Site icon Vistara News

Karnataka Rain : ವಿಜಯನಗರದಲ್ಲಿ ಸಿಡಿಲು ಬಡಿದು ರೈತರಿಬ್ಬರು ಸಾವು

karnataka rain

ವಿಜಯನಗರ: ಸಿಡಿಲು ಬಡಿದು ಇಬ್ಬರು ರೈತರು ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ದಶಮಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಬಣಕಾರ್ ನಾರಪ್ಪ (58), ಬಣಕಾರ್ ಪ್ರಶಾಂತ್ (40) ಮೃತ ದುರ್ದೈವಿ. ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಕವಿತಾ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೊಲದಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಗರಿಬೊಮ್ಮನ ಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಟಿಟಿ ಡ್ರೈವರ್‌ ಚಿಕ್ಕಮಗಳೂರಿನಲ್ಲಿ ಹೃದಯಾಘಾತದಿಂದ ಸಾವು

ಚಿಕ್ಕಮಗಳೂರಿನಲ್ಲಿ ಟಿಟಿ ಡ್ರೈವರ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಟಿಟಿ ಡ್ರೈವರ್ ಚಿಕ್ಕಮಗಳೂರಿಗೆ ಪ್ರವಾಸಿಗರನ್ನು ಕರೆತಂದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವಿನಾಶ್ (25) ಮೃತ ದುರ್ದೈವಿ. ಬೆಂಗಳೂರಿನ ಸೋಮನಹಳ್ಳಿ ಮೂಲದ ಅವಿನಾಶ್ ಮೂರು ವರ್ಷದ ಹಿಂದೆ ಮದುವೆಯಾಗಿದ್ದು, 2 ವರ್ಷದ ಮಗು ಇದೆ. ಪ್ರವಾಸಿಗರನ್ನು ಹೋಂ ಸ್ಟೇ ಬಳಿ ಬಿಟ್ಟು ಬಂದ ಬಳಿಕ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಯಂತಾದ ಕ್ರೀಡಾಂಗಣ

ರಾತ್ರಿ ಸುರಿದ ಮಳೆಗೆ ಕ್ರೀಡಾಂಗಣ ಜಲಾವೃತವಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿನ ತಾಲೂಕು ಮಟ್ಟದ ಕ್ರೀಡಾಂಗಣವು ಕೆರೆಯಂತೆ ಭಾಸವಾಗುತ್ತಿದೆ. ಪ್ರತಿಬಾರಿ ಮಳೆ ಬಂದಾಗ ಕ್ರೀಡಾಂಗಣ ಜಲಾವೃತಗೊಳ್ಳುತ್ತದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಕ್ರೀಡಾಂಗಣವು ಕ್ರೀಡಾ ಇಲಾಖೆ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಅವ್ಯವಸ್ಥೆ ಆಗಿದೆ. ಸರಿಯಾದ ನಿರ್ವಹಣೆ ಇಲ್ಲದೆ ಕ್ರೀಡಾಂಗಣ ಹಾಳಾಗಿದೆ.

ಕೆಸರು ಗದ್ದೆಯಾದ ರಸ್ತೆ

ರಾತ್ರಿ ಸುರಿದ ಭಾರಿ ಮಳೆಗೆ ರಸ್ತೆಯು ಕೆಸರು ಗದ್ದೆಯಾಗಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲಾಗದೆ ನಿವಾಸಿಗಳು ಪರದಾಡುತ್ತಿದ್ದಾರೆ. ಆನೇಕಲ್‌ನ ಚಂದಾಪುರ ಪುರಸಭೆ ವಾರ್ಡ್ ನಂಬರ್ 20ರಲ್ಲಿ ಘಟನೆ ನಡೆದಿದೆ. ಹೆಡ್ ಮಾಸ್ಟರ್ ಲೇಔಟ್‌ಗೆ ಸಂಪರ್ಕ್ ಕಲ್ಪಿಸುವ ರಸ್ತೆ ಇದಾಗಿದೆ. ಮಳೆ ಬಂದಾಗ ರಸ್ತೆ ಜಲಾವೃತಗೊಂಡು ಸಂಪೂರ್ಣ ಕೆಸರುಮಯವಾಗಿದೆ. ನಿತ್ಯ ಓಡಾಡುವ ಜನರಿಗೆ ಈ ರಸ್ತೆಯಲ್ಲಿ ಸಂಚರಿಸುವುದೆ ನರಕಯಾತನೆ ಆಗಿದೆ. ಮಳೆ ಬಂದಾಗ ಕೆಸರು ಗದ್ದೆ, ಬಿಸಿಲಿನ ಸಮಯದಲ್ಲಿ ಧೂಳಿನ ಸಮಸ್ಯೆ ಎದುರಾಗಿದೆ. ರಸ್ತೆಯಲ್ಲಿ ಹಳ್ಳಗುಂಡಿಗಳು ಕಾಣದೆ ಬಿದ್ದು ನಿವಾಸಿಗಳು ಆಸ್ಪತ್ರೆ ಪಾಲಾಗುತ್ತಿದ್ದಾರೆ. ಚಂದಾಪುರ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version