೆ ತಮ್ಮಣ್ಣ ಬೀಗಾರ ಅವರು ಪಾತ್ರರಾಗಿದ್ದಾರೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ದಾದಾಪೀರ್ ಜೈಮನ್ ಅವರು ಯುವ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದು, ಅವರ ‘ನೀಲಕುರಿಂಜಿ’ ಕಥಾ ಸಂಕಲನಕ್ಕೆ ಪ್ರಶಸ್ತಿ ದೊರೆತಿದೆ. ಇವರ ʼಪರ್ದಾ ಮತ್ತು ಪಾಲಿಗಮಿʼ ಅನುವಾದ ಕೃತಿಯೂ ಜನಪ್ರಿಯವಾಗಿದೆ. ಶಿರಸಿ ಸಿದ್ದಾಪುರದ ತಮ್ಮಣ್ಣ ಬೀಗಾರ ಅವರ ‘ಬಾವಲಿ ಗುಹೆ’ ಮಕ್ಕಳ ಕಾದಂಬರಿಗೆ ಬಾಲ ಸಾಹಿತ್ಯ ಪ್ರಶಸ್ತಿ ಸಂದಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ನೀಡುವ ಈ ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ನಗದು ಹಾಗೂ ಸನ್ಮಾನವನ್ನು ಒಳಗೊಂಡಿರುತ್ತದೆ. ದಾದಾಪೀರ್ ಅವರ ʼನೀಲಕುರಿಂಜಿ’ಯನ್ನು ರಾಯಚೂರು ಜಿಲ್ಹೆಯ ಕೆ.ಗುಡುದಿನ್ನಿಯ ವೈಷ್ಣವಿ ಪ್ರಕಾಶನ ಹಾಗೂ ʼಬಾವಲಿ ಗುಹೆ’ಯನ್ನು ಬೆಂಗಳೂರಿನ ಅಭಿನವ ಪ್ರಕಾಶನ ಪ್ರಕಟಿಸಿವೆ.

ಯುವ ಸಾಹಿತ್ಯ ಪ್ರಶಸ್ತಿಯ ಜ್ಯೂರಿಗಳಾಗಿ ಸ. ಉಷಾ, ನಗರಗೆರೆ ರಮೇಶ್ ಹಾಗೂ ಎನ್. ಎಸ್. ಗುಂಡೂರ ಕೆಲಸ ನಿರ್ವಹಿಸಿದ್ದರೆ ಬಾಲ ಸಾಹಿತ್ಯ ಪ್ರಶಸ್ತಿಗೆ ಶಿವಲಿಂಗಪ್ಪ ಹಂದಿಹಾಳು, ಲೋಹಿತ್ ನಾಯ್ಕರ್ ಹಾಗೂ ಎಂ. ಎಚ್. ನಾಗರಾಜ್ ಜ್ಯೂರಿಗಳಾಗಿದ್ದರು. ಪುಸ್ತಕ ಆಯ್ಕೆ ಪ್ರಕ್ರಿಯೆಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸಂಯೋಜಕರಾದ ಡಾ. ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ನಡೆಯಿತು. ಪ್ರಶಸ್ತಿಗಳನ್ನು ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ವಿಜೇತರನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ. ಚಂದ್ರಶೇಖರ ಕಂಬಾರ ಅವರು ಅಭಿನಂದಿಸಿದ್ದಾರೆ.

Exit mobile version